
ನವದೆಹಲಿ : ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅನೇಕ ಶಾಸಕರು ನನ್ನ ಮತ್ತು ಸದಾನಂದ ಗೌಡರ ಸಂಪರ್ಕದಲ್ಲಿದ್ದಾರೆಂದು ತಿಳಿಸಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ನಾವು ರಾಜ್ಯ ಸರ್ಕಾರವನ್ನು ನಾವು ಬೀಳಿಸುವುದಿಲ್ಲ. ಆದರೆ ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇರುವುದಿಲ್ಲ ಎಂದಿದ್ದಾರೆ.
ದೆಹಲಿಯಲ್ಲಿ ಮೇ 12 ಕ್ಕೆ ನಡೆಯಲಿರುವ ಲೋಕಸಭಾ ಚುನಾವಣೆಗೆ ಬಿಜೆಪಿ ಪರ ಮತ ಕೇಳಲು ದೆಹಲಿ ಕರ್ನಾಟಕ ಸಂಘದಲ್ಲಿ ಬಿಜೆಪಿ ಆಯೋಜಿಸಿದ್ದ ದೆಹಲಿ ಕನ್ನಡಿಗರ ಸ್ನೇಹ ಮಿಲನದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಲಾಗಿರುವ ಅನುದಾನವನ್ನು ರಾಜ್ಯ ಸರ್ಕಾರ ಬಳಸಿಕೊಂಡಿಲ್ಲ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದರೂ ಕೂಡ ಬರ ಪರಿಹಾರ ಕಾಮಗಾರಿ ನಡೆದಿಲ್ಲ. ಚುನಾವಣೆ ಸಮಯದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಎಂಬುದು ಟ್ರೋಲ್ ಆಗಿತ್ತು. ಈಗ ಚುನಾವಣೆ ಮುಗಿದ ಬಳಿಕ ಕುಮಾರಸ್ವಾಮಿ ಎಲ್ಲಿದ್ದಿಯಪ್ಪಾ ಎಂದು ಕೇಳುವ ಪರಿಸ್ಥಿತಿ ಉಂಟಾಗಿದೆ ಎಂದು ಲಿಂಬಾವಳಿ ಕುಟುಕಿದರು.
ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡಿ, ಕಾವೇರಿ ವಿವಾದದ ಸಂದರ್ಭದಲ್ಲಿ ಅಂತರ್ಜಲಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಅಫಿಡವಿಟ್ ಹಾಕಿ ಬೆಂಗಳೂರಿಗೆ ನಾಲ್ಕು ಟಿಎಂಸಿ ನೀರು ಸಿಗುವ ಹಾಗೆ ಮೋದಿ ಸರ್ಕಾರ ಪ್ರಯತ್ನಿಸಿತ್ತು. ದೆಹಲಿಯಲ್ಲಿ ಮೆಟ್ರೋ ಸ್ಟೇಷನ್‌ಗೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನು ನಮ್ಮ ಸರ್ಕಾರ ಇಟ್ಟಿದೆ. ರಾಜ್ಯದ ಬಿಜೆಪಿ 24 ಸೀಟ್ ಗೆದ್ದರೂ ಅಚ್ಚರಿಯಿಲ್ಲ ಎಂದು ಸದಾನಂದ ಗೌಡ ಹೇಳಿದರು.
ಉತ್ತರ ಭಾರತದಲ್ಲಿ ನವರಾತ್ರಿಯ ಸಂದರ್ಭದಲ್ಲಿ ರಾವಣನನ್ನು ಹೇಗೆ ದಹನ ಮಾಡುತ್ತಾರೆಯೋ ಅದೇ ರೀತಿ ಮೇ 23ಕ್ಕೆ ಮಹಾಗಠಬಂಧನ್ ಕತೆಯೂ ಆಗುತ್ತದೆ. ಯಾವಾಗಲೂ ಮೋದಿ ಎಂಬ ನೆಲೆಯಲ್ಲಿಯೇ ನಾವು ಮತದಾನ ಮಾಡಬೇಕು ಎಂದು ನಟಿ ಲತಾರಾ ಅನುರಾಧ ಹೇಳಿದರು.
ಚಿತ್ರ ಕಲಾವಿದರಾದ ಸಾಯಿ ಕುಮಾರ್, ಶ್ರುತಿ, ಮಾಳವಿಕ ಅವಿನಾಶ್, ಬಾನ್‌ಚಂದರ್, ತ್ರಿಪುರಾ ನೇನಿ ಪ್ರಸಾದ್, ಗೌತಮ್ ರಾಜ್, ಗೀತಾ ಸಿಂಗ್ ಇದ್ದರು.