
ಗಾಂಧಿನಗರ(ಮಾ.30): ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಕ್ಷೇತ್ರವಾದ ಗುಜರಾತ್ ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಮಪತ್ರ ಸಲ್ಲಿಸಿದ್ದಾರೆ.
"
ಬೃಹತ್ ಸಾರ್ವಜನಿಕ ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿದ ಅಮಿತ್ ಶಾ, ಚುನಾವಣಾ ಅಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ಮಾತನಾಡಿದ ಅಮಿತಗ್ ಶಾ ‘ನಾನು ಇಂದು ಏನಾಗಿದ್ದೇನೋ ಅದಕ್ಕೆ ಬಿಜೆಪಿ ಕಾರಣ, ಭಾರತೀಯ ಜನತಾ ಪಕ್ಷಕ್ಕೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ಪಕ್ಷ ಇಲ್ಲದಿದ್ದರೆ ನಾನು ಶೂನ್ಯ..’ಎಂದು ಭಾವುಕರಾಗಿ ಹೇಳಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಸರ್ದಾರ್ ವಲ್ಲಭಬಾಯಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅಮಿತ್ ಶಾ, ‘ಒಂದು ವೇಳೆ ಬಿಜೆಪಿ ನನ್ನ ಜೀವನದಿಂದ ದೂರಾದರೇ ಉಳಿಯುವುದು ಶೂನ್ಯ’ ಎಂದು ಹೇಳಿದ್ದಾರೆ.
ಇನ್ನು ಅಹಮದಾಬಾದ್‌ನ ನಾರಾಯಣಪುರದಲ್ಲಿ ನಡೆದ ರ್ಯಾಲಿಯಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಆದರೆ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಗುಜರಾತ್‌ನಲ್ಲಿ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏ.23ರಂದು ಮತದಾನ ನಡೆಯಲಿದೆ. ಅದರಂತೆ ಕರ್ನಾಟಕದಲ್ಲಿ 2 ಹಂತದ ಚುನಾವಣೆ ನಡೆಯಲಿದ್ದು, ಏ.18 ಮತ್ತು ಏ.23ರಂದು ಮತದಾನ ನಡೆಯಲಿದೆ. ಮೇ 23, 2019ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.