ಹೈಕಮಾಂಡ್ ದಾಳ! ತೇಜಸ್ವಿಗೆ ಟಿಕೆಟ್‌ ಸಿಕ್ಕಿದ್ದೇಕೆ, ತೇಜಸ್ವಿನಿಗೆ ತಪ್ಪಿದ್ದೇಕೆ?: 5 ಕಾರಣಗಳು!

By Web DeskFirst Published Mar 27, 2019, 8:35 AM IST
Highlights

ತೇಜಸ್ವಿಗೆ ಟಿಕೆಟ್‌ ಸಿಕ್ಕಿದ್ದೇಕೆ, ತೇಜಸ್ವಿನಿಗೆ ತಪ್ಪಿದ್ದೇಕೆ?| ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ನಾಯಕರಿಗೇ ಶಾಕ್‌ ಕೊಟ್ಟ ವರಿಷ್ಠರು| ಕಡೇ ಕ್ಷಣದಲ್ಲಿ ಹೈಕಮಾಂಡ್‌ ದಾಳ

ಬೆಂಗಳೂರು[ಮಾ.27]: ಕೊನೆಯ ಕ್ಷಣದಲ್ಲಿ ಯಾರೂ ನಿರೀಕ್ಷಿಸದೇ ಇದ್ದ ತೇಜಸ್ವಿ ಸೂರ್ಯ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಬಿಜೆಪಿ ವರಿಷ್ಠರು ಉರುಳಿಸಿರುವ ದಾಳ ಪಕ್ಷದಲ್ಲಿ ಸಾಕಷ್ಟುಸದ್ದು ಮಾಡುತ್ತಿದೆ.

ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್‌ ಅವರು ಈ ಕ್ಷೇತ್ರವನ್ನು ಆರು ಬಾರಿ ಸತತವಾಗಿ ಪ್ರತಿನಿಧಿಸಿದ್ದರು. ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಅವರೇನು ಪಕ್ಷಕ್ಕೆ ಹೊಸಬರಲ್ಲ. ವಿದ್ಯಾರ್ಥಿ ದೆಸೆಯಿಂದಲೂ ಬಿಜೆಪಿಯ ಸಹೋದರ ಸಂಸ್ಥೆಯಾಗಿರುವ ಎಬಿವಿಪಿಯಲ್ಲಿ ಕೆಲಸ ಮಾಡಿದವರು. ನಂತರ ಅನಂತಕುಮಾರ್‌ ಜತೆಗೂಡಿ ಬಿಜೆಪಿಯನ್ನು ಕಟ್ಟಿಬೆಳೆಸುವಲ್ಲಿ ತಮ್ಮದೇ ಆದ ಸೀಮಿತ ಪಾತ್ರ ನಿರ್ವಹಿಸಿದವರು.

ಅನಂತಕುಮಾರ್‌ ಅವರ ಅಕಾಲಿಕ ನಿಧನದ ನಂತರ ಬೆಂಗಳೂರು ದಕ್ಷಿಣದಿಂದ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಮೂಡುವ ಮೊದಲೇ ರಾಜ್ಯ ಬಿಜೆಪಿಯ ಎಲ್ಲ ಹಂತದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮೂಡಿದ ಹೆಸರು ಅವರ ಪತ್ನಿ ತೇಜಸ್ವಿನಿ ಅವರದ್ದು. ಆ ಕ್ಷೇತ್ರದಿಂದ ಮತ್ತೊಬ್ಬ ಅಭ್ಯರ್ಥಿ ಕಣಕ್ಕಿಳಿಯಬಹುದು ಎಂಬುದನ್ನು ಪಕ್ಷದ ಯಾರೊಬ್ಬರೂ ಊಹಿಸಿರಲಿಲ್ಲ.

