ರೇವಣ್ಣ, ಶಿವರಾಂ ಎದುರೇ ಬಿಜೆಪಿ ಬೆಂಬಲಿಸ್ತೇವೆ ಎಂದ ಕಾಂಗ್ರೆಸ್ಸಿಗರು!

By Web DeskFirst Published Mar 30, 2019, 7:52 AM IST
Highlights

ನಮ್ಮ ಬೆಂಬಲ ಬಿಜೆಪಿಗೆ ಎಂದ ಕಾಂಗ್ರೆಸ್‌ ಕಾರ್ಯಕರ್ತರು| ಅರಸೀಕೆರೆಯಲ್ಲಿ ಸಚಿವ ಎಚ್‌.ಡಿ.ರೇವಣ್ಣ, ಕಾಂಗ್ರೆಸ್‌ನ ಮಾಜಿ ಸಚಿವ ಬಿ.ಶಿವರಾಂ ಸಮ್ಮುಖದಲ್ಲೇ ಘೋಷಣೆ

ಹಾಸನ[ಮಾ.30]: ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಜ್ವಲ್‌ ರೇವಣ್ಣ ಪರವಾಗಿ ಪ್ರಚಾರ ನಡೆಸಲು ಹಾಸನ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಸಿದ್ಧರಾಗಿದ್ದರೂ, ಪಕ್ಷದ ಕಾರ್ಯಕರ್ತರು ಮಾತ್ರ ಮೈತ್ರಿಯನ್ನು ವಿರೋಧಿಸಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ.

ಅರಸೀಕೆರೆಯಲ್ಲಿ ಸಚಿವ ಎಚ್‌.ಡಿ. ರೇವಣ್ಣ ಹಾಗೂ ಕಾಂಗ್ರೆಸ್‌ನ ಮಾಜಿ ಸಚಿವ ಬಿ.ಶಿವರಾಂ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಆದರೂ ಜಿಲ್ಲೆಯಲ್ಲಿ ಜೆಡಿಎಸ್‌ ದೌರ್ಜನ್ಯ ಮುಂದುವರೆದಿದ್ದು, ಕಾಂಗ್ರೆಸ್‌ ಕಾರ್ಯಕರ್ತರಿಗೆ ಮೂರು ಕಾಸಿನ ಬೆಲೆ ಇಲ್ಲದಂತಾಗಿದೆ.

ಪ್ರಜ್ವಲ್‌ ರೇವಣ್ಣ ಜಯಗಳಿಸಲು ಕಾಂಗ್ರೆಸ್‌ ಮತಗಳು ಅನಿವಾರ್ಯವಾಗಿವೆ. ಆದಕಾರಣ ಜೆಡಿಎಸ್‌ನ ಮುಖಂಡರು, ಸಚಿವರು ಹಾಗೂ ಶಾಸಕರಿಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ ಎಂಬ ಜ್ಞಾನೋದಯವಾಗಿದೆ ಎಂದು ಕಿಡಿಕಾರಿದರು. ನಮ್ಮ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್‌ ಅನ್ನು ಬೆಂಬಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ನಮ್ಮ ಬೆಂಬಲ ಬಿಜೆಪಿಗೆ ಎಂದು ಹೇಳುವ ಮೂಲಕ ಮುಖಂಡರನ್ನು ತಬ್ಬಿಬ್ಬಾಗುವಂತೆ ಮಾಡಿದರು.

click me!