ಲೋಕಸಭಾ ಚುನಾವಣೆ ಖರ್ಚಿಗಾಗಿ ಅಭ್ಯರ್ಥಿಯೋರ್ವರು ತಮ್ಮ ಆಸ್ತಿಯನ್ನೇ ಅಡವಿಟ್ಟಿದ್ದಾರೆ.
ಕೊಪ್ಪಳ : 2004ರಲ್ಲಿ ನಡೆದ ಚುನಾವಣೆಯಲ್ಲಿ ಸಿಂಧನೂರಿನ ಮಾರೆಮ್ಮಾ ಎಂಬುವರು ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಹಣ ಕಟ್ಟುವುದಕ್ಕಾಗಿ ತನ್ನ ಮೈಮೇಲಿನ ಬಂಗಾರವನ್ನೇ ಅಡವಿಟ್ಟಿದ್ದು ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಆಶ್ರಯ ಮನೆ ಸಿಗದಿದ್ದಕ್ಕೆ ಪ್ರತಿಭಟನಾರ್ಥವಾಗಿ ಸ್ಪರ್ಧೆ ಮಾಡಲು ಮುಂದಾಗಿದ್ದ ಆಕೆಯ ಹೋರಾಟಕ್ಕೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು. ಆದರೆ, ಹಾಲಿ ಸಂಸದ ಸಂಗಣ್ಣ ಕರಡಿ ಚುನಾವಣೆಯ ವೆಚ್ಚಕ್ಕಾಗಿ ತಮ್ಮ ಮನೆ ಸೇರಿದಂತೆ ವಿವಿಧ ಆಸ್ತಿಗಳನ್ನು ಅಡವಿಟ್ಟು .39 ಲಕ್ಷ ಸಾಲ ಮಾಡಿದ್ದಾರೆ.
ಇದು ಈಗ ದೊಡ್ಡ ಸದ್ದು ಮಾಡುತ್ತಿದೆ. ಆಸ್ತಿಯನ್ನು ಅಡವಿಟ್ಟದಾಖಲೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹೊಸಪೇಟೆ ಮೂಲದವರೊಬ್ಬರಿಗೆ ಆಸ್ತಿಯನ್ನು ಅಡವಿಟ್ಟು, ಒತ್ತೆ ರಿಜಿಸ್ಟಾರ್ ಸಹ ಮಾಡಿಸಿದ್ದಾರೆ. ಈ ದಾಖಲೆಗಳು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿವೆ.
ಏ.18ರಂದು ಯಡಿಯೂರಪ್ಪ ಅವರು ಚುನಾವಣೆಯ ಪ್ರಚಾರಕ್ಕೆ ಕೊಪ್ಪಳಕ್ಕೆ ಆಗಮಿಸಿದ್ದರು. ಅಂದೇ ಸಂಗಣ್ಣ ಕರಡಿ ಅವರು ನೋಂದಣಿ ಇಲಾಖೆಗೆ ಬೆಳಗ್ಗೆ 8.30ಕ್ಕೆ ಹೋಗಿ, ತಮ್ಮ ಆಸ್ತಿಯನ್ನು ಒತ್ತೆ ಇಟ್ಟಪತ್ರಗಳಿಗೆ ರುಜು ಮಾಡಿದ್ದರು. ಒತ್ತೆ ರಿಜಿಸ್ಟಾರ್ ದಾಖಲೆಗಳ ಪ್ರಕಾರ ಬೆಳಗ್ಗೆ 8.50ಕ್ಕೆ ನೋಂದಣಿಯಾಗಿರುವುದು ಕಂಪ್ಯೂಟರ್ ದಾಖಲೆಯಲ್ಲಿ ನಮೂದಾಗಿದೆ. ಐದು ಎಕರೆ ಭೂಮಿ ಮತ್ತು ಇರುವ ಮನೆ ಸೇರಿದಂತೆ ಇವರಿಗೆ ಸೇರಿದ ನಾನಾ ಆಸ್ತಿಯ 36 ಪುಟಗಳ ದಾಖಲೆಗಳು ಇವೆ. ಇವೆಲ್ಲಕ್ಕೂ ಸಂಗಣ್ಣ ಕರಡಿ ಅವರು ಸಾಮಾನ್ಯರಂತೆ ನೋಂದಣಿ ಇಲಾಖೆಯಲ್ಲಿ ಕುಳಿತು, ಕಂಪ್ಯೂಟರ್ ಮುಂದೆ ಗಣೀಕರಣದ ರುಜು ಮಾಡಿ, ಸಾಲ ಪಡೆದಿದ್ದಾರೆ.
ಜಾಲತಾಣದಲ್ಲಿ ಭಾರೀ ಚರ್ಚೆ: ಸಂಸದ ಸಂಗಣ್ಣ ಕರಡಿ ಅವರು ಚುನಾವಣೆಯ ವೆಚ್ಚಕ್ಕಾಗಿ ಆಸ್ತಿಯನ್ನು ಅಡವಿಟ್ಟಿರುವ ಕುರಿತು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅನೇಕರು ಅಯ್ಯೋ ಪಾಪ ಎಂದರೆ, ಎದುರಾಳಿಗಳು ಇದೆಲ್ಲ ಸತ್ಯವೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.