
ನವದೆಹಲಿ(ಏ.29): 2019ರ ಲೋಕಸಭಾ ಚುನಾವಣೆಗೆ ಇಂದು ದೇಶದಲ್ಲಿ ನಾಲ್ಕನೇ ಹಂತದ ಮತದಾನ ಆರಂಭವಾಗಿದೆ. ಒಟ್ಟು 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, 900ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿವೆ.
4ನೇ ಹಂತದ ಮತದಾನದಲ್ಲಿ ಘಾಟಾನುಘಟಿ ಮತ್ತು ಪ್ರಮುಖ ನಾಯಕರ ಹಣೆ ಬರಹ ನಿರ್ಧಾರವಾಗಲಿದ್ದು, ಹಲವು ಪ್ರಮುಖ ನಾಯಕರು ಕಣದಲ್ಲಿದ್ದಾರೆ. ಬಾಬುಲ್ ಸುಪ್ರಿಯೋ, ಗಿರಿರಾಜ್ ಸಿಂಗ್. ಉಪೇಂದ್ರ ಕುಶ್ವಾಹ, ಸಾಕ್ಷಿ ಮಹಾರಾಜ್ ಪೂನಂ ಮಹಾಜನ್ ಬಿಜೆಪಿಯಿಂದ ಕಣದಲ್ಲಿರುವ ಪ್ರಮುಖರು.
ಇನ್ನು ಕಾಂಗ್ರೆಸ್‌ನಿಂದ ಸಂಜಯ್ ನಿರುಪಮ್ ಮತ್ತು ಮಿಲಿಂದ್ ದೇವೋರಾ ಸೇರಿದಂತೆ ಹಲವು ನಾಯಕರು ಸ್ಪರ್ಧೆ ಮಾಡುತ್ತಿದ್ದಾರೆ.
ಅದರಂತೆ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಪುತ್ರ ರಾಮಚಂದ್ರ ಪಾಸ್ವಾನ್, ಸುನೀಲ್ ದತ್ ಪುತ್ರಿ ಪ್ರಿಯಾ ದತ್, ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ಜಾರ್ಖಂಡ್ನ ಮಾಜಿ ಸಿಎಂ ಶಿಬು ಸೊರೇನ್ ಪುತ್ರಿ ಅಂಜನಿ ಸೊರೇನ್ ಕೂಡ ಸ್ಪರ್ಧೆಗಿಳಿದ್ದಾರೆ.
ಇನ್ನು ಜೆಎನ್ ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಅವರು ಬಿಹಾರದ ಬೇಗುಸರೈ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಮತದಾನ ಹಾಕಿದ ಪ್ರಮುಖರು:
ಬಾಲಿವುಡ್ ನಟ, ನಟಿಯರು, ಕ್ರೀಡಾ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಇಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.
ಪ್ರಮುಖವಾಗಿ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಅನುಪಮ್ ಖೇರ್, ಜಾವೇದ್ ಅಖ್ತರ್, ಹೇಮಾ ಮಾಲಿನಿ, ಕರೀನಾ ಕಪೂರ್, ಸಚಿನ್ ತೆಂಡೂಲ್ಕರ್ ಕುಟುಂಬ ಸೇರಿದಂತೆ ಹಲವು ಪ್ರಮುಖರು ಮತದಾನ ಮಾಡಿದ್ದಾರೆ.
12 ಗಂಟೆವರೆಗೆ ಶೇ. 23ರಷ್ಟು ಮತದಾನವಾಗಿದ್ದು, ಸಂಜೆ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಚುನಾವಣಾಆಯೋಗ ತಿಳಿಸಿದೆ.