ಕಾಂಗ್ರೆಸ್ ಪ್ರಣಾಳಿಕೆಗೆ ಬಿಜೆಪಿ ನಾಯಕರು ಕೆಂಡಾಮಂಡಲ

By Web DeskFirst Published Apr 4, 2019, 7:53 AM IST
Highlights

ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಕೆಂಡಾಮಂಡಲವಾಗಿದ್ದಾರೆ. ಕಾಂಗ್ರೆಸ್ ನಲ್ಲಿ ನೀಡಿದ ಭರವಸೆಯೊಂದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. 

ಬೆಂಗಳೂರು :  ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವಿವಾದಾತ್ಮಕ ದೇಶದ್ರೋಹದ ಕಾನೂನು ರದ್ದು ಪಡಿಸುವ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಭರವಸೆಗೆ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ರೀತಿಯ ಘೋಷಣೆ ಮೂಲಕ ಕಾಂಗ್ರೆಸ್‌ ಭಯೋತ್ಪಾದಕರಿಗೆ ನೆರವು ನೀಡಲು ಹೊರಟಿದೆ, ದೇಶದ ವಿಭಜನೆಗೆ ಪ್ಕೋತ್ಸಾಹ ನೀಡುವಂತಿದೆ ಈ ಪ್ರಣಾಳಿಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ಬುಧವಾರ ಕಿಡಿಕಾರಿದ್ದಾರೆ. ದೇಶದ ಐಕ್ಯತೆಗೆ ಧಕ್ಕೆ ತರುವಂಥ ಇಂಥ ಪ್ರಣಾಳಿಕೆಯನ್ನು ಶೀಘ್ರವೇ ವಾಪಸ್‌ ಪಡೆಯಬೇಕು ಎಂದೂ ಬಿಜೆಪಿ ಮುಖಂಡರು ಕಾಂಗ್ರೆಸ್‌ ಅನ್ನು ಒತ್ತಾಯಿಸಿದ್ದಾರೆ.

ಏತನ್ಮಧ್ಯೆ, ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಬಿಜೆಪಿಯವರಿಗೆ ಟೀಕಿಸಲು ಯಾವುದೇ ವಿಷಯಗಳಿಲ್ಲದೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲೆಲ್ಲೂ ದೇಶದ್ರೋಹದ ಕಾಯ್ದೆಯನ್ನು ಪೂರ್ಣವಾಗಿ ರದ್ದು ಮಾಡುವುದಾಗಿ ಹೇಳಿಯೇ ಇಲ್ಲ, ಕೆಲ ತಿದ್ದುಪಡಿ ಮಾಡುತ್ತೇವೆ ಎಂದಷ್ಟೇ ತಿಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೂರ್ಖತನ-ಬಿಎಸ್‌ವೈ: ದೇಶದ ದ್ರೋಹದ ಕಾಯ್ದೆ ರದ್ದತಿ ಭರವಸೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕಾಂಗ್ರೆಸ್‌ ಪ್ರಣಾಳಿಕೆ ಒಂದು ಸುಳ್ಳಿನ ಕಂತೆ, ಅಧಿಕಾರಕ್ಕೆ ಬಂದರೆ ದೇಶದ್ರೋಹ ಕೇಸ್‌ ಕಾನೂನು ರದ್ದು ಮಾಡುವ ಭರವಸೆ ನೀಡಿರುವುದು ಅವರ ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಹಿಂದಿನಿಂದಲೂ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದೆ. ಇದೀಗ ದೇಶದ್ರೋಹ ಕಾಯ್ದೆ ಮಾಡುವ ಬಗ್ಗೆ ಭರವಸೆ ನೀಡಿದೆ. ರಾಹುಲ್‌ ಗಾಂಧಿಗೆ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಸಲಹೆ ಕೊಡುವವರೇ ಇಲ್ಲದಂತಾಗಿದೆ. ಹೀಗಾಗಿ ಅವರು ಇಂತಹ ಬೇಕಾಬಿಟ್ಟಿಭರವಸೆ ನೀಡುತ್ತಿದ್ದಾರೆಂದು ಯಡಿಯೂರಪ್ಪ ಟೀಕಿಸಿದರು.

