ವ್ಯಾಸಂಗದ ಬಳಿಕ ಉನ್ನತ ಹುದ್ದೆಗಳಿಗೇರುವ ಐಐಎಂ ವಿದ್ಯಾರ್ಥಿಗಳಿಗಾಗಿ ‘ಗ್ರಾಮೀಣ ಸಮ್ಮಿಲನ ಕಾರ್ಯಕ್ರಮ’ದ ಮೂಲಕ ಹಳ್ಳಿಗಾಡಿನ ಜನರ ಜೀವನವನ್ನು ಪರಿಚಯಿಸುವ ಕೆಲಸವನ್ನು ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನಲ್ಲಿರುವ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ವಿಶಿಷ್ಟವಾಗಿ ನಡೆಸುತ್ತಿದೆ.
ಎಂ.ಎಲ್.ಲಕ್ಷ್ಮೇಕಾಂತ
ಶಿಲ್ಲಾಂಗ್ (ಏ.4) : ವ್ಯಾಸಂಗದ ಬಳಿಕ ಉನ್ನತ ಹುದ್ದೆಗಳಿಗೇರುವ ಐಐಎಂ ವಿದ್ಯಾರ್ಥಿಗಳಿಗಾಗಿ ‘ಗ್ರಾಮೀಣ ಸಮ್ಮಿಲನ ಕಾರ್ಯಕ್ರಮ’ದ ಮೂಲಕ ಹಳ್ಳಿಗಾಡಿನ ಜನರ ಜೀವನವನ್ನು ಪರಿಚಯಿಸುವ ಕೆಲಸವನ್ನು ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನಲ್ಲಿರುವ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ವಿಶಿಷ್ಟವಾಗಿ ನಡೆಸುತ್ತಿದೆ.
ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡಿರುವ, ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಂದ ಕಳೆದ ಡಿ.18ರಂದು ಉದ್ಘಾಟನೆಯಾಗಿರುವ ಐಐಎಂ- ಶಿಲ್ಲಾಂಗ್(IIM- Shillong)ನ ನೂತನ ಕ್ಯಾಂಪಸ್ ಅನ್ನು ಮಾಧ್ಯಮ ಪ್ರತಿನಿಧಿಗಳಿಗೆ ಪರಿಚಯಿಸಿದ ಬಳಿಕ ಮಾತನಾಡಿದ ಐಐಎಂ ನಿರ್ದೇಶಕ ಪಿ.ಡಿ. ಗೋಯಲ್(IIM Director P.D. Goyal) ಅವರು ಈ ವಿಷಯ ತಿಳಿಸಿದರು. ಪದವಿ ಗಳಿಸಿದ ಬಳಿಕ ವಿದ್ಯಾರ್ಥಿಗಳು ಎ.ಸಿ. ಕಚೇರಿಯಲ್ಲಿ ಕುಳಿತು ಬಡತನ ವಿಚಾರದಲ್ಲಿ ನೀತಿ- ನಿರೂಪಣೆಗಳನ್ನು ಮಾಡಬೇಕಾಗುತ್ತದೆ. ಅವರಿಗೆ ಹಳ್ಳಿಯ ಪರಿಸರ, ಸಂಸ್ಕೃತಿ, ಬಡತನದ ಅರಿವು ಹಾಗೂ ಜನರ ಜೀವನದ ಬಗ್ಗೆ ಮಾಹಿತಿ ಇರಲಿ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಡಿ ವಿದ್ಯಾರ್ಥಿಗಳು 10ರಿಂದ 15 ದಿನಗಳ ಕಾಲ ಹಳ್ಳಿಯಲ್ಲೇ ವಾಸ್ತವ್ಯ ಇರಬೇಕಾಗುತ್ತದೆ ಎಂದರು.
ಭಾರತ ದೇಶವೀಗ ಬಡ ರಾಷ್ಟ್ರವಲ್ಲ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಐಐಎಂ- ಶಿಲ್ಲಾಂಗ್ ಈಶಾನ್ಯ ಭಾರತದ 8 ರಾಜ್ಯಗಳಲ್ಲಿ ಇರುವ ಏಕೈಕ ಇಂತಹ ಸಂಸ್ಥೆಯಾಗಿದೆ. ಮೇಘಾಲಯದಲ್ಲಿ ಪ್ರತಿಕೂಲ ಹವಾಮಾನ ಇಲ್ಲ. ಬೇಸಿಗೆ ಎಂಬುದೇ ಇಲ್ಲಿಲ್ಲ. 67% ಭೂಭಾಗ ಅರಣ್ಯ ಪ್ರದೇಶದಿಂದ ಕೂಡಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅತ್ಯಂತ ಸುರಕ್ಷಿತ ಸ್ಥಳ ಇದಾಗಿದೆ ಎಂದು ಹೇಳಿದರು.
