IIT ಸೇರಿಕೊಂಡ್ರೆ ವಿದ್ಯಾರ್ಥಿಗಳಿಗೆ ವಾಸಿಸಲು ಫ್ಲ್ಯಾಟ್ ಕೊಡ್ತಾರಾ?

By Suvarna News  |  First Published Oct 17, 2022, 4:07 PM IST

*ಐಐಟಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ಕಠಿಣ ಪರಿಶ್ರಮ ಬೇಕು, ಪೈಪೋಟಿ ಎದುರಿಸಬೇಕು
*ಜೆಇಇ ಅಡ್ವಾನ್ಸ್ಡ್ ಟಾಪರ್‌ಗಳಿಂದ ವಿಚಿತ್ರ  ಬೇಡಿಕೆ, ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ
*ವೈರಲ್ ಆಯ್ತು ಪ್ರೊಫೆಸರ್ ಚೌಧರಿ ಅವರು ಫೇಸ್‌ಬುಕ್ ಪೋಸ್ಟ್, ವಿಚಿತ್ರ ಬೇಡಿಕೆ ಬಗ್ಗೆ ಚರ್ಚೆ
 


ಶಾಲೆ-ಕಾಲೇಜುಗಳಲ್ಲಿ ಟಾಪರ್ (Topper) ಆದವನಿಗೆ ಎಲ್ಲಿಲ್ಲ ಗೌರವ, ಬೆಲೆ ಇದ್ದೇ ಇರುತ್ತೆ. ಅವರ ಸುತ್ತಮುತ್ತಲಿನ ಸಮಾಜ ಅವರನ್ನ ನೋಡುವ ರೀತಿಯೇ ಬೇರೆ. ಮನೆಯಾಗಿರಲಿ ಅಥವಾ ಶಾಲೆಯಾಗಿರಲಿ ಟಾಪರ್ ವಿದ್ಯಾರ್ಥಿಗೆ ಸಖತ್ ರೆಸ್ಪೆಕ್ಟ್ ಇರುತ್ತೆ. ಇನ್ನು ಹಿರಿಯರಿಗೆ ಅವರು ಪ್ರತಿಷ್ಠೆಯಾದರೆ, ಕಿರಿಯರಿಗೆ ಮಾದರಿ ಕೂಡ ಹೌದು. ಒಬ್ಬ ಟಾಪರ್ ಆಗ್ತಿದ್ದಂತೆ ಆ ವಿದ್ಯಾರ್ಥಿ ಹೇಳಿದ್ದೇ ನಡೆಯಬೇಕು, ಅವರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಬೇಕು. ಆ ವಿದ್ಯಾರ್ಥಿಗೆ ಯಾರಿಗೂ ನೀಡದಂತಹ ಗೌರವ ಸಿಗುತ್ತದೆ, ಅದಕ್ಕೆ ತಕ್ಕಂತೆ ಅವರ ಡಿಮ್ಯಾಂಡೂ ಹೆಚ್ಚುತ್ತದೆ, ಅವರು ಏನೇ ಹೇಳಿದರೂ ಅನುಮತಿಸುತ್ತಾರೆ ಎನ್ನುವ ಹುಂಬುತನವೂ ಹೆಚ್ಚಾಗುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶನ ಅಂದ್ರೆ ಈ ಐಐಟಿ ಟಾಪರ್ (IIT Topper) ಪೋಷಕರ ಡಿಮ್ಯಾಂಡ್ಸ್. ಇವರ ಬೇಡಿಕೆಗಳ ಬಗ್ಗೆ ಕೇಳಿದ್ರೆ ನೀವೊಂದು ಕ್ಷಣ ಬೆಚ್ಚಿ ಬೀಳೋದು ಗ್ಯಾರಂಟಿ.  ಕೆಲ ದಿನಗಳಿಂದ ಐಐಟಿ ಬಾಂಬೆ ನಿರ್ದೇಶಕರಾದ ಪ್ರೊಫೆಸರ್ ಚೌಧರಿ ಅವರ ಫೇಸ್ಬುಕ್ (Facebook) ಪೋಸ್ಟ್ವೊಂದು ಭಾರೀ ವೈರಲ್ ಆಗ್ತಿದೆ. ಜೆಇಇ (JEE) ಅಡ್ವಾನ್ಸ್‌ನಲ್ಲಿ ಐಐಟಿ ಬಾಂಬೆಯಿಂದ Rank ಪಡೆದ ವಿದ್ಯಾರ್ಥಿಯ ಪೋಷಕರು ಅಸಮಂಜಸವಾದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಐಐಟಿ ಬಾಂಬೆ ಪ್ರೊಫೆಸರ್ ಚೌಧರಿ ಅವರು ಜೆಇಇ ಅಡ್ವಾನ್ಸ್‌ನ ಉನ್ನತ ರ್ಯಾಂಕ್ ಪಡೆದ ವಿದ್ಯಾರ್ಥಿಯೊಬ್ಬರ ಪೋಷಕರ ಜತೆ ನಡೆಸಿದ ಟೆಲಿಫೋನ್ ಸಂಭಾಷಣೆಯನ್ನು ತಮ್ಮ ಪೋಸ್ಟಿನಲ್ಲಿ ಬರೆದುಕೊಂಡಿದ್ದಾರೆ.