ಹೀಗಾಗಿಯೇ ಇತರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕೂಡ ಈ ಬಾರಿಯೂ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಬಿಜೆಪಿಯಿಂದ ವಶಪಡಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ನಿಲವಿಗೆ ಬಂದಿದ್ದರು. ಆದರೆ, ನಾಮಪತ್ರ ಸಲ್ಲಿಸುವ ಕೊನೆಯ ಅವಧಿಯ ಹಿಂದಿನ ದಿನವಾದ ಸೋಮವಾರ ತಡರಾತ್ರಿ ತೇಜಸ್ವಿನಿ ಅವರ ಬದಲು ಪಕ್ಷದ ಯುವ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂಬ ಸುದ್ದಿ ಹೊರಬಿದ್ದರೂ ಅದನ್ನು ನಂಬುವ ಪರಿಸ್ಥಿತಿ ಇರಲಿಲ್ಲ. ಅಷ್ಟರ ಮಟ್ಟಿಗೆ ತೇಜಸ್ವಿನಿ ಅವರ ಹೆಸರು ಪ್ರಚಲಿತವಾಗಿತ್ತು.

1. ಕುಟುಂಬ ರಾಜಕಾರಣಕ್ಕೆ ಬ್ರೇಕ್‌

ಕುಟುಂಬ ರಾಜಕಾರಣಕ್ಕೆ ಹಂತ ಹಂತವಾಗಿ ಬ್ರೇಕ್‌ ಹಾಕಬೇಕು ಎಂಬ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಸಂಘ ಪರಿವಾರದ ಮುಖಂಡರ ದೂರದೃಷ್ಟಿಯ ಪರಿಣಾಮ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ತಪ್ಪಿದೆ ಎನ್ನಲಾಗುತ್ತಿದೆ. ಅಂದರೆ, ಯಾವುದೇ ಒಂದು ಕ್ಷೇತ್ರ ಒಂದು ಕುಟುಂಬಕ್ಕೆ ಮಾತ್ರ ಸೀಮಿತ ಎನ್ನವಂತಾಗಬಾರದು. ಅಲ್ಲಿ ದುಡಿದ ಪಕ್ಷದ ಇತರ ಮುಖಂಡರು ಹಾಗೂ ಕಾರ್ಯಕರ್ತರಿಗೂ ಚುನಾವಣಾ ರಾಜಕಾರಣಕ್ಕೆ ಅವಕಾಶ ಸಿಗಬೇಕು ಎಂಬ ಚಿಂತನೆಯನ್ನು ರಾಷ್ಟ್ರೀಯ ನಾಯಕರು ಹೊಂದಿದ್ದಾರೆ.

2. ಪ್ರಖರ ಹಿಂದುತ್ವವಾದಿಗಳಿಗೆ ಅವಕಾಶ

ಮೇಲಾಗಿ ಪ್ರಖರ ಹಿಂದುತ್ವವಾದಿಗಳಿಗೆ ಚುನಾವಣೆಯಲ್ಲಿ ಅವಕಾಶ ಸಿಗಬೇಕು. ಅಂಥವರನ್ನು ಗುರುತಿಸಿ ಶಾಸನ ಸಭೆಗಳಿಗೆ ಆಯ್ಕೆ ಮಾಡುವಂತಾಗಬೇಕು. ಇದರಿಂದ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಸಿದ್ಧಾಂತ ಅನುಷ್ಠಾನಗೊಳಿಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ತೇಜಸ್ವಿ ಸೂರ್ಯ ಅವರನ್ನು ಗುರುತಿಸಲಾಗಿದೆ. ಜತೆಗೆ ವಾಕ್ಚತುರ ಹಾಗೂ ಯುವಕರಾಗಿರುವುದರಿಂದ ಮುಂದಿನ ದಿನಗಳಲ್ಲಿ ದೇಶಾದ್ಯಂತ ಯುವ ಪೀಳಿಗೆಯನ್ನು ಸೆಳೆಯುವಲ್ಲಿ ನೆರವಾಗುತ್ತದೆ. ಇಂಥವರನ್ನು ದೇಶದ ವಿವಿಧ ಭಾಗಗಳಿಂದ ಹೆಕ್ಕಿ ತೆಗೆಯಬೇಕು ಎಂಬ ಚಿಂತನೆಯನ್ನು ಪಕ್ಷ ಹಾಗೂ ಸಂಘ ಪರಿವಾರದ ಅನುಷ್ಠಾನಗೊಳಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

