ನಕ್ಸಲರ ಗುಂಡಿಗೆ ಚುನಾವಣಾಧಿಕಾರಿ ಬಲಿ

By Web DeskFirst Published Apr 18, 2019, 8:46 AM IST
Highlights

2ನೇ ಹಂತದ ಮತದಾನಕ್ಕಾಗಿ ಬೂತ್‌ವೊಂದಕ್ಕೆ ಚುನಾವಣಾ ಸಿಬ್ಬಂದಿ ಜೊತೆಗೆ ಸಂಜುಕ್ತಾ ಅವರು ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ, ಕಂಡ ಶಂಕಾಸ್ಪದ ವಸ್ತು ಏನೆಂದು ಪರೀಕ್ಷಿಸಲು ಕಾರಿನಿಂದ ಕೆಳಗಿಳಿದು ಬಂದಾಗ, ಸಂಜುಕ್ತಾ ಅವರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ

ಫುಲ್ಬಾನಿ(ಒಡಿಶಾ): 2ನೇ ಹಂತದ ಲೋಕಸಭಾ ಚುನಾವಣೆಗೆ ಸಿದ್ಧತೆಯಲ್ಲಿದ್ದ ಒಡಿಶಾದಲ್ಲಿ ಮಾವೋವಾದಿಗಳು ಕರ್ತವ್ಯ ನಿರತ ಮಹಿಳಾ ಚುನಾವಣಾಧಿಕಾರಿಯನ್ನೇ ಹತ್ಯೆ ಮಾಡಿದ್ದಾರೆ. ಈ ಲೋಕಸಭಾ ಚುನಾವಣೆ ವೇಳೆ ಕರ್ತವ್ಯ ನಿರತ ಅಧಿಕಾರಿಯೊಬ್ಬರು ಹಿಂಸೆಗೆ ಬಲಿಯಾಗಿರುವುದು ಇದೇ ಮೊದಲು. ನಕ್ಸಲರ ದಾಳಿಗೆ ಬಲಿಯಾದ ಚುನಾವಣಾಧಿಕಾರಿಯನ್ನು ಸಂಜುಕ್ತಾ ದಿಗಲ್‌ ಎಂದು ಗುರುತಿಸಲಾಗಿದೆ.

ಮತ್ತೊಂದೆಡೆ, ಗುರುವಾರದ ಮತದಾನದ ಸಿದ್ಧತೆಗಾಗಿ ಬೂತ್‌ಗಳತ್ತ ತೆರಳುತ್ತಿದ್ದ ವಾಹನಕ್ಕೆ ಬೆಂಕಿ ಹಚ್ಚಿ ನಕ್ಸಲ್‌ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಇತ್ತೀಚೆಗಷ್ಟೇ ಚುನಾವಣೆಯನ್ನು ಬಹಿಷ್ಕರಿಸುವಂತೆ ಸುತ್ತಮುತ್ತಲ ಪ್ರದೇಶಗಳ ಜನತೆಗೆ ನಕ್ಸಲೀಯರು ಒತ್ತಾಯಿಸಿದ್ದ ಕಂದಮಾಲ್‌ ಜಿಲ್ಲೆ ವ್ಯಾಪ್ತಿಯಲ್ಲೇ ಈ ಎರಡು ದುರ್ಘಟನೆ ನಡೆದಿವೆ. ಹೀಗಾಗಿ, ಜನರ ಮನಸ್ಸಿನಲ್ಲಿ ಭಯದ ವಾತಾವರಣ ನಿರ್ಮಿಸಲು ನಕ್ಸಲರು ಈ ಕೃತ್ಯಗಳನ್ನು ಎಸಗಿರಬಹುದು ಎನ್ನಲಾಗಿದೆ.

2ನೇ ಹಂತದ ಮತದಾನಕ್ಕಾಗಿ ಬೂತ್‌ವೊಂದಕ್ಕೆ ಚುನಾವಣಾ ಸಿಬ್ಬಂದಿ ಜೊತೆಗೆ ಸಂಜುಕ್ತಾ ಅವರು ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ, ಕಂಡ ಶಂಕಾಸ್ಪದ ವಸ್ತು ಏನೆಂದು ಪರೀಕ್ಷಿಸಲು ಕಾರಿನಿಂದ ಕೆಳಗಿಳಿದು ಬಂದಾಗ, ಸಂಜುಕ್ತಾ ಅವರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ. ಕಾರಿನಲ್ಲಿದ್ದ ಇತರ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಜಿಪಿ ಬಿ.ಕೆ ಶರ್ಮಾ ತಿಳಿಸಿದರು.

ಮತ್ತೊಂದೆಡೆ, ಇದೇ ಜಿಲ್ಲೆಯ ಫಿರಿಂಗಿಯಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳನ್ನು ಬೂತ್‌ಗೆ ಕೊಂಡೊಯ್ಯುತ್ತಿದ್ದ ವಾಹನವನ್ನು ಅಡ್ಡಗಟ್ಟಿದ್ದ ಶಸ್ತ್ರಸಜ್ಜಿತ ನಕ್ಸಲರು, ಚುನಾವಣಾ ಸಿಬ್ಬಂದಿಯನ್ನು ಕೆಳಗಿಳಿಸಿ, ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ, ಚುನಾವಣಾ ಸಿಬ್ಬಂದಿ ಬಚಾವ್‌ ಆಗಿದ್ದು, ಚುನಾವಣಾ ಪರಿಕರಗಳಾದ ಇವಿಎಂ ಸೇರಿದಂತೆ ಇತರೆ ವಸ್ತುಗಳು ಏನಾಗಿವೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!