ಮೊದಲ ಹಂತದ ಕಣದಿಂದ ಹಿಂದೆ ಸರಿದ 33 ಅಭ್ಯರ್ಥಿಗಳು

By Web DeskFirst Published Mar 30, 2019, 8:33 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ.  ಮೊದಲ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಮೊದಲ ಹಂತಕ್ಕೆ ಸ್ಪರ್ಧೆ ಮಾಡಿದ್ದ 33 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. 

ಬೆಂಗಳೂರು :  ರಾಜ್ಯದಲ್ಲಿ ಲೋಕಸಭಾ ಚುನಾವಣಾ ಅಖಾಡದ ಮೊದಲ ಹಂತದಲ್ಲಿ 241 ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ನಾಮಪತ್ರ ವಾಪಸ್‌ ಪಡೆಯುವ ಕೊನೆಯ ದಿನದಂದು 33 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ.

ಏ.18ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಶುಕ್ರವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. 274 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 33 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮ ಕಣದಲ್ಲಿ 241 ಇದ್ದು, ಚುನಾವಣಾ ಕಣದಲ್ಲಿ ಸೆಣಸಲಿದ್ದಾರೆ.

ಮಂಡ್ಯ, ಮೈಸೂರು ಮತ್ತು ಬೆಂಗಳೂರು ಕೇಂದ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಮೂರು ಕ್ಷೇತ್ರದಲ್ಲಿ ತಲಾ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಸನ ಕ್ಷೇತ್ರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳಿದ್ದಾರೆ. ಮಿತ್ರ ಪಕ್ಷದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ, ಬಿಜೆಪಿ ಅಭ್ಯರ್ಥಿ ಎ.ಮಂಜು ಸೇರಿದಂತೆ ಕೇವಲ ಆರು ಅಭ್ಯರ್ಥಿಗಳು ಮಾತ್ರ ಅಖಾಡದಲ್ಲಿ ಸ್ಪರ್ಧಿಸಲಿದ್ದಾರೆ. ಬೆಂಗಲೂರು ದಕ್ಷಿಣ ಮತ್ತು ದಕ್ಷಿಣ ಕನ್ನಡದಲ್ಲಿ ಯಾರು ನಾಮಪತ್ರಗಳನ್ನು ಹಿಂಪಡೆದಿಲ್ಲ. ಹಾಸನ ಮತ್ತು ಬೆಂಗಳೂರು ಉತ್ತರದಲ್ಲಿ ಕೇವಲ ಒಬ್ಬರು ಮಾತ್ರ ಹಿಂಪಡೆದಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ನಾಮಪತ್ರ ಸ್ವೀಕೃತವಾಗಿದ್ದು, ಇಬ್ಬರು ಹಿಂಪಡೆದಿದ್ದಾರೆ. ಒಟ್ಟು 12 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ದಕ್ಷಿಣ ಕನ್ನಡದಲ್ಲಿ 13 ಮಂದಿ ಸ್ಪರ್ಧಿಸಿದ್ದಾರೆ. ಹಾಸನದಲ್ಲಿ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಒಬ್ಬರು ಮಾತ್ರ ಹಿಂಪಡೆದಿದ್ದಾರೆ. ಹೀಗಾಗಿ ಆರು ಮಂದಿ ಮಾತ್ರ ಅಖಾಡದಲ್ಲಿದ್ದಾರೆ. ಚಿತ್ರದುರ್ಗ ಕ್ಷೇತ್ರದಲ್ಲಿ 23 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ ನಾಲ್ವರು ಹಿಂಪಡೆದಿದ್ದು, 19 ಮಂದಿ ಮಾತ್ರ ಅದೃಷ್ಟಪರೀಕ್ಷೆಗಿಳಿದಿದ್ದಾರೆ.

ತುಮಕೂರು ಕ್ಷೇತ್ರದಲ್ಲಿ 19 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿದ್ದು, 4 ಮಂದಿ ಹಿಂಪಡೆದಿದ್ದಾರೆ. 15 ಮಂದಿ ಅಂತಿಮವಾಗಿ ಸೆಣಸಲಿದ್ದಾರೆ. ಮಂಡ್ಯದಲ್ಲಿ 26 ಮಂದಿಯ ಪೈಕಿ ನಾಲ್ವರು ನಾಮಪತ್ರಗಳನ್ನು ವಾಪಸ್‌ ಪಡೆದಿದ್ದಾರೆ. 22 ಮಂದಿ ಕಣದಲ್ಲಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳ ಪೈಕಿ ಇಬ್ಬರು ನಾಮಪತ್ರ ಹಿಂಪಡೆದಿದ್ದು, 10 ಮಂದಿ ಕಣದಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳ ನಾಮಪತ್ರಗಳಲ್ಲಿ ಇಬ್ಬರು ನಾಮಪತ್ರಗಳನ್ನು ವಾಪಸ್‌ ಪಡೆದುಕೊಂಡಿದ್ದಾರೆ. 

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ32 ಮಂದಿಯ ಪೈಕಿ ಒಬ್ಬರು ಹಿಂಪಡೆದಿದ್ದು, 31 ಮಂದಿ ಕಣದಲ್ಲಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ 24 ಅಭ್ಯರ್ಥಿಗಳಲ್ಲಿ ಇಬ್ಬರು ಹಿಂಪಡೆದಿದ್ದು, 22 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ 25 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳ ಪೈಕಿ ಇಬ್ಬರು ಹಿಂಪಡೆದಿದ್ದು, 15 ಮಂದಿ ಮತ್ತು ಕೋಲಾರದಲ್ಲಿ 20 ಅಭ್ಯರ್ಥಿಗಳ ಪೈಕಿ ಆರು ಮಂದಿ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. 14 ಮಂದಿ ಅಂತಿಮವಾಗಿ ಅಖಾಡದಲ್ಲಿ ಉಳಿದಿದ್ದಾರೆ.

 

click me!