'ಬಿಜೆಪಿ ಅಭ್ಯರ್ಥಿ ಗೆದ್ದೆ ಗೆಲ್ತಾನೆ', ಇದು ಕಾಂಗ್ರೆಸ್ ಶಾಸಕ ನುಡಿದ ಭವಿಷ್ಯ..!

By Web Desk  |  First Published Apr 1, 2019, 6:17 PM IST

ಲೋಕಸಭಾ ಚುನಾವಣಾ ಪ್ರಚಾರದ ಪೂರ್ವಬಾವಿ ಸಭೆಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಚಿಕ್ಕಬಳ್ಳಾಪುರದಲ್ಲಿ ನಿಂತು ಬೆಂಗಳೂರು ದಕ್ಷಿಣ ಕ್ಷೇತ್ರದ ಭವಿಷ್ಯ ನುಡಿದಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. 


ಚಿಕ್ಕಬಳ್ಳಾಪುರ, [ಏ.01]:  ತೇಜಸ್ವಿ ಸೂರ್ಯ ಗೆದ್ದೇ ಗೆಲ್ತಾನೆ ಎಂದು ಕಾಂಗ್ರೆಸ್ ಶಾಸಕ‌ ಡಾ.ಕೆ. ಸುಧಾಕರ್ ಭವಿಷ್ಯ ನುಡಿದಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸುಧಾಕರ್, ಬಿಜೆಪಿಯಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹುಡುಗನಿಗೆ ಟಿಕೆಟ್ ಕೊಟ್ಟಿದ್ದಾರೆ.  

Tap to resize

Latest Videos

ನಾನು ಹೇಳಬಾರದು. ಆದ್ರೆ ಹೇಳುತ್ತಿದ್ದೇನೆ ಅವನೇ ಗೆಲ್ತಾನೆ. ತೇಜಸ್ವಿ ಸೂರ್ಯ ಅವನ ಮುಖದಿಂದ ಗೆಲ್ಲಲ್ಲ. ಸೂರ್ಯ ನಿಲ್ಲಲಿ ಚಂದ್ರ‌ ನಿಲ್ಲಿಲಿ ಅಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಹೇಳಿ ಆಚ್ಚರಿ ಮೂಡಿಸಿದರು. 

ಈ ಹೇಳಿಕೆ ನೀಡುವ ಮೂಲಕ ಸುಧಾಕರ್ ಅವರು ಪರೋಕ್ಷವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿ.ಕೆ. ಹರಿಪ್ರಸಾದ್ ಗೆ ಟಾಂಗ್ ಕೊಟ್ಟಿದ್ದಾರೆ. ಇದು ಬಾಯಿತಪ್ಪಿ ಆಡಿದ ಮಾತಲ್ಲ. ಹೇಳಬಾರದು ಆದರೂ ಹೇಳುತ್ತೇನೆ ಎಂದು ಹೇಳಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆಸಿದ್ದರೆ, ಮತ್ತೊಂದೆಡೆ ಬಿಜೆಪಿಯಿಂದ ಯುವಕ ತೇಜಸ್ವಿ ಸೂರ್ಯ ಅಖಾಡಕ್ಕಿಳಿದಿದ್ದಾರೆ.

ಮೊದಲಿಗೆ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಫಿಕ್ಸ್ ಎನ್ನಲಾಗಿತ್ತು. ಆದ್ರೆ ಕೊನೆಗಳಿಗೆಯಲ್ಲಿ ಬಿಜೆಪಿ ಹೈಕಮಾಂಡ್, ತೇಜಸ್ವಿ ಸೂರ್ಯ ಅವರಿಗೆ ಮಣೆ ಹಾಕಿದೆ.

ಇದೇ ಏಪ್ರಿಲ್ 18ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ.23 ರಂದು ಫಲಿತಾಂಶ ಪ್ರಕಟವಾಗಲಿದೆ.

click me!