ಮತದಾನಕ್ಕೆ ಹೋಗಲು ಕೆಎಸ್ಸಾರ್ಟಿಸಿ 3300 ಬಸ್‌

By Web DeskFirst Published Apr 17, 2019, 9:59 AM IST
Highlights

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ KSRTC ಹೆಚ್ಚುವರಿ ಬಸ್ ಸೇವೆಗಳನ್ನು ನೀಡುತ್ತಿದೆ. ಒಟ್ಟು 3300 ಬಸ್ ಗಳು ಚುನಾವಣೆ ಹಿನ್ನೆಲೆಯಲ್ಲಿ ಸಂಚರಿಸುತ್ತಿವೆ. 

ಬೆಂಗಳೂರು :  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ ಸೌಲಭ್ಯ ಕಲ್ಪಿಸಿದೆ.

ನಿಗಮದಿಂದ ಈಗಾಗಲೇ ಮೊದಲ ಹಂತದ ಚುನಾವಣೆ ಕಾರ್ಯಕ್ಕೆ ಒಪ್ಪಂದದ ಆಧಾರದಡಿ 3,300 ಬಸ್‌ಗಳನ್ನು ನೀಡಲಾಗಿದೆ. ಏ.17 ಮತ್ತು 18ರಂದು ಮತದಾನಕ್ಕೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ದಟ್ಟಣೆ ಇಲ್ಲದ ಹಾಗೂ ಅನಿವಾರ್ಯವಲ್ಲದ ಮಾರ್ಗಗಳಿಗೆ ಕಡಿಮೆ ಸಂಖ್ಯೆ ಬಸ್‌ ನಿಯೋಜಿಸಿ, ಪ್ರಯಾಣಿಕರ ದಟ್ಟಣೆ ಇರುವ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ತಾಲೂಕು ಕೇಂದ್ರದಿಂದ ಇತರೆ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ, ತಾಲೂಕು, ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮದಿಂದ ಸುಮಾರು 200 ಬಸ್‌ಗಳನ್ನು ಹೆಚ್ಚುವರಿಯಾಗಿ ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಲಾಗಿದೆ. ಇನ್ನೂ ಹೆಚ್ಚಿನ ಬಸ್‌ಗಳ ಅವಶ್ಯಕತೆ ಕಂಡುಬಂದಲ್ಲಿ ಬಿಎಂಟಿಸಿಯಿಂದ ಬಸ್‌ ಪಡೆದು ಕಾರ್ಯಾಚರಣೆ ಮಾಡಲು ಸಿದ್ಧತೆ ನಡೆಸಲಾಗಿದೆ.

ಇನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಎರಡನೇ ಹಂತದ ಚುನಾವಣೆ ಏ.23ರಂದು ನಡೆಯಲಿದ್ದು, ಬೆಂಗಳೂರಿನಿಂದ ಆ ಭಾಗಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಈಶಾನ್ಯ ಹಾಗೂ ವಾಯವ್ಯ ಸಾರಿಗೆ ನಿಗಮಮದಿಂದ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಲಾಗುವುದು. ಪ್ರಯಾಣಿಕರು ಈ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.

click me!