
ನವದೆಹಲಿ(ಏ.06): ಪ್ರಧಾನಿ ನರೇಂದ್ರ ಮೋದಿ ಕಡುವಿರೋಧಿ, ಬಿಜೆಪಿಯ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ನವದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶತ್ರುಘ್ನ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹೊಸಕಿ ಹಾಕಲಾಗಿದ್ದು, ಮೋದಿ ಮತ್ತು ಅಮಿತ ಶಾ ಅವರ ದಬ್ಬಾಳಿಕೆ ನಡೆಯುತ್ತಿದೆ ಎಂದು ಶತ್ರುಘ್ನ ಸಿನ್ಹಾ ಆರೋಪಿಸಿದರು.
ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರನ್ನೆಲ್ಲಾ ಮೂಲೆಗುಂಪು ಮಾಡಿ ಮೋದಿ-ಶಾ ಜೋಡಿ ಪಕ್ಷವನ್ನು ತನ್ನ ವಶಕ್ಕೆ ಪಡೆದಿದೆ ಎಂದ ಸಿನ್ಹಾ, ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ ಕಟ್ಟಿ ಬೆಳೆಸಿದ ಪಕ್ಷ ಇದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಉದ್ಯಮಿಗಳ ಪರ, ಬಡವರ ವಿರೋಧಿ ಧೋರಣೆಯುಳ್ಳ ಪ್ರಧಾನಿ ಮೋದಿ, ನೋಟು ಅಮಾನ್ಯೀಕರಣದ ಮೂಲಕ ಈ ದೇಶ ಕಂಡ ಅತ್ಯಂತ ದೊಡ್ಡ ಹಗರಣದ ರೂವಾರಿ ಎಂದು ಶತ್ರುಘ್ನ ಸಿನ್ಹಾ ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಹೊಗಳಿದ ಸಿನ್ಹಾ, ದೇಶದ ಜಾತ್ಯತೀತ ಸ್ವರೂಪ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದಾರೆ.