ಕಲಬುರಗಿಯಲ್ಲಿ ಕಾಂಗ್ರೆಸ್ ಸೋಲಲಿದೆ ಅನ್ನೋ ಬಿ.ಎಸ್ ಯಡಿಯೂರಪ್ಪ ಹೇಳಿಕೆಗೆ ಸಂಬಂಧಪಟ್ಟಂತೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ,(ಮೇ.06) : ರಾಜೀವ ಗಾಂಧಿ ನಂಬರ್ ಒನ್ ಭ್ರಷ್ಟನಾಗಿ ಸಾವನಪ್ಪಿದ್ದಾರೆ ಎನ್ನುವ ನರೇಂದ್ರ ಮೋದಿ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಕಿಡಿಕಾರಿದ್ದಾರೆ.
ಇಂದು (ಸೋಮವಾರ) ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಭ್ರಷ್ಟ ನಂಬರ್ ಒನ್ ಆಗಿ ಸತ್ತರು ಅಂತ ಮೋದಿ ಹೇಳಿದ್ದಾರೆ. ದೇಶಕ್ಕಾಗಿ ಪ್ರಾಣ ಕೊಟ್ಟ ರಾಜೀವ್ ಗಾಂಧಿ ಬಗ್ಗೆ ಹೀಗೆ ಮಾತನಾಡಿದ್ದಾರೆ. ಮೋದಿಗೆ ಹೃದಯವೇ ಇಲ್ಲ. ಸುಳ್ಳು ಹೇಳುವುದೇ ಮೋದಿಯ ಹುಟ್ಟು ಗುಣ. ಇಂತಹ ಪ್ರಧಾನಿ ಸಿಕ್ಕಿರೋದು ದೇಶದ ದುರ್ದೈವ ಎಂದು ವಾಗ್ದಾಳಿ ನಡೆಸಿದರು.
ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಸಿದ್ದರಾಮಯ್ಯ
ಚುನಾವಣಾ ಆಯೋಗ ನಮಗೊಂದು ನ್ಯಾಯ, ಬಿಜೆಪಿಗೊಂದು ನ್ಯಾಯ ಅನುಸರಿಸುತ್ತಿದೆ. ಪ್ರಜಾಪ್ರಭುತ್ವಕ್ಕೆ ದೊಡ್ಡ ಕೊಡಲಿಪೆಟ್ಟು ಬೀಳುತ್ತಿದೆ. ಪ್ರತಿಯೊಂದು ಸಂಸ್ಥೆಯವರಿಗೆ ಬಿಜೆಪಿಯವರು ಹೆದರಿಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲ್ತಾರೆ ಅನ್ನೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿಗೆ ರಾಜಕೀಯ ಜ್ಞಾನವೇ ಇಲ್ಲಾ, ಅವನಿಗೆ ಸಂಸ್ಕಾರವೇ ಇಲ್ಲ.
ಸಣ್ಣವನಿದ್ದಾಗಲೇ ಮನೆ ಬಿಟ್ಟು ಹೋಗಿದ್ದಾನೆ. ಹೀಗಾಗಿ ಮನೆಯಲ್ಲಿ ಸಂಸ್ಕಾರ ಸಿಕ್ಕಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಏಕವಚನದಲ್ಲೇ ಗುಡುಗಿದ ಖರ್ಗೆ, ಅಮೇಥಿ ಮತ್ತು ರಾಯಬರೇಲಿಯಲ್ಲಿ ಕಾಂಗ್ರೆಸ್ ಗೆದ್ರೆ ಮೋದಿ ತಮ್ಮ ಕ್ಷೇತ್ರಕ್ಕೆ ರಾಜೀನಾಮೆ ನೀಡ್ತಾರಾ? ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿಯನ್ನು ಟೀಕಿಸುವ ಭರದಲ್ಲಿ ಪ್ರಧಾನಿ ಮೋದಿ ಅವರು ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ನಂ.1 ಎಂದಿದ್ದರು. ಇದು ಸದ್ಯ ಭಾರೀ ಚರ್ಚೆ ಹುಟ್ಟು ಹಾಕಿದ್ದು, ಕಾಂಗ್ರೆಸ್ ಚುನಾವಣೆ ಆಯೋಗದ ಮೇಟ್ಟಿಲೇರಿದೆ.