1ನೇ ತರಗತಿ ಆರಂಭಿಸಲು ನಾವು ಸಿದ್ಧ: ನಾಗೇಶ್‌

By Kannadaprabha NewsFirst Published Aug 31, 2021, 7:56 AM IST
Highlights
  •  ಒಂದನೇ ತರಗತಿಯಿಂದ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆಯು ಸಿದ್ಧ
  • ತಾಂತ್ರಿಕ ಸಲಹಾ ಸಮಿತಿ ನೀಡುವ ಶಿಫಾರಸ್ಸು ಮತ್ತು ಮುಖ್ಯಮಂತ್ರಿಗಳ ತೀರ್ಮಾನಕ್ಕನುಗುಣವಾಗಿ ಶಾಲೆಗಳ ಆರಂಭ

ಬೆಂಗಳೂರು (ಆ.31):  ಒಂದನೇ ತರಗತಿಯಿಂದ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆಯು ಸಿದ್ಧವಿದ್ದು, ತಾಂತ್ರಿಕ ಸಲಹಾ ಸಮಿತಿ ನೀಡುವ ಶಿಫಾರಸ್ಸು ಮತ್ತು ಮುಖ್ಯಮಂತ್ರಿಗಳ ತೀರ್ಮಾನಕ್ಕನುಗುಣವಾಗಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. ಸೋಮವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸ ಮಾರ್ಗಸೂಚಿ ನೀಡಿ ಶಾಲೆಗಳನ್ನು ಆರಂಭಿಸಲು ಸೂಚಿಸಿದರೆ ಒಂದನೇ ತರಗತಿಯಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ಸಿದ್ಧವಿದೆ. ಶಿಕ್ಷಕರು ಸಹ ಶಾಲೆ ಆರಂಭಿಸಲು ಉತ್ಸುಕರಾಗಿದ್ದಾರೆ. ಪೋಷಕರು ಕಚೇರಿಗೆ ಬಂದು ಶಾಲೆಗಳನ್ನು ಯಾಕೆ ಆರಂಭಿಸುತ್ತಿಲ್ಲ ಎಂದು ಕೇಳುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಡಿಡಿಪಿಐಗಳು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಜತೆ ಹಲವು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಮುಖ್ಯಮಂತ್ರಿಗಳು ಸಂವಾದ ನಡೆಸಿದಾಗ ಮಕ್ಕಳೆಲ್ಲರೂ ಭೌತಿಕ ಶಾಲೆಗಳ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ ಶಾಲೆ ತೆರೆಯುವ ಬದಲು ಸಂಜೆಯವರೆಗೂ ಶಾಲೆಗಳನ್ನು ತೆರೆಯಿರಿ ಎಂದು ಹಲವು ಮಕ್ಕಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ನಾವೇ ಊಟ ನೀರು ತರುತ್ತೇವೆ. ಇಡೀ ದಿನ ತರಗತಿ ನಡೆಸಲು ಅವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ. ಕೋವಿಡ್‌ ಪರಿಸ್ಥಿತಿ ನೋಡಿಕೊಂಡು, ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ನುಡಿದರು.

6ರಿಂದ 8ನೇ ತರಗತಿಗಳನ್ನೂ ಪ್ರಾರಂಭಿಸಲು ಸಿಕ್ತು ಸರ್ಕಾರ ಗ್ರೀನ್ ಸಿಗ್ನಲ್: ಎಂದಿನಿಂದ?

ಗ್ರಾಮಾಂತರ ಭಾಗದಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಪಾಲನೆ ಮಾಡುವುದು ಸುಲಭವಾಗಿದೆ. ಗ್ರಾಮಾಂತರ ಭಾಗದಲ್ಲಿ ಮಕ್ಕಳು ಕಡಿಮೆ ಇರಲಿದ್ದಾರೆ. ಜಾಗ ವಿಶಾಲವಾಗಿದ್ದು, ಮೂಲಭೂತ ಸೌಕರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಇರಲಿವೆ. ಹೀಗಾಗಿ ಕಡಿಮೆ ಮಕ್ಕಳೊಂದಿಗೆ ಮಾರ್ಗಸೂಚಿಯನ್ನು ಪಾಲಿಸಿ ಪಾಠ ಮಾಡಲು ಸಾಕಷ್ಟುಅನುಕೂಲ ಸಿಗಲಿದೆ. ನಗರ ಮಟ್ಟಕ್ಕೆ ಹೋಲಿಸಿದರೆ ಗ್ರಾಮೀಣ ಮಟ್ಟದಲ್ಲಿ ಮಾರ್ಗಸೂಚಿ ಪಾಲನೆ ನಮಗೆ ಸುಲಭ ಇದೆ ಎಂದು ಹೇಳಿದರು.

9 ರಿಂದ 12ನೇ ತರಗತಿ ಪುನಾರಂಭದ ಬಳಿಕ ಕೋವಿಡ್‌ ಪತ್ತೆಯಾಗಿಲ್ಲ. ಶಾಲಾ-ಕಾಲೇಜುಗಳನ್ನು ತೆರೆಯಲಾಗಿದ್ದು, ಯಾರಿಗೂ ಭೌತಿಕ ತರಗತಿಗೆ ಕಡ್ಡಾಯ ಹಾಜರಾಗುವಂತೆ ಬಲವಂತ ಮಾಡಿಲ್ಲ. ಅವಕಾಶವನ್ನು ಮುಕ್ತವಾಗಿರಿಸಿದ್ದೇವೆ. ಮಕ್ಕಳು ಮತ್ತು ಪೋಷಕರು ಕೊಟ್ಟಿರುವ ಪ್ರೊತ್ಸಾಹ ನೋಡಿದರೆ ಶಾಲೆಗಳಿಗೆ ಬರುವುದಕ್ಕೆ ಹೆಚ್ಚು ಉತ್ಸಾಹ ತೋರುತ್ತಿರುವುದು ಸ್ಪಷ್ಟವಾಗಿದೆ. ಶಾಲಾ-ಕಾಲೇಜು ಆರಂಭದ ನಂತರ ಈವರೆಗೆ ಒಂದೇ ಒಂದು ಕೋವಿಡ್‌ ಪ್ರಕರಣ ವರದಿಯಾಗಿಲ್ಲ. ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಲಿ ಪಾಲನೆ ಮಾಡಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.

click me!