
ಬೆಂಗಳೂರು : ‘ಸುಮಲತಾ ಅವರ ಭಾಷಣದಲ್ಲಿ ಯಾವುದೇ ನೋವಿನ ಛಾಯೆಯಿಲ್ಲ. ಮುಖದಲ್ಲಂತೂ ನೋವು ಕಾಣ್ತಿಲ್ಲ. ಆಕ್ಷನ್ ಮಾಡಿ ಏನ್ ಕೊಡ್ತಾರೆ ಏನ್ ಕೊಡ್ತಾರೆ ನಿಮಗೆ ಅಂತ ಕೇಳುವ ಅಭ್ಯರ್ಥಿ ಹಣ ಕೊಟ್ಟರೆ ಪಡೆದು ಮಜಾ ಮಾಡಿ ಎಂದು ರೈತ ಕುಟುಂಬಗಳಿಗೆ ಹೇಳುವ ಈ ಮಹಿಳೆಗೆ ತಾಯಿ ಹೃದಯವಿದೆಯೇ?’
-ಮಂಡ್ಯದ ಅಭ್ಯರ್ಥಿ ಸುಮಲತಾ ವಿರುದ್ಧ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ ಬಗೆಯಿದು. ನಗರದಲ್ಲಿ ಬುಧವಾರ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಸುಮಲತಾ ಬಿಜೆಪಿ ಬೆಂಬಲಿತ ಅಭ್ಯರ್ಥಿಯೇ ಹೊರತು ಪಕ್ಷೇತರ ಅಭ್ಯರ್ಥಿ ಅಲ್ಲ ಎಂದು ಆರೋಪಿಸಿದರು. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಮಜಾ ಮಾಡಲು, ಶೋಕಿ ಮಾಡಲು ನಾನು ನೆರವು ನೀಡಲಿಲ್ಲ.
ಕುಟುಂಬದ ಬಡತನ ಕಂಡು ಸಹಾಯ ಮಾಡಿದ್ದೇವೆ. ಆದರೆ ಇವರ ಸಂಸ್ಕೃತಿಯೇ ಬೇರೆ. ದುಡ್ಡು ಪಡೆದು ಮಜಾ ಮಾಡುವುದು ಎಂದು ವ್ಯಂಗ್ಯ ಮಾಡಿದ ಅವರು, ಶ್ರಮಜೀವನ ನಡೆಸುವ ಮಂಡ್ಯ ಜಿಲ್ಲೆಯ ಜನರ ಹತ್ತಿರ ಇವರ ಡ್ರಾಮಾ ನಡೆಯೊಲ್ಲ ಎಂದರು.
ಕಳ್ಳ ಎತ್ತು ಅಂದಿಲ್ಲ: ಇದೇವೇಳೆ ತಾನು ಯಾರನ್ನೂ ಕಳ್ಳ ಎತ್ತುಗಳೆಂದು ಹೇಳಿಲ್ಲ . ಜೋಡೆತ್ತು ಅಂತ ನಾನೇನು ಕರೆದಿಲ್ಲ, ಅವರೇ ಹೇಳಿ ಕೊಂಡಿದ್ದಾರೆ. ನಾಲ್ಕು ಬಾರಿಯೂ ರಾತ್ರಿ ವೇಳೆ ಬೆಳೆ ತಿನ್ನೋ ಎತ್ತುಗಳು ಅಂತ ಹೇಳಿದ್ದೀನಿ. ಕಳ್ಳೆತ್ತು ಎಂದು ಹೇಳಿಲ್ಲ ಎಂದರು.
ಕದ್ದಾಲಿಕೆ ತನಿಖೆ ನಡೆಸಲಿ: ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ಸುಮಲತಾ ಆರೋಪಕ್ಕೆ ಉತ್ತರಿಸಿದ ಅವರು, ನಾನೇಕೆ ಫೋನ್ ಕದ್ದಾಲಿಕೆ ಮಾಡಿಸಲಿ? ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಲ್ಲವೇ ಅವರು? ಅವರದ್ದೇ ಕೇಂದ್ರ ಸರ್ಕಾರವಿದೆ. ದೂರು ನೀಡಿ ತನಿಖೆ ಮಾಡಿಸಬಹುದಲ್ಲವೇ? ಎಂದರು.
ಸುಮಲತಾ ಅವರ ನಾಮಪತ್ರ ಸಲ್ಲಿಕೆ ವೇಳೆ ವಿದ್ಯುತ್ ಕಡಿತ ಆಗಿದ್ದರ ಬಗ್ಗೆ ಉತ್ತರಿಸಿದ ಅವರು ಮಾಡಿದ ವಿಚಾರದಲ್ಲಿ ನಾನು ಅಧಿಕಾರಿಗಳನ್ನು ವಿಚಾರಿಸಿದೆ. ಟ್ರಾನ್ಸ್‌ಫಾರ್ಮರ್ ಕೆಟ್ಟು ಹೋಯ್ತು, ಪ್ರಾಬ್ಲಂ ಆಯ್ತು ಅಂತ ಹೇಳಿದ್ದಾರೆ ಪ್ರಧಾನಿ, ಮುಖ್ಯಮಂತ್ರಿಗಳು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ವಿದ್ಯುತ್ ಕಡಿತವಾಗದಂತೆ ಸೂಚನೆ ಕೊಡುವುದು ನಿಯಮಾವಳಿಯಲ್ಲೇ ಇದೆ. ಅದು ಉಲ್ಲಂಘನೆ ಅಲ್ಲ ಎಂದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...