ಎಚ್ಚರ! ಚುನಾವಣೆ ಸಂದರ್ಭದಲ್ಲಿ ಇಂತಹ ತಪ್ಪು ಮಾಡಿದ್ರೆ ಶಿಕ್ಷೆ ಖಚಿತ

By Web DeskFirst Published Apr 17, 2019, 9:43 AM IST
Highlights

ಲೋಕಸಭಾ ಚುನಾವಣೆಗೆ ರಾಜ್ಯ ಸಂಪೂರ್ಣವಾಗಿ ಸಜ್ಜಾಗಿದೆ. ಇದೇ ಸಂದರ್ಭದಲ್ಲಿ ಆಮಿಷ ಒಡ್ಡುವವರೊಂದಿಗೆ ಆಮಿಷಕ್ಕೆ ಒಳಗಾಗುವರ ವಿರುದ್ಧವೂ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. 

ಬೆಂಗಳೂರು :  ನೀವು ಮತ ಚಲಾಯಿಸಲು ಆಮಿಷಕ್ಕೆ ಒಳಗಾಗಿದ್ದೀರಾ...
ಹಾಗಾದರೆ ನಿಮಗೆ ಶಿಕ್ಷೆ ಖಚಿತ. ಮತದಾರರ ಮೇಲೆ ಆಮಿಷ ಒಡ್ಡುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅಥವಾ ಬೆಂಬಲಿಗ ವಿರುದ್ಧ ಮಾತ್ರವಲ್ಲ ಆಮಿಷಕ್ಕೆ ಒಳಗಾಗುವ ನಾಗರಿಕರ ವಿರುದ್ಧವೂ ಎಫ್‌ಐಆರ್‌ ದಾಖಲಾಗಲಿದೆ.

ಆಮಿಷ ಒಡ್ಡುತ್ತಿರುವುದು ಕಂಡು ಬಂದರೆ ಸಿ-ವಿಜಿಲ್‌ ಮೂಲಕ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಸಿದ್ಧತೆ:  ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಕೇಂದ್ರ, ಉತ್ತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳ ಚುನಾವಣೆ ಸಿದ್ಧತೆ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 72 ಲಕ್ಷ ಮತದಾರರಿದ್ದು, ಶೇಕಡ 90ರಷ್ಟುಕುಟುಂಬಗಳಿಗೆ ವೋಟರ್‌ ಗೈಡ್‌ ಹಾಗೂ ಮತದಾರ ಚೀಟಿ ವಿತರಣೆ ಕಾರ್ಯ ಪೂರ್ಣಗೊಂಡಿದೆ. ಸುಗಮ ಮತದಾನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಮತಯಂತ್ರ, ಮತದಾರ ಚೀಟಿ, ವೋಟರ್‌ ಗೈಡ್‌ ವಿತರಣೆ, ಮತಗಟ್ಟೆಅಧಿಕಾರಿಗಳಿಗೆ ತರಬೇತಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಪೂರ್ಣಗೊಂಡಿದೆ. ಈಗಾಗಲೇ 42 ಸಾವಿರ ಸಿಬ್ಬಂದಿಗೆ ಚುನಾವಣೆ ಕುರಿತು ತರಬೇತಿ ನೀಡಲಾಗಿದೆ. ಹೆಚ್ಚುವರಿಯಾಗಿ ನಾಲ್ಕು ಸಾವಿರ ಸಿಬ್ಬಂದಿಗೆ ತರಬೇತಿ ಕೊಡಲಾಗುತ್ತಿದೆ ಎಂದರು.

