
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚಾಯಿತಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯಕ್ಕೆ ಸೀಮಿತವಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಲೇವಡಿ ಮಾಡಿದ್ದಾರೆ.ಅಲ್ಲದೆ, ಜೆಡಿಎಸ್ ಏನಿದ್ದರೂ ಎಚ್‌ಎಂಟಿಗೆ (ಹಾಸನ, ಮಂಡ್ಯ, ತುಮಕೂರು) ಮಾತ್ರ ಸೀಮಿತವಾಗಿದೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
ಭಾನುವಾರ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಉಂಟಾಗಿರುವ ಭಿನ್ನಮತವನ್ನು ಶಮನಗೊಳಿಸುವಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೊಡಗಿದ್ದಾರೆ. ಜಗಳ ಬಿಡಿಸುವುದರಲ್ಲಿ, ಪಂಚಾಯಿತಿ ಮಾಡಿಸುವುದರಲ್ಲಿಯೇ ನಿರತರಾಗಿದ್ದಾರೆ. ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಉಭಯ ಪಕ್ಷಗಳು ಜನತೆಯಲ್ಲಿ ಗೊಂದಲವನ್ನುಂಟು ಮಾಡುತ್ತಿವೆ ಎಂದರು.
ಚುನಾವಣೆ ನಂತರ ರಾಜ್ಯದಲ್ಲಿನ ಮೈತ್ರಿಸರ್ಕಾರ ಪತನಗೊಳ್ಳಲಿದೆ. ಒಳಜಗಳ, ಕಿತ್ತಾಟಗಳಿಂದಲೇ ಸಮ್ಮಿಶ್ರ ಸರ್ಕಾರವು ಬಿದ್ದು ಹೋಗಲಿದೆ. ಮಿತ್ರ ಪಕ್ಷದಲ್ಲಿನ ಭಿನ್ನಮತ ಬಿಜೆಪಿಗೆ ಸಹಕಾರಿಯಾಗಲಿದ್ದು, ಪಕ್ಷವು ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ. ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಲು ತೆರಳಿದಾಗ ಕಂಡ ದೃಶ್ಯವು ಕಾಂಗ್ರೆಸ್ ಪಾರ್ಟಿ ತಮ್ಮ ಚಿಹ್ನೆಯನ್ನು ಬದಲಾಯಿಸಿಕೊಂಡು ಮುಸ್ಲಿಂ ಲೀಗ್ ಚಿಹ್ನೆಯನ್ನು ಪಡೆದುಕೊಂಡಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಇಡೀ ಮೆರವಣಿಗೆಯಲ್ಲಿ ಕಾಂಗ್ರೆಸ್ ಬಾವುಟ ಚಿಹ್ನೆ ಇಲ್ಲದೆ ಕೇವಲ ಮುಸ್ಲಿಂಲೀಗ್ ಬಾವುಟ ಚಿಹ್ನೆಗಳ ಭರಾಟೆಯೇ ಹೆಚ್ಚಾಗಿತ್ತು ಎಂದು ಕಿಡಿಕಾರಿದರು.
ಅನುದಾನದ ಲೆಕ್ಕಪತ್ರ ಪರಿಶೀಲನೆಯಾಗಬೇಕು:
ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನೇಕ ಯೋಜನೆಗಳಿಗೆ ಸಾವಿರಾರು ಕೋಟಿ ರು. ಅನುದಾನ ಒದಗಿಸಿದ್ದರೂ ರಾಜ್ಯ ಸರ್ಕಾರ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಬೇರೊಂದು ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ. ಈ ಕುರಿತು ಲೆಕ್ಕ ಪರಿಶೋಧನೆಯಾಗಬೇಕು ಎಂದು ಇದೇ ವೇಳೆ ಲಿಂಬಾವಳಿ ಒತ್ತಾಯಿಸಿದರು.
ಜೆಡಿಎಸ್-ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಏನು ಸಾಧನೆ ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರವು ಏನು ಮಾಡಿಲ್ಲ ಎಂದು ಸುಳ್ಳು ಪ್ರಚಾರದ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಳೆದ 5 ವರ್ಷದಲ್ಲಿ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯಕ್ಕೆ ವಿಶೇಷ ಒತ್ತು ನೀಡಿ ಸಾವಿರಾರು ಕೋಟಿ ರು. ಅನುದಾನ ಒದಗಿಸಿದೆ. ನಿರ್ಭಯ ಯೋಜನೆಯಡಿ 650 ಕೋಟಿ, ಅಮೃತ ಯೋಜನೆಯಡಿ ನಗರಗಳ ಅಭಿವೃದ್ಧಿಗೆ 1435 ಕೋಟಿ, ಪ್ರಧಾನಿಮಂತ್ರಿ ಆವಾಸ್ ಯೋಜನೆಯಡಿ 2,640 ಕೋಟಿ ಅನುದಾನ ಒದಗಿಸಲಾಗಿದೆ. 3.78 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.
ಬೆಂಗಳೂರು ಮೆಟ್ರೋ ಯೋಜನೆಯ ಒಂದು ಮತ್ತು ಎರಡನೇ ಹಂತಗಳಿಗೆ 5,260 ಕೋಟಿ, ಕುಡಿಯುವ ನೀರು ಯೋಜನೆಗೆ 1,762 ಕೋಟಿ, ಬರ ಪರಿಹಾರಕ್ಕೆ ಎನ್‌ಡಿಆರ್‌ಎಫ್‌ನಿಂದ 7,170 ಕೋಟಿ ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಮತ್ತು ವಿಸ್ತರಣೆಗೆ ಕೇಂದ್ರವು 17,557 ಕೋಟಿ, ಐದು ನೀರಾವರಿ ಯೋಜನೆಗಳಿಗೆ 1,833 ಕೋಟಿ, ಸ್ವಚ್ಛ ಭಾರತ ಯೋಜನೆಯಡಿ 44 ಲಕ್ಷ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಫಸಲ್ ಭಿಮಾ ಯೋಜನೆಯಡಿ 46 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. 14ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಮೂರು ವರ್ಷದಲ್ಲಿ 2 ಲಕ್ಷ ಕೋಟಿ ಅನುದಾನ ಒದಗಿಸಲಾಗಿದೆ. ಯುಪಿಎ ಸರ್ಕಾರದ ವೇಳೆ 13 ಹಣಕಾಸು ಆಯೋಗದಲ್ಲಿ ಐದು ವರ್ಷಕ್ಕೆ 75 ಸಾವಿರ ಕೋಟಿ ಅನುದಾನ ಒದಗಿಸಲಾಗಿತ್ತು ಎಂದು ಲಿಂಬಾವಳಿ ಮಾಹಿತಿ ನೀಡಿದರು.