'3 ತಿಂಗಳಿನಿಂದ ಮಂಕಾಗಿದ್ದೇನೆ, ಯಡಿಯೂರಪ್ಪ ಮಾಟ ಮಾಡಿಸಿರಬೇಕು'

By Web DeskFirst Published Apr 3, 2019, 8:15 AM IST
Highlights

ನನಗೆ ಯಡಿಯೂರಪ್ಪ ಮಾಟ ಮಾಡಿಸಿದ್ದಾರೆ: ಬೇಳೂರು| ಕೆಲ ದಿನಗಳ ಹಿಂದೆ ಯುಡಿಯೂರಪ್ಪ ಕೇರಳಕ್ಕೆ ತೆರಳಿದ್ದರು. ಅಲ್ಲಿಂದ ನನಗೆ ಮಂಕು ಕವಿದಿತ್ತು

ಶಿವಮೊಗ್ಗ[ಏ.03]: ಮೂರು ತಿಂಗಳಿನಿಂದ ನನಗೆ ಮಂಕು ಕವಿದಂತಾಗಿದ್ದು, ಇದನ್ನು ನೋಡಿದರೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾಟ ಮಾಡಿಸಿರುವಂತಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬಾಂಬ್‌ ಸಿಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ ಕೆಲವು ದಿನಗಳಿಂದ ಮಂಕಾಗಿದ್ದು ನಿಜ. ಹೀಗಾಗಿ ಮೂರು ತಿಂಗಳಿಂದ ಇತ್ತ ಬರಲಾಗಲಿಲ್ಲ. ಈಗ ನಿಧಾನವಾಗಿ ಸರಿಯಾಗುತ್ತಿದ್ದೇನೆ ಎಂದರು.

ಕೆಲ ದಿನಗಳ ಹಿಂದೆ ಯುಡಿಯೂರಪ್ಪ ಕೇರಳಕ್ಕೆ ತೆರಳಿದ್ದರು. ಅಲ್ಲಿಂದ ನನಗೆ ಮಂಕು ಕವಿದಿತ್ತು. ಆದರೆ ನಾನೀಗ ಮಾಟಕ್ಕೆ ಪ್ರತಿತಂತ್ರ ರೂಪಿಸಿದ್ದು, ಅದಕ್ಕೀ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕೈಗೆ ಧರಿಸಿದ್ದ ಬಂಗಾರದ ಆಭರಣವನ್ನು ಪತ್ರಕರ್ತರತ್ತ ತೋರಿಸಿದರು.

ಕಳೆದ ಮೂವತ್ತೈದು ವರ್ಷದಿಂದ ರಾಜಕೀಯದಲ್ಲಿರುವ ಯಡಿಯೂರಪ್ಪನವರು ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳುವಂತಹ ಪರಿಸ್ಥಿತಿ ಬಂದಿರುವುದು ದುರಂತ. ಲೋಕಸಭಾ ಚುನಾವಣೆ ಬಳಿಕ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿಯನ್ನೆ ಮೂಲೆಗುಂಪು ಮಾಡಿದಂತೆ ಬಿ.ಎಸ್‌.ಯಡಿಯೂರಪ್ಪ ಕೂಡ ಬಿಜೆಪಿಯಲ್ಲಿ ಮೂಲೆ ಗುಂಪಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರಿಗೆ ಹಿಂದುತ್ವದ ಗಾಳಿ ಬೀಸಲಾರಂಭಿಸುತ್ತದೆ. ಹಿಂದುತ್ವದ ಬಗ್ಗೆ ಹೇಳಿಕೆಗಳನ್ನು ನೀಡುತ್ತಾ ಮತ ಯಾಚಿಸುತ್ತಿದ್ದಾರೆ. ನಾವೆಲ್ಲರು ಹಿಂದೂಗಳೆ. ನಾವು ಪೂಜೆ, ಪುನಸ್ಕಾರ ಎಲ್ಲವನ್ನೂ ಮಾಡುತ್ತೇವೆ. ನಮಗೆ ಹಿಂದೂತ್ವದ ಬಗ್ಗೆ ಬಿಜೆಪಿಯಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಜಿಲ್ಲೆಗೆ ಸಚಿವ ಡಿ. ಕೆ. ಶಿವಕುಮಾರ್‌ ಭೇಟಿಯ ನಂತರ ಜೆಡಿಎಸ್‌-ಕಾಂಗ್ರೆಸ್‌ನಲ್ಲಿದ್ದ ಸಣ್ಣಪುಟ್ಟಭಿನ್ನಾಭಿಪ್ರಾಯ ಶಮನವಾಗಿದೆ. ಒಗ್ಗಟ್ಟಿನಿಂದ ಹೋಗಲು ಸಲಹೆ ಹಾಗೂ ಸೂಚನೆ ನೀಡಿದ್ದಾರೆ. ಪಕ್ಷ ಹಾಗೂ ಹೈಕಮಾಂಡ್‌ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಸಂಸದರಾಗಿ ಯಾವುದೇ ಸಾಧನೆ ಮಾಡಲಿಲ್ಲ. ಜಿಲ್ಲೆಯ ಸಮಸ್ಯೆ ಬಗೆಹರಿಸಲು ಸಂಪೂರ್ಣ ವಿಫಲರಾಗಿದ್ದಾರೆ. ಜನರ ಪರವಾಗಿ ಸಂಸತ್‌ನಲ್ಲಿ ಧ್ವನಿ ಎತ್ತಲಿಲ್ಲ. ಮತ್ತೆ ಅವರನ್ನು ಆಯ್ಕೆ ಮಾಡಿದರೆ ಆಸ್ತಿ, ಹೊಸ ಹೋಟೆಲ್‌ಗಳನ್ನು ಮಾಡುವುದನ್ನು ಬಿಟ್ಟು ಬೇರೇನು ಮಾಡುವುದಿಲ್ಲ ಎಂದು ಹರಿಹಾಯ್ದರು.

