
ನವದೆಹಲಿ(ಏ.09): ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣೆ ಸಂದರ್ಭದಲ್ಲಿ ವಿಪಕ್ಷ ನಾಯಕರ ಮೇಲಿನ ಐಟಿ ದಾಳಿಯ ಕುರಿತು ಮಾಹಿತಿ ಪಡೆಯಲು, ಕೇಂದ್ರ ಚುನಾವಣಾ ಆಯೋಗ ಕೇಂದ್ರ ನೇರ ತೆರಿಗೆ ಮಂಡಳಿ ಮುಖ್ಯಸ್ಥ ಹಾಗೂ ಆದಾಯ ಕಾರ್ಯದರ್ಶಿಗೆ ಬುಲಾವ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಸಿಬಿಡಿಟಿ ಮುಖ್ಯಸ್ಥ ಪಿಸಿ ಮೂಡಿ ಹಾಗೂ ಆದಾಯ ಕಾರ್ಯದರ್ಶಿ ಎಬಿ ಪಾಂಡೆ ಅವರಿಗೆ ಚುನಾವಣಾ ಆಯೋಗ ವಿಪಕ್ಷ ನಾಯಕರ ಮೇಲೆ ದಾಳಿ ಕುರಿತಂತೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.
ಹಣಕಾಸು ಮತ್ತು ಕಂದಾಯ ಸಚಿವಾಲಯಗಳ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಚುನಾವಣೆ ವೇಳೆ ತಟಸ್ಥ ಧೋರಣೆ ಹೊಂದಿರುವುದು ಒಳ್ಳೆಯದು ಎಂದು ಚುನಾವಣಾ ಆಯೋಗ ಈ ಹಿಂದೆ ಸಲಹೆ ನೀಡಿತ್ತು.
ಅಲ್ಲದೇ ಚುನಾವಣೆಯಲ್ಲಿ ಕಪ್ಪುಹಣದ ಬಳಕೆಯಾಗುತ್ತಿರುವ ಅನುಮಾನ ಇದ್ದರೆ ಆಯಾ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಮಾಹಿತಿ ನೀಡಿ ದಾಳಿ ನಡೆಸಬೇಕು ಎಂದು ಆಯೋಗ ಸೂಚಿಸಿದೆ.