3. ಅನುಕಂಪದ ಅಲೆ ವರ್ಸಸ್‌ ಮೋದಿ ಅಲೆ

ಮೇಲಾಗಿ ದೇಶಾದ್ಯಂತ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಬೀಸುತ್ತಿದೆ. ಆ ಅಲೆಯಲ್ಲಿ ಅನಂತಕುಮಾರ್‌ ಅವರ ನಿಧನದ ಅನುಕಂಪದಿಂದ ಪಕ್ಷ ಗೆಲ್ಲುವುದು ಬೇಕಾಗಿಲ್ಲ. ಮೋದಿ ಅಲೆಯಲ್ಲಿ ಸಾಮಾನ್ಯ ಮುಖಂಡರೊಬ್ಬರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಬಹುದು ಎಂಬುದನ್ನು ನಿರೂಪಿಸುವ ಉದ್ದೇಶವೂ ಇದರ ಹಿಂದೆ ಅಡಗಿದೆ ಎನ್ನಲಾಗಿದೆ.

4. ಹಳೆಯ ಸೇಡು ಕಾರಣ?

ಜೊತೆಗೆ ಪ್ರಧಾನಿ ಮೋದಿ ಅವರು ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ತಪ್ಪಿಸುವ ಮೂಲಕ ಅನಂತಕುಮಾರ್‌ ಅವರ ವಿರುದ್ಧ ಇದ್ದ ಹಳೆಯ ಸೇಡನ್ನು ತೀರಿಸಿಕೊಂಡಿದ್ದಾರೆ ಎಂಬ ಮಾತೂ ಇದೀಗ ಬಿಜೆಪಿ ಪಾಳೆಯದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಮೋದಿ ಅವರು ಹಿಂದೆ ಪಕ್ಷದ ಸಂಘಟನೆಯಲ್ಲಿದ್ದ ವೇಳೆ ಆಡ್ವಾಣಿ ಅವರ ಮಾನಸಪುತ್ರನಂತಿದ್ದ ಅನಂತಕುಮಾರ್‌ ಅವರೊಂದಿಗೆ ಭಿನ್ನಾಭಿಪ್ರಾಯವಿತ್ತು. ಮೋದಿ ಅವರನ್ನು ತುಳಿಯುವ ಪ್ರಯತ್ನವನ್ನು ಅನಂತಕುಮಾರ್‌ ನಡೆಸಿದ್ದರು ಎಂಬ ಮಾತೂ ಇದೆ. ಇದೇ ಕಾರಣಕ್ಕಾಗಿ ಮೋದಿ ಅವರು ಪ್ರಧಾನಿಯಾಗಿ ನಂತರ ಅನಂತಕುಮಾರ್‌ ಅವರಿಗೆ ಪ್ರಮುಖವಾದ ಖಾತೆಯನ್ನು ನೀಡಿರಲಿಲ್ಲ. ನಂತರದ ದಿನಗಳಲ್ಲಿ ಅವರ ಕಾರ್ಯವೈಖರಿಯಿಂದಾಗಿ ಪ್ರಮುಖ ಖಾತೆ ಲಭಿಸಿತು. ಆದರೆ, ಮೋದಿ ಅವರ ಸಿಟ್ಟು ಕಡಮೆಯಾಗಿರಲಿಲ್ಲ ಎಂದೇ ಹೇಳಲಾಗುತ್ತದೆ.

5. ಸಂತೋಷ್‌ ಪಾತ್ರ

ಇದೆಲ್ಲದರ ನಡುವೆ ರಾಜ್ಯದವರೇ ಆದ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಅನಂತಕುಮಾರ್‌ ಅವರಿದ್ದಾಗ ಸಂತೋಷ್‌ ಅವರೊಂದಿಗೂ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ, ಸಂತೋಷ್‌ ಅವರೂ ಅನಂತಕುಮಾರ್‌ ಪತ್ನಿ ತೇಜಸ್ವಿನಿ ಟಿಕೆಟ್‌ ತಪ್ಪಿಸಲು ತಂತ್ರ ರೂಪಿಸಿ ತೇಜಸ್ವಿ ಸೂರ್ಯ ಅವರಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎನ್ನಲಾಗಿದೆ.

click me!