ಬಿಜೆಪಿಗೆ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮತವು ಸಿಕ್ಕಿದೆ

By Web DeskFirst Published May 2, 2019, 8:40 AM IST
Highlights

ಲೋಕಸಭಾ ಚುನಾವಣೆ ಸಮರ ರಾಜ್ಯದಲ್ಲಿ ಮುಕ್ತಾಯವಾಗಿದೆ. ಇದೇ ಸಂದರ್ಭದಲ್ಲಿ  ರಾಜ್ಯ ನಾಯಕರ ವಾಕ್ಸಮರ ಮಾತ್ರ ಇನ್ನಾದರೂ ನಿಂತಿಲ್ಲ. ಇದೇ ಬೆನ್ನಲ್ಲೇ ಬಿಜೆಪಿ ನಾಯಕರೂ ಕೂಡ ಹೊಸ ಬಾಂಬ್ ಸಿಡಿಸಿದ್ದಾರೆ. 

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರಲ್ಲಿ ಒಮ್ಮತ ಮೂಡದೆ ಮೈಸೂರಿನಲ್ಲಿ ಬಿಜೆಪಿಗೆ ಮತ ಹಾಕಿದ ಪ್ರಸಂಗ ನಡೆದಿದೆ ಎಂಬ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ಬಿಜೆಪಿ ಸಹಮತ ವ್ಯಕ್ತಪಡಿಸಿದ್ದು, ಸಚಿವರ ಹೇಳಿಕೆಯಲ್ಲಿ ಸತ್ಯ ಇದೆ ಎಂದು ಅಭಿಪ್ರಾಯಪಟ್ಟಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಗುರುವಾರ ಡಾಲರ್ಸ್ ಕಾಲೋನಿಯಲ್ಲಿನ ನಿವಾಸಕ್ಕೆ ಆಗಮಿಸಿ ಬಿಜೆಪಿ ನಾಯಕರು ಶುಭಾಶಯ ಕೋರಿದರು. ಈ ವೇಳೆ ಜಿ.ಟಿ.ದೇವೇಗೌಡ ಹೇಳಿಕೆಯಲ್ಲಿ ಸತ್ಯ ಇದೆ. ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರ ಮತಗಳು ಸಹ ಬಿಜೆಪಿಗೆ ಬಂದಿವೆ ಎಂದು ಪಕ್ಷದ ಮುಖಂಡರಾದ ಸಿ.ಟಿ.ರವಿ, ಆರ್. ಅಶೋಕ್, ಪ್ರತಾಪ್ ಸಿಂಹ ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಸಚಿವ ಜಿ.ಟಿ. ದೇವೇಗೌಡ ಅವರು ನಿಜ ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ. ಇದನ್ನು ಬಹಿರಂಗವಾಗಿ ಒಪ್ಪಿಕೊಂಡು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ನಾಯಕತ್ವಕ್ಕೆ ಕಾಂಗ್ರೆಸ್‌ನಲ್ಲಿ ಅಪಸ್ವರಪ್ರಾರಂಭವಾಗಿದೆ. ಬೂದಿ ಮುಚ್ಚಿದ
ಕೆಂಡಂದಂತಿರುವ ಭಿನ್ನಮತ ಮೇ 23 ರ ಬಳಿಕ ಸ್ಫೋಟಗೊಳ್ಳಲಿದೆ ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬಿಜೆಪಿಗೆ ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರ ಮತಗಳು ಸಹ ಬಂದಿವೆ. ಮೊದಲಿನಿಂದಲೂ ಮೈಸೂರಿ ನಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸತತವಾಗಿ ಬೆಂಬಲಿಸುತ್ತಿದ್ದಾರೆ. ಮಿತ್ರ ಪಕ್ಷದವರು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎನ್ನುವುದಕ್ಕೆ 1998 ರಿಂದ 2014 ರವರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಿಸಿರುವುದೇ ಸಾಕ್ಷಿ.
ಈಗಲೂ ಅದೇ ವಿಶ್ವಾಸ ಇದೆ ಎಂದರು. 

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಸಚಿವ ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತ್ರವಲ್ಲ ಮಂಡ್ಯದಲ್ಲಿಯೂ ಸಹ ಬಹಿರಂಗವಾಗಿ ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಹಾಸನ ಮತ್ತು ತುಮಕೂರಿನಲ್ಲಿ ಕೆಲವರು ಒಳಗೆ, ಕೆಲವರು ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ ಎಂದರು. 

click me!