
ನವದೆಹಲಿ(ಏ.29): 2019ರ ಲೋಕಸಭಾ ಚುನಾವಣೆಗೆ ಇಂದು ದೇಶದಲ್ಲಿ ನಾಲ್ಕನೇ ಹಂತದ ಮತದಾನ ಮುಕ್ತಾಯವಾಗಿದೆ. ಒಟ್ಟು 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.
4ನೇ ಹಂತದ ಮತದಾನದಲ್ಲಿ ಒಟ್ಟು 900 ಅಭ್ಯರ್ಥಿಗಳು ಕಣದಲ್ಲಿದ್ದು, ಘಟಾನುಘಟಿ ಮತ್ತು ಪ್ರಮುಖ ನಾಯಕರ ಹಣೆ ಬರಹ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಶೇಕಡಾವಾರು ಮತದಾನ ವಿವರ:
ಬಿಹಾರ-ಶೇ.53.67(2014ರಲ್ಲಿ ಶೇ.56.3)
ಜಮ್ಮು ಮತ್ತು ಕಾಶ್ಮೀರ-ಶೇ.9.79(2014ರಲ್ಲಿ ಶೇ.49.5)
ಮಹಾರಾಷ್ಟ್ರ-ಶೇ.(2014ರಲ್ಲಿ ಶೇ.60.4)
ಮಧ್ಯಪ್ರದೇಶ-ಶೇ.65.86(2014ರಲ್ಲಿ ಶೇ.61.6)
ಒಡಿಶಾ-ಶೇ.64.05(2014ರಲ್ಲಿ ಶೇ. 73.8)
ರಾಜಸ್ಥಾನ-ಶೇ.62.93(2014ರಲ್ಲಿ ಶೇ. 63.1)
ಉತ್ತರಪ್ರದೇಶ-ಶೇ.53.12(2014ರಲ್ಲಿ ಶೇ. 58.4)
ಪ.ಬಂಗಾಳ-ಶೇ.76.47(2014ರಲ್ಲಿ ಶೇ.82.2)
ಜಾರ್ಖಂಡ-ಶೇ.63.76(2014ರಲ್ಲಿ ಶೇ.63.9)
ಇನ್ನು ಒಟ್ಟು 9 ರಾಜ್ಯಗಳಲ್ಲಿ ಶೇಕಡಾವಾರು ಮತದಾನ ಶೇ. 59.25ರಷ್ಟು ಆಗಿದೆ ಎಂದು ಚುನಾವಣಾ ಆಯೊಗ ತಿಳಿಸಿದೆ.
ಕಣದಲ್ಲಿರುವ ಪ್ರಮುಖರು:
ಇನ್ನು ಇಂದಿನ ಚುನಾವಣೆಯಲ್ಲಿ ಹಲವು ಪ್ರಮುಖ ನಾಯಕರು ಕಣದಲ್ಲಿದ್ದಾರೆ. ಬಾಬುಲ್ ಸುಪ್ರಿಯೋ, ಗಿರಿರಾಜ್ ಸಿಂಗ್. ಉಪೇಂದ್ರ ಕುಶ್ವಾಹ, ಸಾಕ್ಷಿ ಮಹಾರಾಜ್ ಪೂನಂ ಮಹಾಜನ್ ಬಿಜೆಪಿಯಿಂದ ಕಣದಲ್ಲಿರುವ ಪ್ರಮುಖರು.
ಇನ್ನು ಕಾಂಗ್ರೆಸ್‌ನಿಂದ ಸಂಜಯ್ ನಿರುಪಮ್ ಮತ್ತು ಮಿಲಿಂದ್ ದೇವೋರಾ ಸೇರಿದಂತೆ ಹಲವು ನಾಯಕರು ಸ್ಪರ್ಧೆ ಮಾಡುತ್ತಿದ್ದಾರೆ.
ಅದರಂತೆ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಪುತ್ರ ರಾಮಚಂದ್ರ ಪಾಸ್ವಾನ್, ಸುನೀಲ್ ದತ್ ಪುತ್ರಿ ಪ್ರಿಯಾ ದತ್, ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ಜಾರ್ಖಂಡ್ನ ಮಾಜಿ ಸಿಎಂ ಶಿಬು ಸೊರೇನ್ ಪುತ್ರಿ ಅಂಜನಿ ಸೊರೇನ್ ಕೂಡ ಸ್ಪರ್ಧೆಗಿಳಿದ್ದಾರೆ.
ಇನ್ನು ಜೆಎನ್ ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಅವರು ಬಿಹಾರದ ಬೇಗುಸರೈ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಇನ್ನು ಪ.ಬಂಗಾಳದಲ್ಲಿ ಕೆಲವೆಡೆ ಹಿಂಸಾಚಾರ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಮತಿಯುತವಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದೇ ವೇಳೆ ರಾಜ್ಯದಲ್ಲಿ ಕೆಲವೆಡೆ CRPF ಯೋಧರು ಬಿಜೆಪಿಗೆ ಮತ ಹಾಕುವಂತೆ ಮತದಾರರನ್ನು ಒತ್ತಾಯಿಸುತ್ತಿದ್ದಾರೆ ಎಂದು ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.