ಕನ್ನಡದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗೆ ಚಾಲನೆ

By Kannadaprabha NewsFirst Published Oct 13, 2021, 8:55 AM IST
Highlights
  • ದೇಶದ ಭವಿಷ್ಯ ಉಜ್ವಲವಾಗಿರಬೇಕು ಎಂಬ ಕಾರಣಕ್ಕಾಗಿ ಜಾರಿಗೊಳಿಸುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ
  •  ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ಕೈಗೊಂಡು ದೇಶದಲ್ಲಿಯೇ ರಾಜ್ಯವು ಮುಂಚೂಣಿಯಲ್ಲಿರುವಂತೆ ಕಾರ್ಯನಿರ್ವಹಿಸಬೇಕು

 ಬೆಂಗಳೂರು (ಅ.13):  ದೇಶದ ಭವಿಷ್ಯ ಉಜ್ವಲವಾಗಿರಬೇಕು ಎಂಬ ಕಾರಣಕ್ಕಾಗಿ ಜಾರಿಗೊಳಿಸುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ( National education policy)) ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಎಂಜಿನಿಯರಿಂಗ್‌ ಶಿಕ್ಷಣದಲ್ಲಿ (engineering course) ಮಹತ್ತರ ಬದಲಾವಣೆ ಕೈಗೊಂಡು ದೇಶದಲ್ಲಿಯೇ ರಾಜ್ಯವು ಮುಂಚೂಣಿಯಲ್ಲಿರುವಂತೆ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಕರೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ- 2020 ಅನುಸಾರ ರಾಜ್ಯದಲ್ಲಿ ಎಂಜಿನಿಯರಿಂಗ್‌ ಪಠ್ಯಕ್ರಮ, ತಾಂತ್ರಿಕ ಶಿಕ್ಷಣಕ್ಕೆ ಕರ್ನಾಟಕ ನೆಚ್ಚಿನ ತಾಣ ಅಭಿಯಾನ, ಕನ್ನಡ ಮಾಧ್ಯಮದಲ್ಲಿ (Kannada Medium ) ಎಂಜಿನಿಯರಿಂಗ್‌ ಶಿಕ್ಷಣ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ನಾಲ್ಕು ವರ್ಷಗಳ ಬಿ.ಎಸ್ಸಿ, ಫಾರ್ಮಾ ಕೋರ್ಸ್‌ (Farm  course) ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ವೈದ್ಯಕೀಯ ಪಠ್ಯಕ್ರಮದಲ್ಲಿ ಧಾರ್ಮಿಕ ಸಂಪ್ರದಾಯ ಅಳವಡಿಕೆಗೆ ಚಿಂತನೆ: ಸಚಿವ ಮಾಂಡವೀಯ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಸರಿಯಾಗಿ ಜಾರಿಯಾಗಬೇಕಾದರೆ ಮೊದಲು ಶಿಕ್ಷಕರ ಮನೋಭಾವ ಬದಲಾಗಬೇಕು. ನಂತರ ವಿದ್ಯಾರ್ಥಿಗಳ ಮನೋಭಾವ ಬದಲಾವಣೆ ಮಾಡಲು ಸಾಧ್ಯ. ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ವಿಯಾಗಬೇಕಾದರೆ ಕೆಳಹಂತದ ಶಿಕ್ಷಣದಿಂದ (Education) ಉನ್ನತ ಹಂತದ ಶಿಕ್ಷಣದವರೆಗೆ ಬದಲಾವಣೆಯಾಗಬೇಕು. ಆಗ ಮಾತ್ರ ಎನ್‌ಇಪಿ ಸಾರ್ಥಕವಾಗಲಿದೆ. ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಎನ್‌ಇಪಿ ಅಳವಡಿಕೆ ಮಾಡಿಕೊಂಡು ಬದಲಾವಣೆ ಮಾಡಬೇಕಿದೆ. ಈ ಮೂಲಕ ದೇಶದಲ್ಲಿ ರಾಜ್ಯವು ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆಯನ್ನು (Education System) ದಿಢೀರನೆ ಬದಲಿಸಲು ಸಾಧ್ಯವಿಲ್ಲ. ಹಲವು ವರ್ಷಗಳ ಕಾಲದ ಸಂಶೋಧನೆ, ವಿಶ್ಲೇಷಣೆ, ಅಳವಡಿಸಿಕೊಳ್ಳಲು ಇರುವ ಸಾಧ್ಯತೆಗಳು ಹಾಗೂ ಇತರೆ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಚರ್ಚೆ ನಡೆಸಿ ಎನ್‌ಇಪಿಯನ್ನು ಜಾರಿಗೆ ತರಲಾಗುತ್ತಿದೆ. ಪ್ರತಿಪಕ್ಷಗಳು ಎಷ್ಟೇ ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ, ಸರ್ಕಾರವು ನೀತಿಯನ್ನು ಅನುಷ್ಠಾನಗೊಳಿಸಲು ಬದ್ಧವಿದೆ ಎಂದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಶ್ರೀನಿವಾಸ್​ ಪೂಜಾರಿ

