ಬಿಸಿಯೂಟದಲ್ಲಿ ಹುಳು: ಶಾಲೆಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಪ್ರತಿಭಟನೆ

By Kannadaprabha News  |  First Published Jun 3, 2022, 7:55 AM IST

* ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗೌರಿಪುರದ ಸರ್ಕಾರಿ ಶಾಲೆಯಲ್ಲಿ ಘಟನೆ
*  ಸ್ಥಳಕ್ಕೆ ಅಕ್ಷರ ದಾಸೋಹ ಯೋಜನಾಧಿಕಾರಿ ಭೇಟಿ
*  ಗೌರಿಪುರ ಸರ್ಕಾರಿ ಶಾಲೆಯಲ್ಲಿ ಅವ್ಯವಹಾರ ಮೊದಲಿನಿಂದಲೂ ಇದೆ
 


ಕನಕಗಿರಿ(ಜೂ.03): ಬಿಸಿಯೂಟದಲ್ಲಿ ನುಸಿ ಹುಳು ಬಂದಿರುವುದನ್ನು ಖಂಡಿಸಿ ತಾಲೂಕಿನ ಗೌರಿಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಗುರುವಾರ ಪ್ರತಿಭಟಿಸಿದರು.

ಶಾಲೆ ಆರಂಭಕ್ಕೂ ಮುನ್ನ ದಾಸೋಹ ಕೊಠಡಿಯಲ್ಲಿ ಸಂಗ್ರಹಗೊಂಡಿದ್ದ ಆಹಾರ ಧಾನ್ಯದ ಚೀಲದಲ್ಲಿ ನುಸಿ ಹುಳು ನುಸುಳಿವೆ. ಮಧ್ಯಾಹ್ನ ಬಿಸಿಯೂಟದ ವೇಳೆ ಮಕ್ಕಳ ತಟ್ಟೆಯಲ್ಲಿ ಹುಳು ಕಾಣಿಸಿಕೊಂಡಿರುವ ಸುದ್ದಿ ಪಾಲಕರಿಗೂ ತಿಳಿದಿದೆ. ತಕ್ಷಣವೇ ಶಾಲಾ ಆವರಣಕ್ಕೆ ಬಂದ ಗ್ರಾಮಸ್ಥರು ಮುಖ್ಯೋಪಾಧ್ಯಾಯ ನಾಗಪ್ಪ ವಿರುದ್ಧ ಹರಿಹಾಯ್ದರು.

Tap to resize

Latest Videos

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಸಚಿವ ನಾಗೇಶ್‌ ಮನೆಗೆ ಮುತ್ತಿಗೆ

ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಣ್ಣ ಕಂದಕೂರು ಮಾತನಾಡಿ, ಶಾಲೆಯ 530ಕ್ಕೂ ಹೆಚ್ಚು ಮಕ್ಕಳಿಗೆ ತಯಾರಿಸಿದ ಅಡುಗೆಯಲ್ಲಿ ಹುಳು ಬಂದಿದ್ದು, ಈ ಬಗ್ಗೆ ಅಡುಗೆ ಸಹಾಯಕಿಯರಿಗೆ ತಿಳಿಸಿದರೆ ಸರಿಯಾಗಿ ಕೆಲಸ ನಿರ್ವಹಿಸದೆ ಬೇಜವಾಬ್ದಾರಿ ತೋರುತ್ತಾರೆ. ಇತ್ತ ಮುಖ್ಯೋಪಾಧ್ಯಾಯರು ತಮ್ಮ ಕರ್ತವ್ಯವನ್ನು ಮರೆತಿದ್ದು, ಶಾಲಾ ಆಡಳಿತ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಬಿಸಿಯೂಟದಲ್ಲಿ ಹುಳು ಬರಲು ಕಾರಣವಾಗಿದೆ. ಶಾಲೆಯ ಕೊಳವೆಬಾವಿ ಮೋಟಾರ್‌, ಬೇಳೆ ಹಾಗೂ ಎಣ್ಣೆ ಕಳ್ಳತನವಾಗಿದೆ. ಈ ಬಗ್ಗೆ ಮುಖ್ಯಶಿಕ್ಷಕರನ್ನು ಕೇಳಿದರೆ ನನಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಮುಖ್ಯೋಪಾಧ್ಯಾಯರಿಂದ ಹಿಡಿದು ಹಲವು ಶಿಕ್ಷಕರು ಶಾಲಾ ಸಮಯಕ್ಕೆ ಬರುತ್ತಿಲ್ಲ. ಇನ್ನೂ ಶಿಕ್ಷಕರ ಹಾಗೂ ಮುಖ್ಯೋಪಾಧ್ಯಾಯರ ನಡುವೆ ಹೊಂದಾಣಿಕೆ ಇಲ್ಲದ್ದರಿಂದ ಶಾಲಾ ವಾತಾವರಣ ಹದಗೆಟ್ಟಿದೆæ ಎಂದು ಆರೋಪಿಸಿದರು.

