ಧಾರವಾಡ, ದಾವಣಗೆರೆ ಕೈ ಅಭ್ಯರ್ಥಿ ಪ್ರಕಟ : ಯಾರಿಗೆ ಸಿಕ್ತು ಟಿಕೆಟ್

By Web Desk  |  First Published Apr 3, 2019, 7:22 AM IST

ಭಾರೀ ಕುತೂಹಲ ಕೆರಳಿಸಿದ್ದ ದಾವಣೆಗರೆ ಹಾಗೂ ಧಾರವಾಡಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. 


ಬೆಂಗಳೂರು :  ಭಾರೀ ಕುತೂಹಲ ಕೆರಳಿಸಿದ್ದ ಧಾರವಾಡ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಪಕ್ಷ ಕಡೆಗೂ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿನಯ್‌ ಕುಲಕರ್ಣಿ ಹಾಗೂ ಮೂರು ಬಾರಿಯ ಸಂಸದ ಪ್ರೊ

ಐ.ಜಿ.ಸನದಿ ಅವರಿಬ್ಬರಲ್ಲಿ ಯಾರನ್ನು ಕಣಕ್ಕಿಳಿಸುವುದು ಎಂಬ ಬಗ್ಗೆ ಸುದೀರ್ಘವಾಗಿ ಅಳೆದುತೂಗುವ ಕೆಲಸ ಮಾಡಿದ ಕಾಂಗ್ರೆಸ್‌ ನಾಯಕತ್ವ ಅಂತಿಮವಾಗಿ ವಿನಯ್‌ರನ್ನೇ ಉಮೇದುವಾರರನ್ನಾಗಿ ಘೋಷಿಸಿದೆ. ಇದೇ ವೇಳೆ, ದಾವಣಗೆರೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹೈಕಮಾಂಡ್‌, ಶಾಮನೂರು ಕುಟುಂಬದ ಮಾತಿಗೆ ಬೆಲೆ ನೀಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಅವರಿಗೆ ಟಿಕೆಟ್‌ ನೀಡಿದೆ.

Tap to resize

Latest Videos

ಮಂಗಳವಾರ ಮಧ್ಯರಾತ್ರಿ ಬಳಿಕ ಧಾರವಾಡ ಹಾಗೂ ದಾವಣಗೆರೆ ಅಭ್ಯರ್ಥಿಗಳನ್ನು ಘೋಷಿಸುವುದರೊಂದಿಗೆ ನಾಮಪತ್ರ ಸಲ್ಲಿಕೆ ಮುಕ್ತಾಯಕ್ಕೆ (ಏ.4) ಸುಮಾರು ಒಂದೂವರೆ ದಿನ ಬಾಕಿ ಇರುವಂತೆ ಕಾಂಗ್ರೆಸ್‌ ತನ್ನ ಪಟ್ಟಿಅಂತಿಮಗೊಳಿಸಿದಂತಾಗಿದೆ.

