ಚುನಾವಣೆ ಗೆಲುವಿನ ನಿರೀಕ್ಷೆ : ಕಾಂಗ್ರೆಸಿಗೆಷ್ಟು? ಜೆಡಿಎಸ್ ಗೆಷ್ಟು..?

By Web DeskFirst Published May 23, 2019, 7:52 AM IST
Highlights

ಲೋಕಸಭಾ ಚುನಾವಣೆಯ ಮಹಾ ಸಮರದ ಫಲಿತಾಂಶ ಇಂದು ಪ್ರಕಟವಾಗಲಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಹೆಚ್ಚು ಸ್ಥಾನಗಳನ್ನೇ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 

ಬೆಂಗಳೂರು :   ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟಕ್ಕೆ ಹಿನ್ನಡೆಯಾಗಲಿದೆ ಎಂದೇ ಹೇಳಿದ್ದರೂ ಗುರುವಾರ ಪ್ರಕಟವಾಗಲಿರುವ ಲೋಕಸಭೆಯ ಫಲಿತಾಂಶ ಮೈತ್ರಿಕೂಟದ ಪರವಾಗಿಯೇ ಬರಲಿದೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ.

ಒಳ ಏಟಿನ ಹೊರತಾಗಿಯೂ ಮೈತ್ರಿ  ಮಾಡಿಕೊಂಡು ಚುನಾವಣೆ ಎದುರಿಸಿದ್ದರಿಂದ ಬಿಜೆಪಿಯ ವಿರುದ್ಧದ ಮತಗಳು ಒಗ್ಗೂಡಿವೆ ಎಂದು ಕಾಂಗ್ರೆಸ್ ನಾಯಕರು ವ್ಯಾಖ್ಯಾನಿಸಿದ್ದು, ಇದರ ಪರಿಣಾಮವಾಗಿ ಕಾಂಗ್ರೆಸ್ ಕನಿಷ್ಠವೆಂದರೂ 8ರಿಂದ 10 ಸ್ಥಾನ ಗಳಿಸುತ್ತದೆ. 

ಶೇ.50 ರಷ್ಟು ಅವಕಾಶವಿರುವ ಕ್ಷೇತ್ರಗಳಲ್ಲಿ ಫಲಿತಾಂಶ ಕಾಂಗ್ರೆಸ್ ಪರ ವಾಲಿದರೆ ಆಗ ಸಂಖ್ಯೆ  14 ಮುಟ್ಟಿದರೂ ಅಚ್ಚರಿಪಡುವಂತಿಲ್ಲ ಎಂದೇ ಕಾಂಗ್ರೆಸಿಗರು ಹೇಳುತ್ತಾರೆ. ಅಷ್ಟೇ ಅಲ್ಲದೆ, ಜೆಡಿಎಸ್ ಕೂಡ ಕನಿಷ್ಠ ಎರಡರಿಂದ ನಾಲ್ಕು ಸ್ಥಾನಗಳನ್ನು ಗಳಿಸುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದ್ದು, ಮೈತ್ರಿಕೂಟ ಒಟ್ಟಾರೆ  14 ರಿಂದ 16 ಸ್ಥಾನಗಳನ್ನು ಗಳಿಸುವ ವಿಶ್ವಾಸವಿದೆ ಎಂದು ಹೇಳುತ್ತಾರೆ.

ಹಾಲಿ 10 ಮಂದಿ ಸಂಸದರನ್ನು ಹೊಂದಿರುವ ಕಾಂಗ್ರೆಸ್ ತುಮಕೂರು ಹೊರತುಪಡಿಸಿ ಉಳಿದ ಎಲ್ಲ ಸಂಸದರಿಗೂ ಟಿಕೆಟ್ ನೀಡಿದೆ. ಹೀಗಾಗಿ ಹಾಲಿ ಸಂಸದರ ಪೈಕಿ ಕನಿಷ್ಠವೆಂದರೂ ಆರರಿಂದ ಏಳು ಮಂದಿ ಮರು ಆಯ್ಕೆಯಾಗುತ್ತಾರೆ ಎಂದೇ ಕಾಂಗ್ರೆಸ್ ನಂಬಿದೆ. ಕಾಂಗ್ರೆಸ್‌ನ ಘಟಾನುಘಟಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ವಿ.ಎಸ್. ಉಗ್ರಪ್ಪ, ಪ್ರಕಾಶ್ ಹುಕ್ಕೇರಿ, ಡಿ.ಕೆ. ಸುರೇಶ್, ಚಂದ್ರಪ್ಪ ಗೆಲ್ಲುವ ಕುದುರೆಗಳು ಎಂದೇ ಕಾಂಗ್ರೆಸ್ ಭಾವಿಸಿದೆ. 

ಹಾಲಿ ಸಂಸದರ ಪೈಕಿ ಒಂದಿಬ್ಬರು ಸೋಲುಂಡರೂ ಬೆಂಗಳೂರು ಉತ್ತರದಿಂದ ಸ್ಪರ್ಧಿಸಿರುವ ಕೃಷ್ಣ ಬೈರೇಗೌಡ, ಬೀದರ್‌ನಿಂದ ಸ್ಪರ್ಧಿಸಿರುವ ಈಶ್ವರ್ ಖಂಡ್ರೆ ಅವರಂತಹ ನಾಯಕರು ಗೆಲ್ಲುವ ಮೂಲಕ ಈ ಕೊರತೆಯನ್ನು ನೀಗಿಸುತ್ತಾರೆ ಎಂದೇ ಭಾವಿಸಿದ್ದಾರೆ. ಇನ್ನು ಮೈಸೂರು, ಕೊಪ್ಪಳ, ರಾಯಚೂರಿನಲ್ಲಿ ಶೇ.50 ರಷ್ಟು ಅವಕಾಶವಿದ್ದು, ನಿರೀಕ್ಷಿಸಿದಷ್ಟು ಮೋದಿ ಹವಾ ಇಲ್ಲದೆ ಹೋದರೆ ಈ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದೆ ಎಂಬುದೇ ಲೆಕ್ಕಾಚಾರ. 

click me!