ಇದು ಆಘಾತಕಾರಿ-ಸಿ.ಟಿ.ರವಿ: ಕಾಂಗ್ರೆಸ್‌ ಪ್ರಣಾಳಿಕೆಯ ಭರವಸೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರು ಆಘಾತಕಾರಿ ಎಂದು ಕರೆದಿದ್ದಾರೆ. ದೇಶದ್ರೋಹಿಗಳ ವೋಟು ಸೆಳೆಯಲು ಕಾಂಗ್ರೆಸ್‌ ಈ ರೀತಿಯ ಭರವಸೆ ನೀಡುತ್ತಿದೆ. ಈ ಮೂಲಕ ಪ್ರತ್ಯೇಕತಾವಾದಿಗಳಿಗೆ ಹಾಗೂ ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಬೆಂಬಲ ಸೂಚಿಸಿದಂತಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ಈ ರೀತಿಯ ಭರವಸೆಗಳಿಂದ ದೇಶ ವಿಭಜನೆಯಾಗಬೇಕು ಎಂದು ಬಯಸುವವರಿಗೆ ಖುಷಿಯಾಗಲಿದೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರಗಳನ್ನೂ ವಾಪಸ್‌ ಪಡೆಯುವುದಾಗಿಯೂ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಪ್ರತ್ಯೇಕತಾವಾದಿಗಳಿಗೆ, ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಬೆಂಬಲ ಇದೆ ಎಂಬುದು ಇದರಿಂದ ಅರ್ಥವಾಗುತ್ತದೆ. ಈ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಉಗ್ರರಿಗೆ ಅನುಕೂಲ: ಕಾಂಗ್ರೆಸ್‌ ಪ್ರಣಾಳಿಕೆ ಕುರಿತು ಸಂಸದ ಪ್ರಹ್ಲಾದ್‌ ಜೋಶಿ ಕೂಡ ಕಿಡಿಕಿಡಿಯಾಗಿದ್ದಾರೆ. ನಕ್ಸಲ್‌, ಮಾವೋ, ಲಷ್ಕರ್‌ನಂಥ ಉಗ್ರ ಸಂಘ​ಟ​ನೆ​ಗ​ಳಿಗೆ ಅನುಕೂಲವಾಗುವ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಭಾರ​ತೀಯ ಯೋಧರ ನೈತಿಕತೆ ಕುಸಿಯುವಂತೆ ಮಾಡುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಆ ಪಕ್ಷ ಬೌದ್ಧಿಕವಾಗಿ ದಿವಾಳಿಯಾಗಿದ್ದು, ದೇಶದ ಐಕ್ಯತೆಗೆ ಧಕ್ಕೆ ತರುವ ಇಂಥ ಪ್ರಣಾಳಿಕೆಯನ್ನು ಕೂಡಲೇ ಹಿಂಪ​ಡೆ​ಯ​ಬೇ​ಕೆಂದು ಅವರು ಆಗ್ರಹಿಸಿದ್ದಾರೆ.

ಏತನ್ಮಧ್ಯೆ, ಬಿಜೆಪಿ ಮುಖಂಡ ಶ್ರೀರಾಮುಲು ಕೂಡ ದೇಶದ್ರೋಹದ ಕಾನೂನು ರದ್ದು ಪಡಿಸುವ ಅಂಶಗಳನ್ನೊಳಗೊಂಡಿರುವ ಕಾಂಗ್ರೆಸ್‌ ಪ್ರಣಾಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಜನಾಕ್ರೋಶಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ. ಈ ಪ್ರಣಾಳಿಕೆ ದೇಶದ ಅಭಿವೃದ್ಧಿಗೆ ಪೂರಕವಾಗಿಲ್ಲ, ಬದಲಾಗಿ ಉಗ್ರರನ್ನು ಬೆಂಬಲಿಸುವಂತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರದ್ದು ಮಾಡ್ತೀವಿ ಅಂದಿಲ್ಲ: ದೇಶದ್ರೋಹ ಕಾಯ್ದೆಯನ್ನು ರದ್ದುಪಡಿಸುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯಿಂದ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲೆಲ್ಲೂ ದೇಶದ್ರೋಹದ ಕಾನೂನನ್ನು ಸಂಪೂರ್ಣ ರದ್ದುಪಡಿಸುವುದಾಗಿ ಹೇಳಿಲ್ಲ. ಕೆಲ ಅಂಶಗಳಿಗೆ ತಿದ್ದುಪಡಿ ತರುವುದಾಗಿ ಹೇಳಲಾಗಿದೆ ಅಷ್ಟೆ. ಆದರೆ, ಬಿಜೆಪಿಯವರಿಗೆ ಟೀಕಿಸಲು ವಿಷಯಗಳಿಲ್ಲದೆ ಕಾಂಗ್ರೆಸ್‌ ಪ್ರಣಾಳಿಕೆಯ ವಿಷಯಗಳನ್ನು ಟೀಕಿಸುತ್ತಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಶಸಸ್ತ್ರ ಪಡೆಗಳ ವಿಶೇಷಾಧಿಕಾರವನ್ನು ತೆಗೆಯಬೇಕು ಎಂದು ಈ ಮೊದಲು ಬಿಜೆಪಿಯವರೇ ಹೇಳಿದ್ದರು. ಕೆಲ ಈಶಾನ್ಯ ರಾಜ್ಯಗಳಲ್ಲಿ ಆ ವಿಶೇಷಾಧಿಕಾರವನ್ನು ಅವರೇ ತೆಗೆದಿದ್ದಾರೆ. ಆದರೆ, ಈಗ ದೇಶದ್ರೋಹದ ಕಾಯ್ದೆ ದುರ್ಬಳಕೆ ಬಗ್ಗೆ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್‌ ದೇಶದ್ರೋಹ ಕಾಯ್ದೆಯನ್ನು ಪೂರ್ಣ ರದ್ದುಪಡಿಸುವುದಾಗಿ ಹೇಳಿಲ್ಲ. ಹಿಂಸೆಗೆ ದಾರಿಯಾಗುವ ಕೆಲ ಅಂಶಗಳನ್ನು ತಿದ್ದುಪಡಿ ಮಾಡುವುದಾಗಿ ಮಾತ್ರ ಹೇಳಿದೆ. ಆ ಮೂಲಕ ದೇಶದ ಜನ ಸ್ವತಂತ್ರ್ಯ ಹಾಗೂ ಮುಕ್ತ ಬದುಕು ನಡೆಸುವ ವಾತಾವರಣ ಸೃಷ್ಟಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರಿಗೆ ಟೀಕೆಗೆ ವಿಷಯವಿಲ್ಲ

