ಮತದಾನ ಮಾಡಿ ಮದುವೆಗೆ ಹೋದ್ರೆ 250 ರು.ಗಳ ಪುಸ್ತಕ ಉಚಿತ ಕುಂದಾಪುರದಲ್ಲಿ ಮತದಾನಕ್ಕೆ ಪ್ರೋತ್ಸಾಹ ಯೋಜನೆ, ಆಮಂತ್ರಣ ಪತ್ರಿಕೆಯಲ್ಲಿ ಜನಜಾಗೃತಿ ಸಂದೇಶ
ಉಡುಪಿ[ಏ. 08] ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನಿರುತ್ತದೆ, ವಧು-ವರರ ಹೆಸರು, ಹೆತ್ತವರ ಹೆಸರು, ಮದುವೆ ಎಲ್ಲಿ, ಯಾವಾಗ, ಮುಹೂರ್ತ ಎಷ್ಟು ಗಂಟೆಗೆ... ಇನ್ನೂ ಹೆಚ್ಚೆಂದರೇ ಆಶೀರ್ವಾದವೇ ಉಡುಗೊರೆ ಎಂಬ ಸಂದೇಶ ಇರುತ್ತದೆ.
ಆದರೆ ಇಲ್ಲೋಂದು ವಿಶೇಷ ವಿವಾಹ ಆಮಂತ್ರಣ ಪತ್ರಿಕೆ ಇದೆ, ಅದರಲ್ಲಿ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ, ನಾವು ಮಾರಾಟಕ್ಕಿಲ್ಲ, ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಸಂದೇಶವನ್ನೂ ಮುದ್ರಿಸಲಾಗಿದೆ, ಈ ಮೂಲಕ ಈ ಸಕಾಲಿಕ ಸಂದೇಶ ವಧುವರರ ಎಲ್ಲಾ ಬಂಧು ಬಳಗವನ್ನು ತಲುಪುತ್ತಿದೆ. ಮೇ 1ರಂದು ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ಪಾರ್ತಿಕಟ್ಟೆ ಶ್ರೀಶೇಷಕೃಷ್ಣ ಸಭಾಭವನದಲ್ಲಿ ನಡೆಯುವ ಗೌರಿ ಶ್ರೀನಿವಾಸ್ ಇವರ ಪುತ್ರ ಗಣೇಶ್ ಕುಮಾರ್ ಪಡುಕೋಣೆ ಮತ್ತು ಲೀಲಾವತಿ ನಾರಾಯಣ ಅವರ ಪುತ್ರಿ ಪೂರ್ಣಿಮಾ ಅವರ ವಿವಾಹ ಆಮಂತ್ರಣ ಪತ್ರಿಕೆ ಇದು.
undefined
ಈ ಆಮಂತ್ರಣ ಪತ್ರಿಕೆಯಲ್ಲಿ ವಧುವರರಿಗೆ ಆಶೀರ್ವಾದವೇ ಉಡುಗೊರೆ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ವಿಶೇಷ ಎಂದರೇ ಮತದಾನ ಮಾಡಿ ಮದುವೆಗೆ ಬಂದವರಿಗೆ ವಧುವರರ ಕಡೆಯಿಂದ ವಿಶೇಷ ಉಡುಗೊರೆ ನೀಡಲಾಗುತ್ತಿದೆ. ಮತದಾನ ಮಾಡಿದ ಬಗ್ಗೆ ಬೆರಳಿನ ಶಾಹಿ ಗುರುತು ತೋರಿಸಿದವರೆ, 250 ರೂ ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
ಡ್ರೈವರ್ ಸೀಟ್‌ನಲ್ಲಿ ದೇವತೆ ಕಂಡ ಚುನಾವಣಾಧಿಕಾರಿಗಳು!
ಅಲ್ಲದೇ ಮದುವೆ ಮಂಟಪದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವ್ಯಂಗ್ಯಚಿತ್ರ ಪ್ರದರ್ಶನ, ಪುರಾತನ ಜಾನಪದ ವಸ್ತುಗಳ ಪ್ರದರ್ಶನ ಸಹ ಇರಲಿದೆ. ವಿವಾಹ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿ, ಆಮಂತ್ರಣ ಪತ್ರಿಕೆಗೆ ದುಬಾರಿ ವೆಚ್ಚ ಮಾಡುವ ಕಾಲದಲ್ಲಿ, ಸಮಾಜಕ್ಕೆ ಮತದಾನ ಜಾಗೃತಿಯ ಸಂದೇಶದ ಜೊತೆಗೆ ಪುಸ್ತಕ ಓದುವುದನ್ನು ಪ್ರೋತ್ಸಾಹಿಸಿ, ಅತ್ಯಂತ ಅರ್ಥಪೂರ್ಣವಾಗಿ ವಿವಾಹವಾಗುತ್ತಿರುವ ಈ ಜೋಡಿ ಎಲ್ಲರಿಗೂ ಮಾದರಿಯಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಗಳು ಕೈಗೊಳ್ಳುತ್ತಿರುವ ಮತದಾನ ಜಾಗೃತಿ ಕಾರ್ಯಕ್ರಮಗಳೊಂದಿಗೆ ಇದೊಂದು ಅಪರೂಪದ ಮಾದರಿ ಜಾಗೃತಿ ಕಾರ್ಯಕ್ರಮವಾಗಿದೆ.