ಈಶಾನ್ಯ ಭಾರತದ ಕೆಲವು ರಾಜ್ಯಗಳು ತಮ್ಮಲ್ಲಿನ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಐಐಎಂ-ಶಿಲ್ಲಾಂಗ್ ಅನ್ನು ಸಂಪರ್ಕಿಸಿವೆ. ಮೇಘಾಲಯ ಸರ್ಕಾರ ಕೂಡ ಶಿಲ್ಲಾಂಗ್‌ನಲ್ಲಿ ಸಂಚಾರ ದಟ್ಟಣೆಗೆ ನಮ್ಮ ನೆರವು ಕೇಳಿದೆ ಎಂದು ತಿಳಿಸಿದರು.
ಉದ್ಯಮ ವಲಯದಿಂದ ಅನುಭವಿ ತಜ್ಞರನ್ನು ಕರೆಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಲಾಗುತ್ತಿದೆ. ಐಐಎಂ-ಶಿಲ್ಲಾಂಗ್ ಜಾಗತಿಕ ಗುಣಮಟ್ಟದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವಿವಿಧ ದೇಶಗಳ ವಿವಿಗಳ ಜತೆ ವಿದ್ಯಾರ್ಥಿ ವಿನಿಮಯ ಸಂಬಂಧ 17 ಒಪ್ಪಂದ ಮಾಡಿಕೊಂಡಿದ್ದೇವೆ. ಸ್ಪೇನ್, ಚೀನಾ, ಆಸ್ಪ್ರೇಲಿಯಾದಂತಹ ದೇಶಗಳಲ್ಲೂ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಬಂದಿದ್ದಾರೆ ಎಂದರು. ಐಐಎಂ- ಶಿಲ್ಲಾಂಗ್‌ನ ಕಾರ್ಪೋರೆಟ್ ವ್ಯವಹಾರಗಳು ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಹೆಮಾಂಗೋ ಕಿಶೋರ್ ದತ್ತ ಉಪಸ್ಥಿತರಿದ್ದರು.
ಐಐಎಂ 14ನೇ ಘಟಿಕೋತ್ಸವ: ಆರ್‌ಸಿ ವಿಡಿಯೋ ಭಾಷಣ
ಶಿಲ್ಲಾಂಗ್: ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನಲ್ಲಿರುವ ಐಐಎಂನ 14ನೇ ವರ್ಷದ ಘಟಿಕೋತ್ಸವ(IIM Shillong celebrates 14th convocation) ಭಾನುವಾರ ನಡೆಯಿತು. 5 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಸೇರಿದಂತೆ 347 ವಿದ್ಯಾರ್ಥಿಗಳಿಗೆ ಎಂಬಿಎ ಪದವಿ ಪ್ರದಾನ ಮಾಡಲಾಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ಘಟಿಕೋತ್ಸವದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್(Rajeev Chandrashekhar) ಭಾಗಿಯಾದರು. ಪಹಾರ್‌ಪುರ್ ಕೂಲಿಂಗ್ ಟವರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗೌರವ್ ಸ್ವರೂಪ್ ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ಸ್ಕಿಲ್ ಹಬ್ ಪೋರ್ಟಲ್ ಉದ್ಘಾಟಿಸಿದ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕ ಯುವಕರ ಉದ್ಯಮಕ್ಕೆ ನೆರವು!
ನಮ್ಮದು ಯುವ ದೇಶ
ನಮ್ಮದು ನವ ಭಾರತ. 140 ಕೋಟಿ ಜನಸಂಖ್ಯೆಯಲ್ಲಿ 100 ಕೋಟಿ ಜನರು ಸರಾಸರಿ 29 ವರ್ಷ ವಯೋಮಾನದವರಾಗಿದ್ದಾರೆ. ಭಾರತ ವಿಶ್ವದಲ್ಲೇ ಅತ್ಯಂತ ಯುವ ದೇಶ. ಇನ್ನೂ 70 ವರ್ಷಗಳ ಕಾಲ ಅದೇ ಸ್ಥಾನದಲ್ಲಿರುತ್ತದೆ.
- ಶಿಶಿರ್ ಕುಮಾರ್ ಬಜೋರಿಯಾ, ಐಐಎಂ ಶಿಲ್ಲಾಂಗ್ ಆಡಳಿತ ಮಂಡಳಿ ಅಧ್ಯಕ್ಷ
ಭಾರತದ ಪ್ರಗತಿ ಹೆಜ್ಜೆ
ಚೀನಾ, ಬ್ರಿಟನ್‌ನಂತಹ ದೇಶಗಳು ಆರ್ಥಿಕ ಹಿಂಜರಿತದಲ್ಲಿ ಸಿಲುಕಿದ್ದರೂ ಭಾರತ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ಜಾಗತಿಕ ನಾಯಕನಾಗುತ್ತಿದೆ. ದೇಶದ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ಐಐಎಂ ಶಿಲ್ಲಾಂಗ್ ವಿದ್ಯಾರ್ಥಿಗಳು ಕೊಡುಗೆ ನೀಡಬೇಕು.
- ರಾಜೀವ್ ಚಂದ್ರಶೇಖರ್, ಕೇಂದ್ರ ಸಚಿವ