ಮೂರು ಲೋಕಸಭಾ ಕ್ಷೇತ್ರದಲ್ಲಿ ಹೊಸದಾಗಿ ಹೆಸರು ನೋಂದಣಿ ಮಾಡಿಕೊಂಡ ಎರಡು ಲಕ್ಷ ಮತದಾರರಿಗೆ ಗುರುತಿನ ಚೀಟಿ ನೀಡುವ ಕಾರ್ಯ ಶೇ.95ರಷ್ಟುಪೂರ್ಣಗೊಂಡಿದೆ. ತರಬೇತಿ ಸೇರಿದಂತೆ ಎಲ್ಲ ಸಿದ್ಧತಾ ಕಾರ್ಯಗಳು ಪೂರ್ಣಗೊಳ್ಳಲಿವೆ. ಆಯೋಗಕ್ಕೆ ಯಾವುದೇ ಮಾಹಿತಿ ನೀಡದೇ ಚುನಾವಣಾ ತರಬೇತಿ ಕಾರ್ಯದಲ್ಲಿಗೈರಾದ ಶೇ.15ರಷ್ಟುನೌಕರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿ ನೋಟಿಸ್‌ ಜಾರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

9 ಪ್ಯಾರಾಮಿಲಿಟರಿ ಪಡೆಗಳನ್ನು ಬೆಂಗಳೂರು ನಗರ ಜಿಲ್ಲಾ ಚುನಾವಣೆ ಭದ್ರತೆ ನಿಯೋಜಿಸಲಾಗಿದೆ. ಈ ಪಡೆಗಳು ಸೂಕ್ಷ್ಮ ಪ್ರದೇಶಗಳಲ್ಲಿ ಕವಾಯತು ನಡೆಸಲಿದ್ದಾರೆ. ಮೂರು ಕ್ಷೇತ್ರದಲ್ಲಿ ಒಟ್ಟು 1,711 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಕಾರ್ಯಕ್ಕೆ ವಿದ್ಯಾರ್ಥಿಗಳು

ಎನ್‌ಎಸ್‌ಎಸ್‌, ಎನ್‌ಸಿಸಿ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್‌ ಸೇರಿದಂತೆ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಚುನಾವಣಾ ಆಯೋಗ ಸಹ ಒಪ್ಪಿಗೆ ನೀಡಿದೆ. ಈ ವಿದ್ಯಾರ್ಥಿಗಳು ಮತಗಟ್ಟೆಯ ಬಳಿ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ಅಶಕ್ತರಿಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು.

ಮೊಬೈಲ್‌ ಫೋನ್‌ ನಿಷೇಧ

ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತಗಟ್ಟೆಯಲ್ಲಿ ಮೊಬೈಲ್‌ ಫೋನ್‌ ಬಳಕೆ ನಿಷೇಧ ಹೇರಿದೆ. ಹಾಗಾಗಿ, ಮತದಾನಕ್ಕೆ ಆಗಮಿಸುವ ಮತದಾರರು ಮತಗಟ್ಟೆಗೆ ಮೊಬೈಲ್‌ ಫೋನ್‌ ತರುವಂತಿಲ್ಲ. ಒಂದು ವೇಳೆ ಮತದಾರರು ಮೊಬೈಲ್‌ ಫೋನ್‌ ತಂದರೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರಕಾಶ್‌ ರಾಜ್‌ ಸೇರಿದಂತೆ ನಾಲ್ವರಿಗೆ ನೋಟಿಸ್‌

ಕ್ರಿಮಿನಲ್‌ ಹಿನ್ನೆಲೆ ಉಳ್ಳ ಅಭ್ಯರ್ಥಿಗಳು ದಿನಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಿಗೆ ಮೂರು ಬಾರಿ ಜಾಹೀರಾತು ನೀಡಬೇಕು ಎಂದು ನಿಯಮವಿದೆ. ಅದರಂತೆ ನಗರದಲ್ಲಿಯ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಒಟ್ಟು ಅಭ್ಯರ್ಥಿಗಳ ಪೈಕಿ ನಾಲ್ವರು ಅಭ್ಯರ್ಥಿಗಳು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಅದರಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್‌ ರಾಜ್‌ ಎರಡು ಬಾರಿ ಜಾಹೀರಾತು ನೀಡಿದ್ದಾರೆ. ಇನ್ನುಳಿದಂತೆ ಉತ್ತರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಗಳಾದ ಜಗದೀಶ್‌ ಕುಮಾರ್‌, ಹನುಮೇಗೌಡ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೊಲ್ಲೂರು ಮಂಜುನಾಥ ನಾಯ್‌್ಕ ಜಾಹೀರಾತು ನೀಡಿಲ್ಲ. ಹಾಗಾಗಿ ನಾಲ್ಕೂ ಅಭ್ಯರ್ಥಿಗಳ ವಿರುದ್ಧ ಆಯೋಗಕ್ಕೆ ದೂರು ನೀಡಲಾಗುವುದು. ಅಭ್ಯರ್ಥಿಗಳಿಗೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಮೂರು ಸುತ್ತಿನ ಭದ್ರತೆ