ಮಂಡ್ಯ ಲೋಕಸಭಾ ಕ್ಷೇತ್ರ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಆಸ್ತಿ ಕುರಿತಾಗಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಆದರೆ ಬಿ.ವೈ. ರಾಘವೇಂದ್ರರ ಆಸ್ತಿ ಕಳೆದ 5 ತಿಂಗಳಲ್ಲಿ 12 ಕೋಟಿ ಹೆಚ್ಚಳವಾಗಿದೆ. ಇದನ್ನು ಪ್ರಶ್ನೆ ಮಾಡುವವರು ಯಾರು ಎಂದರು.

ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಬೇಳೂರು, ಜಿಯೋ ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನೇ ಮುಚ್ಚಿ ಹಾಕುವ ಹುನ್ನಾರ ನಡೆಸಲಾಗುತ್ತಿದೆ. ಅಲ್ಲದೆ, ಕಳೆದ 5 ವರ್ಷದಿಂದ ಸುಮ್ಮನಿದ್ದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಸಮೀಪಿಸುತ್ತಿದ್ದಂತೆ ರೈತರ ಕುರಿತು, ಲೋಕಪಾಲ್‌ ಮಸೂದೆ ಕುರಿತು, ಶ್ರೀರಾಮ ಮಂದಿರ ಕುರಿತು ಪ್ರಸ್ತಾಪ ಮಾಡುತ್ತಿರುವುದಾದರೂ ಏಕೆ? ಬಿಜೆಪಿ ದೇಶವನ್ನು ಅತಂತ್ರ ಮಾಡಲು ಹೊರಟಿದೆ ಎಂದು ದೂರಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗೀನಾಥ್‌, ದೇಶದ ಆಸ್ತಿಯಾಗಿರುವ ಸೈನಿಕರನ್ನು ಮೋದಿ ಸೈನಿಕರು ಎಂದು ಹೇಳಿಕೆ ನೀಡುವುದರ ಮೂಲಕ ಸೈನಿಕರನ್ನು ಅವಮಾನಿಸಿದ್ದಾರೆ. ಈ ರೀತಿ ರಾಜಕೀಯ ದುರುದ್ದೇಶದಿಂದ ಕೂಡಿದ ಹೇಳಿಕೆಗಳನ್ನು ಖಂಡಿಸುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್‌, ನಗರಪಾಲಿಕೆ ಸದಸ್ಯ ಪಿ.ವಿ. ವಿಶ್ವನಾಥ್‌, ಸಿ.ಎಸ್‌.ಚಂದ್ರಭೂಪಾಲ್‌, ರಾಮಕೃಷ್ಣ, ಜಿ.ಡಿ. ಮಂಜುನಾಥ್‌, ನಾಗರಾಜ್‌ ಇನ್ನಿತರರು ಉಪಸ್ಥಿತರಿದ್ದರು.

click me!