ನಿಖಿಲ್‌ ವಿರುದ್ಧ ಮತ್ತೆರಡು FIR ದಾಖಲು

By Web DeskFirst Published Mar 27, 2019, 10:37 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ವಿವಿಧ ಅಭ್ಯರ್ಥಿಗಳಿಂದ ಪ್ರಚಾರ ತೀವ್ರಗೊಂಡಿದೆ. ಇದೇ ವೇಳೆ ಜೆಡಿಎಸ್ ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡೆಸಿದ ಪ್ರಚಾರದ ವೇಳೆ ನಿಯಮ ಉಲ್ಲಂಘನೆಯಾಗಿದ್ದು, ಈ ನಿಟ್ಟಿನಲ್ಲಿ ಮತ್ತೆರಡು ಎಫ್ ಐ ಆರ್ ದಾಖಲಾಗಿದೆ. 

ಮಂಡ್ಯ :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ಕೆ.ನಿಖಿಲ್‌ ನಾಮಪತ್ರ ಸಲ್ಲಿಕೆ ವೇಳೆ ಆಯೋಜಿಸಿದ್ದ ಬೃಹತ್‌ ರ‌್ಯಾಲಿ  ವೇಳೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ನಗರದ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ  ಐದು ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿವೆ.

ರ‌್ಯಾಲಿಯಲ್ಲಿ ಜಿಲ್ಲೆಯ ಸಹಸ್ರಾರು ಜನ ಆಗಮಿಸಿದ್ದಾರೆ. ಇದರಿಂದ ನಗರದಲ್ಲಿ ಗಂಟೆಗಟ್ಟಲೆ ಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು. ಜತೆಗೆ, ಮೆರವಣಿಗೆಯಲ್ಲಿ ಬಿಳಿ ಮತ್ತು ಹಸಿರು ಬಣ್ಣದ ಕಾಗದ ಚೂರುಗಳನ್ನು ಯಂತ್ರದ(ಪೇಪರ್‌ ಬ್ಲಾಸ್ಟ್‌) ಮೂಲಕ ಆಗಸಕ್ಕೆ ಚಿಮ್ಮಿಸಲಾಗುತ್ತಿತ್ತು. ಇದರಿಂದಲೂ ಸಾರ್ವಜನಿಕರಿಗೆ ಅಡಚಣೆಯುಂಟಾಗಿತ್ತು. ಈ ಮೂರು ಪ್ರಕರಣಗಳು ದಾಖಲಾಗಿದ್ದು, ಇದೀಗ ಮತ್ತೆರಡು ಪ್ರಕರಣ ದಾಖಲಾಗಿವೆ. 

  ರ‌್ಯಾಲಿ ಆಗಮಿಸಿದ್ದ ಜನರನ್ನು ಕರೆತಂದಿದ್ದ ಬಹುತೇಕ ವಾಹನಗಳಿಗೆ ಚುನಾವಣಾ ಆಯೋಗದಿಂದ ಪೂರ್ವಾನುಮತಿ ಪಡೆದಿರಲಿಲ್ಲ. ಅಲ್ಲದೆ, ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ವನದಲ್ಲಿ ಸಮಾವೇಶ ನಡೆಸಲು ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌ ಷರತ್ತುಬದ್ಧ ಅನುಮತಿ ಪಡೆದಿದ್ದರು. ಪಾರ್ಕ್ಗೆ ಯಾವುದೇ ರೀತಿಯಲ್ಲಿ ಹಾನಿ ಆಗಬಾರದು. ಹಾನಿಯುಂಟು ಮಾಡಿದರೆ ಸಂಬಂಧಿಸಿದ ಇಲಾಖೆಗೆ ಪರಿಹಾರ ಮೊತ್ತ ಪಾವತಿಸಬೇಕೆಂದು ಸೂಚನೆ ನೀಡಲಾಗಿತ್ತು.

ಆದರೆ, ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಪಾರ್ಕ್ಗೆ ಸಾಕಷ್ಟು ಹಾನಿಯಾಗಿತ್ತು. ಅಲಂಕಾರಿಕ ಸಸ್ಯಗಳು, ಹೂವಿನ ಗಿಡಗಳು, ಹುಲ್ಲುಹಾಸನ್ನು ಜನ ತುಳಿದಿದ್ದರಿಂದ ಹಾಳಾಗಿದ್ದವು. ಹೀಗಾಗಿ ರಾಜಕೀಯ ಕಾರ‍್ಯಕ್ರಮಕ್ಕೆ ಪಾರ್ಕ್ ಬಳಸಲು ಅನುಮತಿ ನೀಡಿದ್ದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪಾರ್ಕ್ಗೆ ಹಾನಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಅಲ್ಲದೆ, ರ‌್ಯಾಲಿಯ ದೃಶ್ಯವನ್ನು ಚಿತ್ರೀಕರಿಸಲು ಡ್ರೋಣ್‌ ಕ್ಯಾಮೆರಾಗಳನ್ನು ಬಳಸುವಂತಿಲ್ಲ ಎಂದು ಮಂಡ್ಯ ಡಿವೈಎಸ್ಪಿ ಆದೇಶವಿದ್ದರೂ 3 ಡ್ರೋಣ್‌ ಕ್ಯಾಮೆರಾ ಬಳಸಲಾಗಿತ್ತು.

click me!