ಈಗ ನ್ಯಾಯ ಸಿಗಲಿದೆ ಎಂದು ಕಾಂಗ್ರೆಸ್ ಪ್ರಚಾರ

Published : Apr 08, 2019, 07:27 AM IST
ಈಗ ನ್ಯಾಯ ಸಿಗಲಿದೆ ಎಂದು ಕಾಂಗ್ರೆಸ್ ಪ್ರಚಾರ

ಸಾರಾಂಶ

 ‘ಈಗ ಸಿಗಲಿದೆ ನ್ಯಾಯ’ ಎಂಬ ಘೋಷವಾಕ್ಯದೊಂದಿಗೆ ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದ್ದು, ಇದಕ್ಕಾಗಿ ಭಾರಿ ಪ್ರಮಾಣದ ಜಾಹೀರಾತು ಪ್ರಚಾರಾಂದೋಲನಕ್ಕೆ ಸಿದ್ಧತೆ ಮಾಡಿಕೊಂಡಿದೆ.

ನವದೆಹಲಿ :  ‘ಈಗ ಸಿಗಲಿದೆ ನ್ಯಾಯ’ (ಅಬ್‌ ಹೋಗಾ ನ್ಯಾಯ್‌) ಎಂಬ ಘೋಷವಾಕ್ಯದೊಂದಿಗೆ ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದ್ದು, ಇದಕ್ಕಾಗಿ ಭಾರಿ ಪ್ರಮಾಣದ ಜಾಹೀರಾತು ಪ್ರಚಾರಾಂದೋಲನಕ್ಕೆ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ಆಳ್ವಿಕೆಯಲ್ಲಿ ದೇಶಾದ್ಯಂತ ಎಲ್ಲಾ ವರ್ಗದ ಜನರಿಗೆ ಅನ್ಯಾಯವಾಗುತ್ತಿದ್ದು, ನಾವು ನ್ಯಾಯ ಕೊಡಿಸುತ್ತೇವೆ ಎಂಬುದು ಕಾಂಗ್ರೆಸ್‌ನ ಪ್ರಚಾರದ ತಿರುಳಾಗಲಿದೆ.