ಜೆಇಇ ಅಡ್ವಾನ್ಸ್ನಲ್ಲಿನ ಅತ್ಯಂತ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯೊಬ್ಬನ ಪೋಷಕರು ನನ್ನ ಬಳಿ ಮಾತನಾಡಿ ಎರಡು ಡಿಮ್ಯಾಂಡ್ಸ್ ಮುಂದಿಟ್ಟರು. ಮೊದಲನೆಯದು, ನನ್ನ ಮಗ ಐಐಟಿಬಿಗೆ ಸೇರಿದರೆ ಆತನಿಗೆ ನೀವು ವಿದ್ಯಾರ್ಥಿ ವೇತನವನ್ನು (Scholarship) ನೀಡುತ್ತೀರಾ? ಎಂದು. ಅದಕ್ಕೆ ನಾನು ಪೋಷಕರ ಆದಾಯವು ಕಡಿಮೆ ಇದ್ದರೆ, ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ್ರೆ ಖಂಡಿತವಾಗಿಯೂ ನೀಡೋಣ, ಇಲ್ಲದಿದ್ದರೆ ಇಲ್ಲ ಎಂದು ಹೇಳಿದೆ ಎಂದಿದ್ದಾರೆ. 

ಮನೆಯಲ್ಲೇ ಕಲಿಸಲು ಮಕ್ಕಳಿಗೆ ವರವಾದ ಟಾಪ್ ಪೆರೇಂಟ್ App

Tap to resize

Latest Videos

ಹಾಗೇ ಪ್ರೊಫೆಸರ್ ಚೌಧರಿ ಅವರನ್ನ ಪೋಷಕರು ಕೇಳಿದ ಮತ್ತೊಂದು ಪ್ರಶ್ನೆ ಸ್ವಲ್ಪ ವಿಚಿತ್ರವಾಗಿತ್ತು. ಜೊತೆಗೆ ತಮಾಷೆ ಕೂಡ ಅನಿಸಿತ್ತು. ನೀವು ನನ್ನ ಮಗನಿಗೆ ಕ್ಯಾಂಪಸ್‌ನಲ್ಲಿ ಫ್ಲಾಟ್ ಒದಗಿಸಬಹುದೇ ಎನ್ನುವ ಮತ್ತೊಂದು ಪ್ರಶ್ನೆಯನ್ನು ಅವರ ಮುಂದಿಟ್ಟಿದ್ದರು. ಅದನ್ನ ಕೇಳಿ ಸ್ವತಃ ಐಐಟಿ ಬಾಂಬೆ ನಿರ್ದೇಶಕರಿಗೆ ಒಮ್ಮೆ ಆಶ್ಚರ್ಯವಾಗಿದೆ.  ಈ ಪ್ರಶ್ನೆಗೆ ನಿರ್ದೇಶಕರು ಖಡಕ್ ಆಗಿಯೇ ಉತ್ತರ ಕೊಟ್ಟು ಬಿಟ್ಟಿದ್ದಾರೆ. ನಿಮಗೆ ನಿಮ್ಮ ಮಗುವಿನ ಭವಿಷ್ಯ ಹೇಗೆ ಮುಖ್ಯವೋ ಹಾಗೆಯೇ ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಯು ನನಗೆ ಒಂದೇ ಸಮಾನ. ಒಬ್ಬರನ್ನು ವಿಶೇಷವಾಗಿ ನೋಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ. 

ಪ್ರತಿಭಾವಂತ ವಿದ್ಯಾರ್ಥಿಗಳೇ... ಈ ಸ್ಕಾಲರ್‌ಶಿಪ್‌ಗಳನ್ನು ಗಮನಿಸಿ!

ಸಾಮಾಜಿಕ ಜಾಲತಾಣಗಳಲ್ಲಿ (Social Media) ಫ್ರೊಫೆಸರ್ ಚೌಧರಿ ಪೋಸ್ಟಿಗೆ ಸಾಕಷ್ಟು ಕಮೆಂಟ್ಸ್ ಬಂದಿದ್ದು, ಹಲವರು ನಿರ್ದೇಶಕರ ಉತ್ತರವೇ ಸರಿ ಎಂದಿದ್ದಾರೆ. ಯಾರು ಟಾಪರ್ ಅಥವಾ ಯಾರು ಚೆನ್ನಾಗಿ ಓದುವುದಿಲ್ಲ ಅನ್ನೋದು ಮುಖ್ಯವಲ್ಲ, ಅಂತಿಮವಾಗಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರ ಭವಿಷ್ಯವೇ ಮುಖ್ಯವಾಗುತ್ತೆ ಎಂದು ನೆಟ್ಟಿಗರು ಕಮೆಂಟ್ಸ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐಐಟಿ (IIT) ಪಡೆಯಲು ಭಾರೀ ಪೈಪೋಟಿ ಇದೆ. ಐಐಟಿ ಪ್ರವೇಶ ಪಡೆಯುವುದು ಕೂಡ ತುಂಬ ಸುಲಭವೇನಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಸಾಕಷ್ಟು ಪರಿಶ್ರಮಪಡಬೇಕಾಗುತ್ತದೆ. ಹಾಗಂತ ಜೆಇಇ ಅಡ್ವಾನ್ಸ್ಡ್‌ನಲ್ಲಿ Rank ಬಂದಾಕ್ಷಣ ಎಲ್ಲ ಸೌಲಭ್ಯವನ್ನು ನಿರೀಕ್ಷಿಸುವುದು ಎಷ್ಟು ಸರಿ ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ. ಪ್ರೊಫೆಸರ್ ಚೌಧರಿ ಅವರು ಈ ಫೋಸ್ಟ್ ಹಲವು ಆಯಾಮಗಳಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.

click me!