ಶಾಮನೂರು ಸಲಹೆಗೆ ಮಣೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಬೇಕು ಎಂದು ಕಾಂಗ್ರೆಸ್‌ ನಾಯಕತ್ವ ಬಯಸಿತ್ತು. ಹೀಗಾಗಿ ಶಾಮನೂರು ಶಿವಶಂಕರಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಆದರೆ, ತಮಗೆ ವಯಸ್ಸಾಗಿದೆ ಎಂಬ ಕಾರಣ ನೀಡಿ ಶಾಮನೂರು ಸ್ಪರ್ಧೆಗೆ ನಿರಾಕರಿಸಿದರು. ಅನಂತರ ಕಾಂಗ್ರೆಸ್‌ ನಾಯಕತ್ವವು ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಟಿಕೆಟ್‌ ನೀಡಲು ಬಯಸಿತ್ತು. ಇದನ್ನು ಶಾಮನೂರು ಕುಟುಂಬ ನಿರಾಕರಿಸಿ ತಮ್ಮ ಬದಲಾಗಿ ಕುರುಬ ಸಮುದಾಯದವರಾದ ಹಾಗೂ ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜಪ್ಪ ಅವರಿಗೆ ಟಿಕೆಟ್‌ ನೀಡಿ ಎಂದು ಸಲಹೆ ನೀಡಿತ್ತು. ಇದಕ್ಕೆ ಕಾಂಗ್ರೆಸ್‌ ನಾಯಕತ್ವ ನಿರಾಕರಿಸಿತ್ತು. ಕುರುಬ ಸಮುದಾಯದ ಇಬ್ಬರಿಗೆ ಈಗಾಗಲೇ ಟಿಕೆಟ್‌ ನೀಡಲಾಗಿದೆ (ಕೊಪ್ಪಳ ಹಾಗೂ ಮೈಸೂರು). ಹೀಗಾಗಿ, ಅದೇ ಸಮುದಾಯಕ್ಕೆ ಸೇರಿದ ಮತ್ತೊಬ್ಬರಿಗೆ ಟಿಕೆಟ್‌ ನೀಡಲು ಸಾಧ್ಯವಿಲ್ಲ. ಒಂದೋ ಶಾಮನೂರು ಕುಟುಂಬದಿಂದಲೇ ಒಬ್ಬರು ಅಭ್ಯರ್ಥಿಯಾಗಲಿ, ಇದಾಗದ ಪಕ್ಷದಲ್ಲಿ ಮತ್ತೊಬ್ಬ ಲಿಂಗಾಯತ ಅಭ್ಯರ್ಥಿಯನ್ನು ಹುಡುಕಿ ಅವರಿಗೆ ಟಿಕೆಟ್‌ ನೀಡಲಾಗುವುದು ಎಂದೇ ಹೇಳಿತ್ತು. ಈ ದಿಸೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ ಸಹೋದರನ ಪುತ್ರರಾದ ತೇಜಸ್ವಿ ಪಟೇಲ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿತ್ತು. ಇಷ್ಟಾದ ನಂತರವೂ ತೀವ್ರ ಹಗ್ಗ-ಜಗ್ಗಾಟ ನಡೆದು ಅಂತಿಮವಾಗಿ ಶಾಮನೂರು ಕುಟುಂಬದ ಮಾತಿಗೆ ಕಾಂಗ್ರೆಸ್‌ ಮನ್ನಣೆ ನೀಡಿದ್ದು, ಮಂಜಪ್ಪ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಧಾರವಾಡಕ್ಕೆ ಕುಲಕರ್ಣಿ: ಇನ್ನು ಮಾಜಿ ಸಚಿವ, ಲಿಂಗಾಯತ ಸಮುದಾಯದ ವಿನಯ್‌ ಕುಲಕರ್ಣಿ ಹಾಗೂ ಮುಸ್ಲಿಂ ಸಮುದಾಯದ ಐ.ಜಿ.ಸನದಿ ನಡುವೆ ತೀವ್ರ ಟಿಕೆಟ್‌ ಪೈಪೋಟಿ ಇದ್ದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌, ಪಕ್ಷದ ರಾಜ್ಯ ಶಾಸಕಾಂಗ ನಾಯಕ ಸಿದ್ದರಾಮಯ್ಯ ಲಾಬಿಗೆ ಮಣಿದಿದೆ. ವಿನಯ್‌ ಕುಲಕರ್ಣಿ ಅವರನ್ನೇ ಕಣಕ್ಕಿಳಿಸಬೇಕು ಎಂಬ ಸಿದ್ದರಾಮಯ್ಯ ಮಾತಿಗೆ ಮನ್ನಣೆ ನೀಡಿದೆ.

ಎರಡು ಬಾರಿ ಲೋಕಸಭೆಗೆ, ಒಮ್ಮೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಸನದಿ ಹಾಗೂ ವಿನಯ್‌ ನಡುವೆ ಪಕ್ಷದ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಇತ್ತು. ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಕನಿಷ್ಠ ಎರಡಾದರೂ ಕ್ಷೇತ್ರಗಳನ್ನು ನೀಡಬೇಕು. ಪ್ರಸ್ತುತ ಬೆಂಗಳೂರು ಕೇಂದ್ರದ ಟಿಕೆಟ್‌ ರಿಜ್ವಾನ್‌ ಅರ್ಷದ್‌ಗೆ ನೀಡಲಾಗಿದೆ. ಧಾರವಾಡ ಕ್ಷೇತ್ರದ ಟಿಕೆಟ್‌ ಮುಸ್ಲಿಮರಿಗೆ ನೀಡದಿದ್ದರೆ ರಾಜ್ಯದಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಮುಸ್ಲಿಮರಿಗೆ ಟಿಕೆಟ್‌ ನೀಡಿದಂತಾಗುತ್ತದೆ. ಹೀಗಾಗಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದಂತೆ ಆಗುತ್ತದೆ ಎಂದು ಮುಸ್ಲಿಂ ನಾಯಕರು ವಾದ ಮಂಡಿಸಿದ್ದರು. ಆದರೆ, ಇದಕ್ಕೆ ಮಣಿಯದ ಕಾಂಗ್ರೆಸ್‌ ನಾಯಕತ್ವ ಅಂತಿಮವಾಗಿ ವಿನಯ್‌ ಅವರಿಗೇ ಟಿಕೆಟ್‌ ನೀಡಲು ನಿರ್ಧರಿಸಿದೆ.

click me!