ಈ ಕುರಿತು ಭಾನುವಾರ ಮಾಹಿತಿ ನೀಡಿದ ಪಕ್ಷದ ಹಿರಿಯ ನಾಯಕ ಆನಂದ್‌ ಶರ್ಮಾ, ಜನರ ಹೃದಯವನ್ನು ಗೆಲ್ಲುವ ರೀತಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದೇವೆ. ಇದಕ್ಕಾಗಿ ಖ್ಯಾತ ಸಾಹಿತಿ ಜಾವೇದ್‌ ಅಖ್ತರ್‌ ಅವರು ‘ಮೈ ಹಿ ತೋ ಹಿಂದೂಸ್ತಾನ್‌ ಹೂಂ’ (ನಾನೇ ಭಾರತ) ಎಂಬ ಗೀತೆ ರಚಿಸಿದ್ದಾರೆ. ನಿಖಿಲ್‌ ಅಡ್ವಾಣಿ ಅವರು ಜಾಹೀರಾತು ಸಿನಿಮಾ ನಿರ್ದೇಶಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಪ್ರಚಾರ ಸಮಿತಿ ಸದಸ್ಯರು ಸೇರಿ ಯುವ ತಂಡದೊಂದಿಗೆ ಪ್ರಚಾರಾಂದೋಲನದ ರೂಪರೇಷೆ ನಿರ್ಧರಿಸಿದ್ದಾರೆ. ಸಿಲ್ವರ್‌ಪುಶ್‌, ಡಿಸೈನ್‌ ಬಾಕ್ಸ್‌, ನಿಕ್ಸನ್‌ ಮುಂತಾದ ಜಾಹೀರಾತು ಏಜೆನ್ಸಿಗಳಿಗೆ ಪ್ರಚಾರದ ಹೊಣೆ ನೀಡಲಾಗಿದೆ. ಟೀವಿ ಫಿಲ್ಮ್‌, ಸಿನಿಮಾ ಜಾಹೀರಾತು, ರೇಡಿಯೋ ಜಿಂಗಲ್‌, ಹೋರ್ಡಿಂಗ್‌ಗಳು, ಡಿಜಿಟಲ್‌ ಸ್ಕ್ರೀನ್‌, ಮುದ್ರಣ ಮಾಧ್ಯಮದಲ್ಲಿ ಜಾಹೀರಾತು, ಸೋಷಿಯಲ್‌ ಮೀಡಿಯಾ ಹಾಗೂ ಸಾರ್ವಜನಿಕ ಸಾರಿಗೆಗಳಲ್ಲಿ ಜಾಹೀರಾತು ಸೇರಿದಂತೆ 360 ಡಿಗ್ರಿ ವೇದಿಕೆಗಳಲ್ಲಿ ಪ್ರಚಾರಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷ ತನ್ನ ಜಾಹೀರಾತು ಆಂದೋಲನವನ್ನು ಹಿಂದಿಯಲ್ಲದೆ ಮರಾಠಿ, ಬಂಗಾಳಿ, ಗುಜರಾತಿ, ಅಸ್ಸಾಮಿ ಹಾಗೂ ಮಲೆಯಾಳಂ ಭಾಷೆಗಳಲ್ಲೂ ರೂಪಿಸಿದೆ. ಸಾವಿರಾರು ಕಂಟೇನರ್‌ ಟ್ರಕ್‌ಗಳು ಪಕ್ಷದ ಸಂದೇಶವನ್ನು ಸಾರುವ ಡಿಜಿಟಲ್‌ ಬೋರ್ಡ್‌ಗಳನ್ನು ಹೊತ್ತು ನಿನ್ನೆಯಿಂದಲೇ ದೇಶಾದ್ಯಂತ ಸಂಚರಿಸಲು ಆರಂಭಿಸಿವೆ. ಎನ್‌ಡಿಎ ಆಡಳಿತದಲ್ಲಿ ಜನರು ಇಂದು ಫೋನ್‌ನಲ್ಲಿ ಮಾತಾಡುವುದಕ್ಕೂ ಹೆದರುವ ಸ್ಥಿತಿಯಿದೆ. ದೇಶಾದ್ಯಂತ ಅನ್ಯಾಯದ ವಾತಾವರಣ ಮೂಡುತ್ತಿದೆ. ಹೀಗಾಗಿ ದೇಶಕ್ಕಿಂದು ನ್ಯಾಯದ ತುರ್ತು ಅಗತ್ಯವಿದೆ. ಅದನ್ನು ಕಾಂಗ್ರೆಸ್‌ ದೊರಕಿಸಿಕೊಡಲಿದೆ ಎಂದು ಹೇಳಿದರು.

ಜಾಹೀರಾತಿನಲ್ಲಿ ಬಿಜೆಪಿಯೇ ದೇಶಕ್ಕೆ ನಂ.1 ಪಕ್ಷ. ಅವರನ್ನು ನಾವು ಮೀರಿಸಲು ಸಾಧ್ಯವಿಲ್ಲ. ಧನಬಲದಲ್ಲಿ ಅವರಿಗೆ ನಾವು ಸಾಟಿಯಲ್ಲ. ಆದರೆ, ಸತ್ಯ ಮತ್ತು ಜನರ ಹೃದಯಕ್ಕೆ ಹತ್ತಿರವಾಗುವ ಮೂಲಕ ನಾವು ಅವರನ್ನು ಎದುರಿಸುತ್ತೇವೆ. ಜಿಂಗಲ್‌ಗಳು ಹಾಗೂ ರೇಡಿಯೋಗಳನ್ನು ಪಕ್ಷದ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುತ್ತೇವೆ ಎಂದು ಪ್ರಚಾರ ವಿಭಾಗದ ರಣದೀಪ್‌ ಸಿಂಗ್‌ ಸುರ್ಜೇವಾಲಾ ತಿಳಿಸಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!