ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ | ನಾಮಪತ್ರದಲ್ಲಿ ಆಸ್ತಿ ವಿವರ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ| ಶೋಭಾ ಕರಂದ್ಲಾಜೆ ಒಟ್ಟು ಆಸ್ತಿ 10.48 ಕೋಟಿ ರು.
ಉಡುಪಿ, [ಮಾ.26]: ಚಿಕ್ಕಮಗಳೂರು-ಉಡುಪಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ ವೇಳೆ 10.48 ಕೋಟಿಯಷ್ಟು ಆಸ್ತಿಯಿರುವುದಾಗಿ ಅಫಿಡವಿಟ್ನಲ್ಲಿ ಘೋಷಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರ ಆಸ್ತಿ ಕಳೆದ 5 ವರ್ಷಗಳಲ್ಲಿ 7.20 ಕೋಟಿ ರು.ಗಳಿಂದ 10.48 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಶುಕ್ರವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರು.
undefined
ಅಪಸ್ವರ ಮೀರಿ ಉಡುಪಿ-ಚಿಕ್ಕಮಗಳೂರು ಟಿಕೆಟ್ ಗಿಟ್ಟಿಸಿದ್ದು ಹೇಗೆ?
ಆದ್ರೆ ಇಂದು [ಮಂಗಳವಾರ] ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ, ಸಾಲ ಮತ್ತು ತೆರಿಗೆ ಜೊತೆಗೆ ತಮ್ಮ ಮೇಲೆ ಬಾಕಿ ಇರುವ ಮೊಕದ್ದಮೆಗಳ ವಿವರಗಳನ್ನೂ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.
2014ರಲ್ಲಿ ಅವರ 5.10 ಕೋಟಿ ರು. ಚರಾಸ್ತಿ ಮತ್ತು 2.10 ಕೋಟಿ ರು. ಸ್ಥಿರಾಸ್ತಿಗಳನ್ನು ಸೇರಿ ಒಟ್ಟು 7.20 ಕೋಟಿ ರು. ಆಸ್ತಿಯನ್ನು ಹೊಂದಿದ್ದರು. 17.62 ಲಕ್ಷ ರು. ತೆರಿಗೆಯನ್ನು ಸಲ್ಲಿಸಿದ್ದ ಅವರು, ವಿವಿಧ ಬ್ಯಾಂಕುಗಳಿಂದ 3.81 ಕೋಟಿ ರು.ಗಳಷ್ಟು ಸಾಲವನ್ನೂ ಪಡೆದಿದ್ದರು.
ಪ್ರಸ್ತುತ ಅವರು 7.38 ಕೋಟಿ ರು.ಗಳ ಚರಾಸ್ತಿ ಮತ್ತು 3.10 ಕೋಟಿ ರು.ಗಳ ಸ್ಥಿರಾಸ್ತಿಯನ್ನು ಸೇರಿ ಒಟ್ಟು 10.48 ಕೋಟಿ ರು. ಆಸ್ತಿಯನ್ನು ಅಫಿಡೇವಿಟ್ ನಲ್ಲಿ ಘೋಷಿಸಿದ್ದಾರೆ. ಜೊತೆಗೆ 24.16 ಲಕ್ಷ ರು.ತೆರಿಗೆ ಪಾವತಿ ಹಾಗೂ 4.99 ಕೋಟಿ ರು.ಸಾಲವನ್ನು ತೋರಿಸಿದ್ದಾರೆ.
ಒಟ್ಟು 1000 ಗ್ರಾಂ ತೂಕದ 33.05 ಲಕ್ಷ ರು. ಮೌಲ್ಯದ ಚಿನ್ನದ ಬಿಸ್ಕೆಟ್ಸ್, 22.00 ಲಕ್ಷ ರು.ಮೌಲ್ಯದ 650 ಗ್ರಾಂ ಚಿನ್ನಾಭರಣಗಳನ್ನು ಮತ್ತು ಬೆಳ್ಳಿಯ ಪರಿಕರಗಳು ಅವರ ಬಳಿ ಇವೆ.
ಅಲ್ಲದೇ 12 ಲಕ್ಷ ರು.ಗಳ ವಿಮೆ, 25 ಸಾವಿರ ರು. ನೀಡಿ ಪಡೆದ ಬಂದೂಕು ಪರವಾನಿಗೆ, ಜೊತೆಗೆ ತಮ್ಮ ಖಾತೆಯಿಂದ ಕಳುವಾದ 12 ಲಕ್ಷ ರು.ಗಳ ಮಾಹಿತಿಯನ್ನೂ ಅವರು ಅಫಿದವಿತ್ ನಲ್ಲಿ ಉಲ್ಲೇಖಿಸಿದ್ದಾರೆ.
3 ಮೊಕದ್ದಮೆ ಬಾಕಿ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಯುವತಿಯೊಬ್ಬಳ ಅತ್ಯಾಚಾರದ ಬಗ್ಗೆ ಭಾಷಣ ಮಾಡಿ ಕೋಮುದ್ವೇಷವನ್ನು ಹರಡಲು ಯತ್ನಿಸಿದ ಬಗ್ಗೆ, ಕಾಂಗ್ರೆಸ್ ನಾಯಕ ರೋಶನ್ ಬೇಗ್ ಅವರ ಮಾನಹಾನಿ ಮಾಡಿದ ಬಗ್ಗೆ ಮತ್ತು ಅಕ್ರಮವಾಗಿ ಶೆಲ್ ಎಂಬ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆಗಳು ಬಾಕಿ ಇವೆ.