ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭ

By Web DeskFirst Published Apr 10, 2019, 12:05 PM IST
Highlights

ಬಹುನಿರೀಕ್ಷಿತ 17ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಮೊದಲ ಹಂತದ ಚುನಾವಣೆಯಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 

ನವದೆಹಲಿ: ದೇಶದ ವಿವಿಧ 20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳು ಹಾಗೂ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆಗೂ ನಾಳೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ಎದುರಿಸುವ ಈ ಕ್ಷೇತ್ರಗಳಲ್ಲಿ ಮಂಗಳವಾರವೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಮನೆ-ಮನೆ ಪ್ರಚಾರ ಆರಂಭವಾಗಿದೆ.

ಆಂಧ್ರಪ್ರದೇಶದ 25, ಅರುಣಾಚಲ ಪ್ರದೇಶದ 2, ಅಸ್ಸಾಂನ 5, ಬಿಹಾರದ 4, ಛತ್ತೀಸ್‌ಗಢದ 1, ಜಮ್ಮು-ಕಾಶ್ಮೀರದ 2, ಮಹಾರಾಷ್ಟ್ರದ 7, ಮಣಿಪುರದ 1, ಮೇಘಾಲಯದ 2, ಮಿಜೋರಾಂನ 1, ನಾಗಾಲ್ಯಾಂಡ್‌ನ 1, ಒಡಿಶಾದ 4, ಸಿಕ್ಕಿಂನ 1, ತೆಲಂಗಾಣದ 17, ತ್ರಿಪುರಾದ 1, ಉತ್ತರಪ್ರದೇಶದ 8, ಪಶ್ಚಿಮಬಂಗಾಳದ 2, ಅಂಡಮಾನ್‌ನ 1 ಹಾಗೂ ಲಕ್ಷದ್ವೀಪದ 1 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಮತದಾನ ನಡೆಯಲಿದೆ.

ಇನ್ನು ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳು, ಅರುಣಾಚಲ ಪ್ರದೇಶದ 60, ಸಿಕ್ಕಿಂ 32 ವಿಧಾನಸಭೆ ಕ್ಷೇತ್ರಗಳಿಗೂ ನಾಳೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಆದರೆ, 147 ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿರುವ ಒಡಿಶಾದಲ್ಲಿ ಏ.11, 18, 23 ಮತ್ತು 29ಕ್ಕೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತ ಮತ್ತು ಸುಸೂತ್ರವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಭದ್ರತೆ ಸೇರಿದಂತೆ ಸರ್ವ ಸಿದ್ಧತೆ ಮಾಡಿಕೊಂಡಿದೆ.

ದೇಶಾದ್ಯಂತ ಒಟ್ಟು 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

click me!