ಲೊಕಸಭಾ ಚುನಾವಣೆ : ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ರಾಜ್ಯದಲ್ಲಿ 16 ಸೀಟು

Published : Apr 29, 2019, 11:17 AM IST
ಲೊಕಸಭಾ ಚುನಾವಣೆ : ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ರಾಜ್ಯದಲ್ಲಿ 16 ಸೀಟು

ಸಾರಾಂಶ

ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾತರರಾಗಿದ್ದಾರೆ. ಇದೇ ವೇಳೆ ಮೈತ್ರಿ ಮುಖಂಡರು ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು :  ರಾಜ್ಯದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ದೋಸ್ತಿ ಪಕ್ಷಗಳು 14ರಿಂದ 16 ಸ್ಥಾನಗಳನ್ನು ಗೆಲ್ಲಲಿವೆ ಎಂದು ಉಭಯ ಪಕ್ಷಗಳ ಸ್ಥಳೀಯ ಮುಖಂಡರು ವರದಿ ನೀಡಿದ್ದಾರೆ.

ಲೋಕಸಭೆ ಚುನಾವಣೋತ್ತರ ಸ್ಥಿತಿಗತಿ ಹಾಗೂ ನಿರೀಕ್ಷಿತ ಫಲಿತಾಂಶದ ಬಗ್ಗೆ ಚರ್ಚಿಸಲು ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಎಷ್ಟುಸ್ಥಾನ ಬರಬಹುದು, ಗೆಲ್ಲುವ ಹಾಗೂ ಸೋಲುವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಫಲಿತಾಂಶಕ್ಕೆ ಕಾರಣವಾದ ಅಂಶಗಳ ವಿಶ್ಲೇಷಣೆ, ಮೈತ್ರಿಯಲ್ಲಿ ತಳಮಟ್ಟದಲ್ಲಿ ಆದ ಲೋಪಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟದ ಬಲ ಹೆಚ್ಚಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆದರೆ ಸ್ಥಳೀಯ ವರದಿ ಪ್ರಕಾರ 14ರಿಂದ 16 ಲೋಕಸಭೆ ಸ್ಥಾನಗಳನ್ನು ಗೆಲ್ಲಲಿದ್ದೇವೆ. ಕಾಂಗ್ರೆಸ್‌ 12ರಿಂದ 14 ಹಾಗೂ ಜೆಡಿಎಸ್‌ ಮೂರು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತಿದೆ.

ಮಂಡ್ಯ, ಮೈಸೂರು ಸೇರಿ ಕೆಲವು ಕಡೆ ಮೈತ್ರಿ ಸೂಕ್ತವಾಗಿ ಕೆಲಸ ಮಾಡಿಲ್ಲ. ಕರಾವಳಿಯಲ್ಲಿ ಹಿಂದುತ್ವದ ಅಲೆ ಕೆಲಸ ಮಾಡಿದ್ದು, ಬಿಜೆಪಿಯು ಹಿಂದೂಗಳನ್ನು ಚುನಾವಣೆಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ ಎಂಬುದನ್ನು ಪ್ರಚಾರ ಮಾಡಲು ವಿಫಲವಾಗಿದ್ದೇವೆ. ಮುಂಬೈ ಕರ್ನಾಟಕದಲ್ಲಿ ಲಿಂಗಾಯತ ಮತಗಳು ಕಾಂಗ್ರೆಸ್‌ ಕೈ ಹಿಡಿದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಬಗೆಗಿನ ಚರ್ಚೆ ಕಾಂಗ್ರೆಸ್‌ಗೆ ಹಿನ್ನಡೆ ಉಂಟುಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರು ಹಾಜರಿದ್ದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!