ಗಂಡಂದಿರ ನೋವು ತಾಳಲಾರದೇ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ. ಹೀಗಂತ ಕೊಪ್ಪಳ ಜಿಲ್ಲಾ ಬಿಜೆಪಿ ಮುಖಂಡ ಯಾವ ಅರ್ಥದಲ್ಲಿ ಹೇಳಿದ್ದಾರೆ..?
ಕೊಪ್ಪಳ,[ಮೇ.01]: ವಿಚ್ಚೇದನವಾದ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ತಿಪ್ಪೇರುದ್ರಸ್ವಾಮಿ ಹೇಳಿದ್ದಾರೆ.
ಕೊಪ್ಪಳದ ಶಿವಶಾಂತವೀರ ಮಂಗಲಭವನದಲ್ಲಿ ಇಂದು [ಬುಧವಾರ] ನಡೆದ ಲೋಕಸಭಾ ಚುನಾವಣೆಯ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, 'ನಾಲ್ಕು-ನಾಲ್ಕು ಹೆಂಡ್ತಿ ಮಾಡಿಕೊಂಡ ಗಂಡಂದಿರ ನೋವು ತಾಳಲಾರದೇ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ' ಎಂದು ಹೇಳಿದರು.
ಮೋದಿ ಬಂದ ಮೇಲೆ ನಾವು ತಲೆ ಎತ್ತಿ ಬದುಕುತ್ತಿದ್ದೇವೆ. ನರೇಂದ್ರ ಮೋದಿ ನಮ್ಮಣ್ಣ ಎಂದು ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿಬಲ್ ತಲಾಕ್ ನಿಷೇಧಿಸಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
‘ನಾವು ರಾಜ್ಯದಲ್ಲಿ ಯಾವದೇ ಕಾರಣಕ್ಕೂ ಮುಸ್ಲಿಂ ಜನರಿಗೆ ಟಿಕೆಟ್ ಕೊಡಲ್ಲ ಯಾಕಂದ್ರೆ ಅವರು ನಮ್ಮನ್ನು ನಂಬಿಲ್ಲ’ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಲ್ಲೇ ಕೊಪ್ಪಳದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.