ಮತದಾನದ ಬಳಿಕ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಸೆಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌ನಲ್ಲಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಮೌಂಟ್‌ ಕಾರ್ಮೆಲ್‌ ಮಹಿಳಾ ಪಿಯು ಕಾಲೇಜು ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಎಸ್‌ಎನ್‌ಎಂಆರ್‌ವಿ ಪಿಯು ಕಾಲೇಜಿನಲ್ಲಿ ಇಡಲಾಗುವುದು. ಮತ ಏಣಿಕೆ ಕೇಂದ್ರಕ್ಕೆ ಪ್ಯಾರಾಮಿಲಿಟರಿ ಪಡೆ, ಕೆಎಸ್‌ಆರ್‌ಪಿ ಮತ್ತು ಜಿಲ್ಲಾ ಸಿವಿಲ್‌ ಪೊಲೀಸ್‌ ಮೂರು ಹಂತದ ಭದ್ರತೆ ನೀಡಲಾಗುವುದು. ಸಿಸಿಟಿವಿ ಕ್ಯಾಮೆರಾ ಸಹ ಅಳವಡಿಕೆ ಮಾಡಲಾಗುವುದು ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಅಂಗವಿಕಲರಿಗಾಗಿ ಕ್ಯಾಬ್‌ ಸೇವೆ

ಮತದಾನಕ್ಕೆ ಬರುವ ಅಂಗವಿಕಲರಿಗೆ ಉಚಿತ ಕ್ಯಾಬ್‌ ಸೌಲಭ್ಯ ಒದಗಿಸಲಾಗುತ್ತಿದೆ. ಒಲಾ ಸಂಸ್ಥೆ ಜೊತೆ ಚುನಾವಣಾ ಆಯೋಗ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಟ್ಟು 350 ಒಲಾ ಕ್ಯಾಬ್‌ ಮತ್ತು 40 ಉಬರ್‌ ಕ್ಯಾಬ್‌ ಸಿಎಸ್‌ಆರ್‌ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಪ್ರತಿಯೊಬ್ಬ ಅಂಗವಿಕಲರಿಗೆ ಕ್ಯಾಬ್‌ ನಂಬರ್‌ ಮತ್ತು ಮೊಬೈಲ್‌ ಸಂಖ್ಯೆ, ವಾಹನ ಮನೆಯ ಬಳಿ ಬರುವ ಸಮಯ ಎಲ್ಲವನ್ನು ಮೆಸೇಜ್‌ ಮಾಡಲಾಗಿದೆ. ಅಂಗವಿಕಲರು ಕ್ಯಾಬ್‌ಗಳ ಮೂಲಕ ಮತಗಟ್ಟೆಗೆ ಬಂದು ಮತದಾನ ಮಾಡಿ, ಅದೇ ಕ್ಯಾಬ್‌ನಲ್ಲಿ ವಾಪಾಸು ತೆರಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9632710314ಗೆ ಸಂಪರ್ಕಿಸಬಹುದಾಗಿದೆ ಎಂದು ನೋಡಲ್‌ ಅಧಿಕಾರಿ ನಕುಲ್‌ ತಿಳಿಸಿದರು.

click me!