ಶೋಭಾ ಕರಂದ್ಲಾಜೆಗೆ ತಪ್ಪದ ಸಾಮಾಜಿಕ ಜಾಲತಾಣದ ಕಿರಿಕಿರಿ | ಬಿಜೆಪಿಯ ಅಸಮಾಧಾನ ಕಾರ್ಯಕರ್ತರಿಂದಲೇ ವಿರೋಧ ಪಕ್ಷಕ್ಕೆ ಸಿಕ್ಕಿತು ಚುನಾವಣಾ ಅಸ್ತ್ರ | ಗೋಬ್ಯಾಕ್ ಶೋಭಾ ಅಭಿಯಾನ ಆಯ್ತು ಈಗ ನೋಟಾ ಅಭಿಯಾನ.
ಉಡುಪಿ, [ಮಾ.24]: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ಸಾಮಾಜಿಕ ಜಾಲತಾಣದ ಕಿರಿಕಿರಿ ತಪ್ಪುತ್ತಿಲ್ಲ.
ಅವರ ವಿರುದ್ಧ ಕೆಲವು ದಿನಗಳ ಹಿಂದೆ 'ಗೋಬ್ಯಾಕ್ ಶೋಭಾ' ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಕಾವು ಪಡೆದಿತ್ತು. ಅದು ವಿಫಲವಾಗುತ್ತಿದ್ದಂತೆ ಈಗ ಶೋಭಾ ಅವರು ವಿರುದ್ಧ 'ನೋಟಾ' ಮತ ಚಲಾಯಿಸುವಂತೆ ಕರೆ ನೀಡುವ ಅಭಿಯಾನವೊಂದು ಜೋರಾಗಿದೆ.
undefined
'ಗೋ ಬ್ಯಾಕ್ ಶೋಭಕ್ಕ': ಸ್ವ ಪಕ್ಷದಲ್ಲೇ ಸಂಸದೆ ವಿರುದ್ಧ ಚಳುವಳಿ!
ಶೋಭಾ ಅವರ ಮೇಲೆ ಅಸಮಾಧಾಮಗೊಂಡಿದ್ದ ಸ್ವಪಕ್ಷೀಯರ ಗುಂಪೊಂದು, ಈ ಬಾರಿ ಶೋಭಾ ಅವರಿಗೆ ಟಿಕೆಟ್ ನೀಡಬಾರದು ಎಂದು 'ಗೋಬ್ಯಾಕ್ ಶೋಭಾ' ಎಂಬ ಅಭಿಯಾನವನ್ನು ಆರಂಭಿಸಿದ್ದರು. ಆದರೇ ಶೋಭಾ ಅವರಿಗೆ ಟಿಕೇಟು ಸಿಗುತ್ತಿದ್ದಂತೆ ಈ ಗೋಬ್ಯಾಕ್ ಅಭಿಯಾನ ವಿಫಲವಾಗಿತ್ತು.
ಹಾಗಂತ ಶೋಭಾ ಅವರು ನಿಟ್ಟುಸಿರು ಬಿಡುವಷ್ಟರಲ್ಲಿ, ಅದೇ ಸಾಮಾಜಿತ ಜಾಲತಾಣಿಗರು, ಫೇಸ್ ಬುಕ್ ನಲ್ಲಿ, ಟ್ವಿಟರ್, ವಾಟ್ಸಾಪ್ ನಲ್ಲಿ 'ಓಟು ಶೋಭಾರಿಗಲಿಲ್ಲ, ನೋಟಾಕ್ಕೆ' ಎಂಬ ಅಭಿಯಾನ ಆರಂಭಿಸಿದ್ದು, ಶೋಭಾ ಅವರಿಗೆ ಹೊಸ ತಲೆನೋವಿಗೆ ಕಾರಣರಾಗಿದ್ದಾರೆ.
ಮಾತ್ರವಲ್ಲ ಈ ಅಭಿಯಾನಗಳು ಎದುರಾಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿವೆ. ಜೆಡಿಎಸ್ ಅಭ್ಯರ್ಥಿ ಪ್ರಮೋದ್, ಕಾಂಗ್ರೆಸ್ ನಾಯಕರು ಪ್ರತಿಯೊಂದು ಸಭೆಗಳಲ್ಲೂ ಗೋಬ್ಯಾಕ್ ಶೋಭಾ, ನೋಟಾ ಅಭಿಯಾನವನ್ನು ಪ್ರಸ್ತಾಪಿಸಿ ಲೇವಡಿ ಮಾಡುತ್ತಿದ್ದಾರೆ.
ತಿಂಗಳಿಂದ ಫೇಸ್ ಬುಕ್ ನಲ್ಲಿ 'ಗೋಬ್ಯಾಕ್ ಶೋಭಾ' ಎಂಬ ಪೇಜೊಂದು ಸಕ್ರಿಯವಾಗಿದ್ದು, ಅದರಲ್ಲಿ ಗೋಬ್ಯಾಕ್ ಶೋಭಾ ಎಂಬುದನ್ನು ಪ್ರಚಾರ ಮಾಡಲಾಗಿತ್ತು. ಅದು ವಾಟ್ಸಾಪ್ ನಲ್ಲಿಯೂ ಸಾಕಷ್ಟು ಶೇರ್ ಆಗಿತ್ತು. ಈಗ ಅದೇ ಪೇಜ್ ನಲ್ಲಿ ಓಟು 'ಶೋಭಾಳಿಗಲ್ಲ, ನೋಟಾಕ್ಕೆ' ಎಂಬ ಅಭಿಯಾನ ಆರಂಭವಾಗಿದೆ.
ಇದೇನೂ ಗಂಭೀರವಾಗಿ ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತಗಳಿಲ್ಲದಿದ್ದರೂ, ಶೋಭಾ ಅವರ ಮೇಲೆ ಅವರದ್ದೇ ಕಾರ್ಯಕರ್ತರ ಅಸಮಾಧಾನ, ಕಿರಿಕಿರಿ ಇನ್ನೂ ತಣಿದಿಲ್ಲ ಎಂಬುದನ್ನು ಬಹಿರಂಗಪಡಿಸಿದೆ.
ನೋಟಾ ಅಭಿಯಾನ ಮಾಡುವಂತಿಲ್ಲ
ಮತದಾರರಿಗೆ ನೋಟಾ ಎನ್ನುವ ಒಂದು ಆಯ್ಕೆ ಇದೆ ಎಂದು ಮಾಹಿತಿ ಕೊಡಬಹುದು, ಆದರೇ ಇಂತಹವರ ವಿರುದ್ಧ ನೋಟಾ ಚಲಾಯಿಸಿ ಅಂತ ಪ್ರಚಾರ, ಒತ್ತಾಯ ಮಾಡುವಂತಿಲ್ಲ, ಮಾಡಿದರೇ ಅದೂ ಕೂಡ ಒಂದು ಪ್ರಚೋದನೆಯೇ ಆಗುತ್ತದೆ. ಆದ್ದರಿಂದ ನೋಟಾಕ್ಕೆ ಮತ ಹಾಕಿ ಎಂದು ಅಭಿಯಾನ ಮಾಡುವುದು ಕಂಡು ಬಂದರೇ ಕ್ರಮ ಕೈಗೊಳ್ಳುತ್ತೇವೆ ಎಂದು ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೋರ್ಲಪಟಿ ಸ್ಪಷ್ಟನೆ ನಿಡಿದ್ದಾರೆ.