ಬಿಜೆಪಿಯವರಿಗೆ ಟೀಕಿಸಲು ಯಾವುದೇ ವಿಷಯಗಳಿಲ್ಲದೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲೆಲ್ಲೂ ದೇಶದ್ರೋಹದ ಕಾಯ್ದೆಯನ್ನು ಪೂರ್ಣವಾಗಿ ರದ್ದು ಮಾಡುವುದಾಗಿ ಹೇಳಿಯೇ ಇಲ್ಲ, ಕೆಲ ತಿದ್ದುಪಡಿ ಮಾಡುತ್ತೇವೆ ಎಂದಷ್ಟೇ ತಿಳಿಸಲಾಗಿದೆ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ
 

ದೇಶದ್ರೋಹ ಕಾಯ್ದೆ ರದ್ದುಗೊಳಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇದು ಅದರ ಮೂರ್ಖತನದ ಪರಮಾವಧಿ. ರಾಹುಲ್‌ ಗಾಂಧಿಗೆ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಸಲಹೆ ಕೊಡುವವರೇ ಇಲ್ಲದಂತಾಗಿದೆ. ಹೀಗಾಗಿ ಬೇಕಾಬಿಟ್ಟಿಭರವಸೆ ನೀಡುತ್ತಿದ್ದಾರೆ.

- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಪಾಕಿಸ್ತಾನಿ ಉಗ್ರರಿಗೆ ನೆರವಾಗುವ ಪ್ರಣಾಳಿಕೆ

ಕಾಂಗ್ರೆಸ್‌ ಬಿಡುಗಡೆ ಮಾಡಿದ ಬೂಟಾಟಿಕೆಯ ಪ್ರಣಾಳಿಕೆ ನೋಡಿದೆ. ಅದರಲ್ಲಿ ದೇಶದ್ರೋಹ ಕಾನೂನು ರದ್ದುಗೊಳಿಸುವ ಉಲ್ಲೇಖವಿದೆ. ಸೇನಾ ವಿಶೇಷಾಧಿಕಾರ (ಆಫ್ಸಾ$್ಪ) ಕಾಯ್ದೆ ಹಿಂಪಡೆವ ಭರವಸೆ ನೀಡಲಾಗಿದೆ. ಇವು ಪಾಕಿಸ್ತಾನದಿಂದ ಉಗ್ರವಾದ ರಫ್ತು ಮಾಡುವವರಿಗೆ ನೆರವಾಗುವಂತಹ, ನಮ್ಮ ಭದ್ರತಾ ಪಡೆಗಳನ್ನು ಅಧೀರರನ್ನಾಗಿಸುವ ಘೋಷಣೆಗಳು. ಕಾಂಗ್ರೆಸ್‌ ಪಕ್ಷ ರಾಷ್ಟ್ರೀಯ ಭದ್ರತೆ ಜತೆ ಆಟವಾಡುತ್ತಿದೆ. ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ.

- ನರೇಂದ್ರ ಮೋದಿ, ಪ್ರಧಾನ ಮಂತ್ರಿ

ದೇಶದಲ್ಲಿ ವ್ಯಾಪಕ ಚರ್ಚೆ ಅಗತ್ಯವಿದೆ

ಉಗ್ರರ ಉಪಟಳ ಅಧಿಕವಾಗಿರುವ ಕಾಶ್ಮೀರವನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಕಾನೂನು ಇದು. ಇಂತಹ ಕಾನೂನುಗಳು ದೇಶದ ಶಾಂತಿ, ಅಭಿವೃದ್ಧಿಗೆ ಅಡ್ಡಿ ಆಗಬಾರದು. ಅಲ್ಲದೆ, ದೇಶದ್ರೋಹ ಕಾನೂನು ಬಳಕೆಯನ್ನು ಹೇಗೆ ಬೇಕಾದರೂ ವ್ಯಾಖ್ಯಾನ ಮಾಡಬಹುದು. ಆದರೆ, ಅದನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುವ ಮೊದಲು ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಗಬೇಕು. ರದ್ದತಿಯಿಂದ ಶಾಶ್ವತ ಪರಿಹಾರ ಸಾಧ್ಯವಾ ಎಂದು ಚಿಂತಿಸಬೇಕು.

- ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನ ಮಂತ್ರಿ

click me!