
ನವದೆಹಲಿ(ಏ.20): ಯಾವುದೇ ಹೊಸ ತೆರಿಗೆ ಇಲ್ಲದೇ ದೇಶದಿಂದ ಬಡತನವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದಲೇ, ಕಾಂಗ್ರೆಸ್ ನ್ಯಾಯ್ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ನ್ಯಾಯ್ ಯೋಜನೆ ಕುರಿತು ಪ್ರತಿಕ್ರಿಯೆ ನೀಡಿರುವ ಮನಮೋಹನ್ ಸಿಂಗ್, ಬಡವರಿಗೆ ವಾರ್ಷಿಕ 72,000 ರೂ. ಆರ್ಥಿಕ ಸಹಾಯದಿಂದಾಗಿ ದೇಶದ ಅರ್ಥ ವ್ಯವಸ್ಥೆಯೂ ಸುಧಾರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯ್ ಯೋಜನೆಯಿಂದಾಗಿ ದೇಶದ ಜಿಡಿಪಿಯ ಶೇ.12-1.4ರಷ್ಟರ ಮೇಲೆ ಮಾತ್ರ ಪರಿಣಾಮ ಬೀರಲಿದ್ದು, 3 ಟ್ರಿಲಿಯನ್ ಆರ್ಥಿಕತೆ ಹೊಂದಿರುವ ದೇಶಕ್ಕೆ ಇದನ್ನು ಸರಿದೂಗಿಸುವುದು ಕಷ್ಟಕರವೇನಲ್ಲ ಎಂದು ಸಿಂಗ್ ಹೇಳಿದ್ದಾರೆ.
ಇನ್ನು ನ್ಯಾಯ್ ಯೋಜನೆಗಾಗಿ ಹೆಚ್ಚಿನ ತೆರಿಗೆ ಹೇರುವ ಅವಶ್ಯಕತೆ ಇಲ್ಲ ಎಂದಿರುವ ಸಿಂಗ್, ಮಧ್ಯಮ ವರ್ಗಕ್ಕೆ ತೆರಿಗೆ ಹೊರೆ ಮಾಡದೇ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.