ಬಿಸಿ ರಕ್ತ ಥಂಡಿ ಆಗಿದೆ, ಹೀಗಾಗಿ ಗೌಡರ ಜತೆ ಒಂದಾಗಿದ್ದೇನೆ: ಡಿಕೆಶಿ

By Web DeskFirst Published Mar 27, 2019, 8:50 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಜೆಡಿಎಸ್  ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ಈ ವೇಳೆ ಸಹೋದರರಂತೆ ಕೆಲಸ ಮಾಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 

ರಾಮನಗರ :  ನಾನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ವಿರುದ್ಧ 33 ವರ್ಷಗಳ ಕಾಲ ಯುದ್ಧ ಮಾಡಿದ್ದೇನೆ. ಇನ್ನೆಷ್ಟು ಬಿಸಿ ರಕ್ತ ಇಟ್ಟುಕೊಳ್ಳಲು ಸಾಧ್ಯ. ಈಗ ಅದು ಥಂಡಿಯಾಗಿ, ನಾವೆಲ್ಲ ಅಭಿವೃದ್ಧಿಗಾಗಿ ಒಂದಾಗಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್‌ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಹಳೇ ವೈಷಮ್ಯ ಮರೆತು ಸಹೋದರರಂತೆ ಒಂದಾಗಿ ಕೆಲಸ ಮಾಡಬೇಕು ಎಂದರು. ಇದೇ ವೇಳೆ, ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಭರವಸೆ ನೀಡಿದರು.

ದೇವೇಗೌಡ-ಮೋದಿ ಮಧ್ಯೆ:  

ಜತೆಗೂಡುವುದು ಆರಂಭ. ಜತೆಗೂಡಿ ಯೋಚಿಸುವುದು ಪ್ರಗತಿ. ಜತೆಗೂಡಿ ಕೆಲಸ ಮಾಡಿದರೆ ಅದೇ ಯಶಸ್ಸು. ಇಲ್ಲಿ ನಾವೆಲ್ಲರೂ ಒಂದೇ. ಈ ಚುನಾವಣೆ ಪ್ರಧಾನಿ ಮೋದಿ ಮತ್ತು ದೇವೇಗೌಡರ ನಡುವೆಯೇ ಹೊರತು ಅಶ್ವಥನಾರಾಯಣ್‌ ವಿರುದ್ಧ ಅಲ್ಲ. ಯಾರೊಬ್ಬರೂ ಈ ಚುನಾವಣೆಯಲ್ಲಿ ಏಮಾರಬಾರದು ಎಂದು ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡರಿಗೆ ಇಷ್ಟುವಯಸ್ಸಾದರೂ, ಜನರ ಸೇವೆ ಮಾಡುತ್ತಿದ್ದಾರೆ. ಅವರಿಗೆ ಮೊದಲು ಆರತಿ ಮಾಡಬೇಕು. ಇಲ್ಲಿ ಗೆಲುವಿಗಿಂತ ಸ್ವಾಭಿಮಾನ ಮುಖ್ಯ. ಸಮ್ಮಿಶ್ರ ಸರ್ಕಾರದ ಕೈ ಬಲ ಪಡಿಸುವುದು ಮತದಾರರ ಕೈಯಲ್ಲಿದೆ.

ಬಿಜೆಪಿ ಹಾವಳಿ ನಿಯಂತ್ರಿಸಿರುವ ಕಾರಣಕ್ಕೆ ಉತ್ತರ ಕರ್ನಾಟಕದ ಜನ ನಮಗೆ ಪೂಜೆ ಮಾಡುತ್ತಿದ್ದಾರೆ. ನಾವು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ. ನಾವು ಯಾರಿಗೂ ಮೋಸ ಮಾಡುವ ಕೆಲಸ ಮಾಡಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಸಮಾವೇಶದಲ್ಲಿ ಶಾಸಕ ಮುನಿರತ್ನ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ, ಅಭ್ಯರ್ಥಿ ಡಿ.ಕೆ.ಸುರೇಶ್‌ ಮತ್ತಿತರರು ಪಾಲ್ಗೊಂಡಿದ್ದರು.

ಬಿಜೆಪಿಗರು ಹಿಂದು ಎನ್ನುತ್ತಾರೆ, ನಾವು ಒಂದು ಎನ್ನುತ್ತೇವೆ: ಡಿಕೆಶಿ

ರಾಮನಗರ: ಬಿಜೆಪಿ ಅವರೆಲ್ಲ ಹಿಂದು ಅನ್ನುತ್ತಾರೆ, ನಾವೆಲ್ಲ ಒಂದು ಎನ್ನುತ್ತೇವೆ. ನಮ್ಮ ಮೈಯಲ್ಲೂ ಹರಿಯುತ್ತಿರುವುದು ಕೆಂಪು ರಕ್ತವೇ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಬಿಜೆಪಿಗೆ ಟಾಂಗ್‌ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್‌ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿ, ಈ ಚುನಾವಣೆ ರಾಹುಲ್‌ ಗಾಂಧಿ ಹಾಗೂ ಎಚ್‌.ಡಿ. ದೇವೇಗೌಡ ಅವರಿಗೆ ಪ್ರತಿಷ್ಠೆಯ ವಿಷಯ. ಹೀಗಾಗಿ ಎರಡೂ ಪಕ್ಷಗಳು ಒಂದಾಗಿ ಕೆಲಸ ಮಾಡಬೇಕು. ನಮ್ಮದು ಜಾತ್ಯತೀತ ಪಕ್ಷ. ಬಿಜೆಪಿಯವರು ಹಿಂದು-ಮುಂದು ಎನ್ನುತ್ತಿದ್ದಾರೆ. ನಾವೂ ಹಿಂದು ಅಲ್ಲವೆ ಎಂದು ಪ್ರಶ್ನಿಸಿದರು.

ಅಮೆರಿಕನ್ನರು ಕೆಂಪು ಹಾಗೂ ನಿಗ್ರೋಗಳು ಕಪ್ಪು. ಆದರೆ, ಅವರ ಮೈಯಲ್ಲೂ ಹರಿಯುತ್ತಿರುವುದು ಕೆಂಪು ರಕ್ತ ಆಲ್ಲವೇ. ಇನ್ನು ಬೆವರಿದಾಗ ಉಪ್ಪು ಬಿಟ್ಟು, ಏನು ಸಕ್ಕರೆ ಬರುತ್ತಾ ಎಂದು ಡಿಕೆಶಿ ವ್ಯಂಗ್ಯವಾಡಿದರು.

click me!