ಬೆಂಗಳೂರು ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿ ಚಕ್ರವರ್ತಿ ಸೂಲಿಬೆಲೆ..?

By Web DeskFirst Published Mar 25, 2019, 7:55 AM IST
Highlights

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೊದಲ ಹಂತದ ಚುನಾವಣೆ ನಾಮಪತ್ರ ಸಲ್ಲಿಕೆಗೆ ಮಾರ್ಚ್ 26 ಕೊನೆಯ ದಿನವಾಗಿದ್ದು, ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾತ್ರ ಇನ್ನೂ ನಿಗೂಢವಾಗಿದ್ದಾರೆ. 

ಬೆಂಗಳೂರು :  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎಂಬ ಗೊಂದಲ ಮುಂದುವರಿದಿದ್ದು , ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಗುತ್ತದೆಯೊ ಅಥವಾ ಇಲ್ಲವೊ ಎಂಬ ಪ್ರಶ್ನೆಗೆ ಸೋಮವಾರ ಉತ್ತರ ಲಭಿಸುವ ಸಾಧ್ಯತೆಯಿದೆ. 

ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಹಾಗೂ ಹಿಂದುತ್ವದ ಪ್ರಖರ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಹೆಸರು ಗಳು ಬಲವಾಗಿ ಕೇಳಿಬಂದಿವೆ. ಈ ಪೈಕಿ ತೇಜಸ್ವಿ ಸೂರ್ಯ ಹೆಸರು ಮುಂಚೂಣಿ ಯಲ್ಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 

ಆದರೆ, ಕಾಂಗ್ರೆಸ್‌ನಿಂದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿ ಸಿರುವುದರಿಂದ ಅವರ ವಿರುದ್ಧ ಹೋರಾಡಲು ಬಿಜೆಪಿಯಿಂದ ತೇಜಸ್ವಿನಿ ಅನಂತಕುಮಾರ್ ಅವರೇ ಸಮರ್ಥರು ಎಂಬ ವಾದ ಬಲವಾಗಿಯೇ ಪಕ್ಷದ ವರಿಷ್ಠರಿಗೆ ತಲುಪಿದೆ. ಹೀಗಾಗಿ, ಕೊನೆಯ ಕ್ಷಣದಲ್ಲಿ ತೇಜಸ್ವಿನಿ ಅವರಿಗೇ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂಬ ಮಾತೂ ಕೇಳಿಬಂದಿದೆ. 

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ವದಂತಿ ಇದ್ದರೂ ಅದು ಅಂತಿಮವಾಗಿ ವದಂತಿಯಾಗಿಯೇ ಉಳಿಯುವ ಸಾಧ್ಯತೆಯಿದೆ. ಇದೇ ವೇಳೆ ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ, ರಾಯಚೂರು ಹಾಗೂ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಗಳು ಅಂತಿಮಗೊಳ್ಳಬೇಕಿದೆ.

click me!