ಶಿಕ್ಷಣ ಕ್ರಮದಲ್ಲಿ ಈವರೆಗೆ ಕೇವಲ ಶೇಕಡಾವಾರು ಅಂಕ ಗಳಿಕೆಗೆ ಗಮನ ಕೊಡಲಾಗುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಯ ಪರ್ಸೆಂಟೇಜ್‌ ಪದ್ಧತಿ ಹೋಗಿ ಪರ್ಸೆಂಟೈಲ್‌ ವಿಧಾನ ಜಾರಿಗೆ ಬಂದಿದೆ. ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳು ಇದನ್ನು ಗಮನಿಸಿ ಅಳವಡಿಸಿಕೊಳ್ಳಬೇಕಾಗಿದೆ. ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಎನ್‌ಇಪಿ ಜಾರಿಗೆ ತರುತ್ತಿರುವುದು ಐತಿಹಾಸಿಕ ಹೆಜ್ಜೆಯಾಗಿದೆ. ತಾಂತ್ರಿಕ ಶಿಕ್ಷಣಕ್ಕೆ ರಾಜ್ಯದಲ್ಲಿ ಇದು ಹೊಸತನವನ್ನು ತರುವುದರ ಜತೆಗೆ ಹೊಸದಿಕ್ಕನ್ನು ತೋರಿಸಲಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮಾತನಾಡಿ (Dr CM Ashwath Narayan), ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಕೈ ಜೋಡಿಸಿ, ಎನ್‌ಇಪಿ ಆಶಯಗಳಿಗೆ ಅನುಗುಣವಾಗಿ ಐಐಟಿ ಮತ್ತು ಐಐಎಸ್‌ಸಿ (IISP) ಗುಣಮಟ್ಟದ ಬಿ.ಇ. ಮತ್ತು ನಾಲ್ಕು ವರ್ಷಗಳ ಬಿ.ಎಸ್‌ಸಿ (BSC) (ಆನರ್ಸ್‌) ಪದವಿ ಪಠ್ಯಗಳನ್ನು ರೂಪಿಸಲಾಗಿದೆ. ಈಗಾಗಲೇ 66 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಬಿ.ಎಸ್ಸಿ (ಆನರ್ಸ್‌) ಆರಂಭಿಸಲು ಅನುಮತಿ ನೀಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಲ್ಲಿ ಒಟ್ಟು 75 ಕಾಲೇಜುಗಳಲ್ಲಿ ಈ ಪದವಿಯನ್ನು ಆರಂಭಿಸಲಾಗುವುದು ಎಂದರು.

ತಾಂತ್ರಿಕ ಶಿಕ್ಷಣದಲ್ಲಿ ರಾಜ್ಯಕ್ಕೆ ದೊಡ್ಡ ಪರಂಪರೆ ಇದೆ. ಅದರಲ್ಲಿಯೂ ಬೆಂಗಳೂರು ನಗರವು ಇಡೀ ಜಗತ್ತಿನ ಗಮನ ಸೆಳೆದಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಉದ್ಯಮಸ್ನೇಹಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಉಪಕುಲಪತಿ ಕರಿಸಿದ್ಧಪ್ಪ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್‌ ನಾಯಕ್‌ ಇತರರು ಉಪಸ್ಥಿತರಿದ್ದರು.

click me!