ಶಾಲಾ ಮಕ್ಕಳಿಗೆ 20 ದಿನದಲ್ಲಿ ಪಠ್ಯಪುಸ್ತಕ ಪೂರೈಕೆ: ಸರ್ಕಾರ

By Kannadaprabha News  |  First Published Aug 31, 2021, 7:12 AM IST
  •  ಶಾಲೆಗಳ ವಿದ್ಯಾರ್ಥಿಗಳಿಗೆ ಈವರೆಗೆ ಶೇ.54.74ರಷ್ಟುಪಠ್ಯಪುಸ್ತಕಗಳನ್ನು ಪೂರೈಕೆ
  • ಉಳಿದ ಪಠ್ಯಪುಸ್ತಕಗಳನ್ನು 20 ದಿನಗಳಲ್ಲಿ ಒದಗಿಸಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

 ಬೆಂಗಳೂರು (ಆ.31): ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈವರೆಗೆ ಶೇ.54.74ರಷ್ಟುಪಠ್ಯಪುಸ್ತಕಗಳನ್ನು ಪೂರೈಸಲಾಗಿದ್ದು, ಉಳಿದ ಪಠ್ಯಪುಸ್ತಕಗಳನ್ನು 20 ದಿನಗಳಲ್ಲಿ ಒದಗಿಸಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಎ.ಎ. ಸಂಜೀವ್‌ ನಾರಾಯಣ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿತು. ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಭರದಿಂದ ಸಾಗಿದೆ. ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈವರೆಗೆ ಶೇ.54.74ರಷ್ಟುಪಠ್ಯ ಪುಸ್ತಕ ಪೂರೈಸಲಾಗಿದೆ. ಮುಂದಿನ 20 ದಿನಗಳಲ್ಲಿ ಎಲ್ಲಾ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು ಎಂದು ಹೈಕೋರ್ಟ್‌ಗೆ ಭರವಸೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಪಠ್ಯಪುಸ್ತಕ ಪೂರೈಕೆ ಕಾರ್ಯವನ್ನು 20 ದಿನಗಳಲ್ಲಿ ಪೂರ್ಣಗೊಳಿಸಬೇಕು. ಪುನಃ ಸಮಯ ಕೇಳುವಂತಿಲ್ಲ ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

Tap to resize

Latest Videos

6ರಿಂದ 8ನೇ ತರಗತಿಗಳನ್ನೂ ಪ್ರಾರಂಭಿಸಲು ಸಿಕ್ತು ಸರ್ಕಾರ ಗ್ರೀನ್ ಸಿಗ್ನಲ್: ಎಂದಿನಿಂದ?

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಹರೀಶ್‌ ನರಸಪ್ಪ, ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸಲು ಬಹಳಷ್ಟುವಿದ್ಯಾರ್ಥಿಗಳ ಬಳಿ ಮೊಬೈಲ್‌ ಹಾಗೂ ಇನ್ನಿತರ ಸಾಧನಗಳಿಲ್ಲ ಎಂಬ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸರ್ಕಾರಕ್ಕೆ ಈ ಹಿಂದೆ ಹೈಕೋರ್ಟ್‌ ಸೂಚಿಸಿತ್ತು. ಆ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ಸರ್ಕಾರದಿಂದ ವಿವರ ಪಡೆಯಬೇಕು ಎಂದು ಕೋರಿದರು.

ಇದಕ್ಕೆ ಸರ್ಕಾರಿ ವಕೀಲರು ಉತ್ತರಿಸಿ, ರಾಜ್ಯದಲ್ಲಿ ಈಗಾಗಲೇ 9 ಹಾಗೂ 10ನೇ ತರಗತಿ ಶಾಲೆಗಳು ಆರಂಭವಾಗಿವೆ. ಉಳಿದ ತರಗತಿಗಳ ಆರಂಭದ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಹಂತದಲ್ಲಿ ಆನ್‌ಲೈನ್‌ ತರಗತಿಗಳಿಗೆ ಭಾಗವಹಿಸಲು ಮೊಬೈಲ್‌ ಹಾಗೂ ಇನ್ನಿತರ ಸಾಧನಗಳನ್ನು ನೀಡುವ ಬಗ್ಗೆ ಪರಿಗಣಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಈಗಾಗಲೇ ಭೌತಿಕ ತರಗತಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಅಂಶದ ಬಗ್ಗೆ ಮುಂದೆ ಪರಿಶೀಲಿಸೋಣ ಎಂದು ಹೇಳಿ ವಿಚಾರಣೆ ಮುಂದೂಡಿತು.

click me!