ಗ್ರಾಮಸ್ಥರು ಅಕ್ಷರ ದಾಸೋಹ ಯೋಜನಾಧಿಕಾರಿ ಸುರೇಶಗೌಡರಿಗೆ ದೂರವಾಣಿಯಲ್ಲಿ ದೂರು ನೀಡಿದ ಬೆನ್ನಲ್ಲೆ ಮಧ್ಯಾಹ್ನದ ವೇಳೆಗೆ ಶಾಲೆಗೆ ಭೇಟಿ ನೀಡಿದ ಅಧಿಕಾರಿ, ಗ್ರಾಮಸ್ಥರೊಡನೆ ಚರ್ಚಿಸಿದರು. ಮುಖ್ಯೋಪಾಧ್ಯಾಯ ನಾಗಪ್ಪ ಹಾಗೂ ಶಿಕ್ಷಕ ಅರಳಯ್ಯ ನಡುವೆ ಹೊಂದಾಣಿಕೆಯಿಲ್ಲ. ಈ ಇಬ್ಬರನ್ನು ಬೇರೆಡೆ ವರ್ಗಾವಣೆ ಮಾಡಬೇಕು. ನಮ್ಮೂರಿನ ಶಾಲೆಗೆ ಹೊಸ ಶಿಕ್ಷಕರನ್ನು ನಿಯೋಜಿಸಬೇಕು. ಕರ್ತವ್ಯ ಲೋಪವೆಸಗಿದ ಮುಖ್ಯಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಧಿಕಾರಿಗೆ ದೂರು ನೀಡಿದರು.

ಎಸ್‌ಡಿಎಂಸಿ ಸದಸ್ಯರಾದ ಕುಂಠೆಪ್ಪ ಹುಗ್ಗಿ, ದ್ಯಾಮಣ್ಣ ಬಿಳೇಬಾವಿ, ದೇವಪ್ಪ ಗೌಡ್ರ, ಗ್ರಾಮಸ್ಥರಾದ ರವಿ ಈಳಿಗೇರ, ಭೀಮನಗೌಡ, ಮಾರುತೇಶ ಸಾಸ್ವಿಹಾಳ, ಜಯರಾಜ ಉಪಲಾಪುರ, ಸೋಮನಗೌಡ, ದ್ಯಾಮಣ್ಣ ಸಂಗಟಿ, ನಿಂಗಪ್ಪ ಸೇರಿದಂತೆ ಯುವಕರು ಇದ್ದರು.

ವಿಜಯಪುರದ ವಿಕಲಚೇತನರ ಪುನಶ್ಚೇತನ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಭೇಟಿ!

ವಾರದೊಳಗೆ ಸಮಸ್ಯೆ ಪರಿಹರಿಸಲಾಗುವುದು. ಬಿಸಿಯೂಟದಲ್ಲಿ ಹುಳು ಬಂದಿರುವ ಬಗ್ಗೆ ವರದಿ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಲಿದ್ದಾರೆ ಅಂತ ಅಕ್ಷರ ದಾಸೋಹ ಯೋಜನಾಧಿಕಾರಿ ಸುರೇಶಗೌಡ ತಿಳಿಸಿದ್ದಾರೆ.  

ಗೌರಿಪುರ ಸರ್ಕಾರಿ ಶಾಲೆಯಲ್ಲಿ ಅವ್ಯವಹಾರ ಮೊದಲಿನಿಂದಲೂ ಇದೆ. ತಿದ್ದಿಕೊಳ್ಳುವಂತೆ ಮುಖ್ಯೋಪಾಧ್ಯಾಯರಿಗೆ ಹೇಳಿದ್ದೇವೆ. ಶಾಲೆಯ ಬಿಸಿಯೂಟಕ್ಕೆ ನೀಡಲಾದ 14 ಸಿಲಿಂಡರ್‌ಗಳ ಪೈಕಿ 12 ಇವೆ. ಇನ್ನೆರೆಡು ದುರ್ಬಳಕೆಯಾಗಿರುವುದು ಬಯಲಾಗಿದೆ. ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಮುಖ್ಯಶಿಕ್ಷಕರ ಮೇಲೆ ಡಿಡಿಪಿಐ ಹಾಗೂ ಬಿಇಒ ಪರಿಶೀಲಿಸಿ ಕ್ರಮವಹಿಸಬೇಕು ಅಂತ ಗೌರಿಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 
 

click me!