ವಿದ್ಯಾರ್ಥಿಗಳ ಪ್ರವೇಶಾತಿ: ಮುಕ್ತ ವಿವಿಗೆ ಟಾರ್ಗೆಟ್‌ ಫಿಕ್ಸ್‌ ಮಾಡಿದ ಡಿಸಿಎಂ

By Suvarna News  |  First Published Jan 18, 2021, 6:41 PM IST

ವಿಶ್ವವಿದ್ಯಾಲಯದ ಭೌತಿಕ ತರಗತಿಗಳ ಆರಂಭಕ್ಕೆ  ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.


ಬೆಂಗಳೂರು/ಮೈಸೂರು, (ಜ.18): ಶೈಕ್ಷಣಿಕವಾಗಿ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಕರ್ನಾಟಕವು ಇದೀಗ ದೂರ ಶಿಕ್ಷಣದಲ್ಲೂ  ಬದಲಾವಣೆಗಳನ್ನು ತಂದಿದ್ದು, ಇನ್ನು ಮುಂದೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮೂಲಕವೇ ದೂರ ಶಿಕ್ಷಣವನ್ನು ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ವಿಶ್ವವಿದ್ಯಾಲಯದ ಭೌತಿಕ ತರಗತಿಗಳ ಆರಂಭಕ್ಕೆ ವರ್ಚಯಲ್‌ ವೇದಿಕೆ ಮೂಲಕ ಬೆಂಗಳೂರಿನಿಂದಲೇ ಚಾಲನೆ ನೀಡಿ ಮಾತನಾಡಿದ ಡಿಸಿಎಂ, ಮುಂದಿನ ದಿನಗಳಲ್ಲಿ ಆನ್‌ಲೈನ್‌ ಹಾಗೂ ದೂರಶಿಕ್ಷಣ ವ್ಯವಸ್ಥೆಗೆ ಹೆಚ್ಚೆಚ್ಚು ಬೇಡಿಕೆ ಬರಲಿದೆ. ಬದಲಾವಣೆ ಹಾಗೂ ವಿದ್ಯಾರ್ಥಿಗಳ ಅಪೇಕ್ಷೆ ಮೇರೆಗೆ ಶಿಕ್ಷಣ ನೀಡುವುದು ಸರಕಾರದ ಕರ್ತವ್ಯವೂ ಹೌದು. ಈ ಹಿನ್ನೆಲೆಯಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು. ತಾಂತ್ರಿಕವಾಗಿ ವಿವಿಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.

Tap to resize

Latest Videos

ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ಆನ್‌ಲೈನ್‌ನಲ್ಲಿ: ಯಾವಾಗಿನಿಂದ?

ಈಗಾಗಲೇ ದೂರ ಶಿಕ್ಷಣವನ್ನು ಮೈಸೂರು ಮುಕ್ತ ವಿಶ್ವವಿದ್ಯಾಲಯ ಮಾತ್ರ ನೀಡಬೇಕು ಎಂಬ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಶಿಕ್ಷಣ ಕಾಟಾಚಾರಕ್ಕಲ್ಲ, ಗಂಭೀರವಾಗಿ ಕಲಿಯಬೇಕು. ಯಾವ ಉದ್ದೇಶಕ್ಕಾಗಿ ಈ ವಿವಿ ಸ್ಥಾಪನೆಯಾಗಿತ್ತೋ ಅದೇ ದಿಕ್ಕಿನಲ್ಲಿ ಮುನ್ನಡೆಸಲಾಗುವುದು. ಅದಕ್ಕಾಗಿ ಸರಕಾರ ಎಲ್ಲ ಸಹಕಾರ ನೀಡಲಿದೆ ಎಂದರು ತಿಳಿಸಿದರು.

ಹಾಜರಾತಿ ಕಡ್ಡಾಯ
ಕೋವಿಡ್‌ ಬಂದ ಮೇಲೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಿದ್ದರೂ ಕಲಿಯುವ ವ್ಯವಸ್ಥೆ (ಲರ್ನ್‌ ಫ್ರಂ ಎನಿವೇರ್) ಜನಪ್ರಿಯವಾಗುತ್ತಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸುಗಳ ಮೂಲಕವಾದರೂ ಕಲಿಯಬಹುದು ಅಥವಾ ಆಪ್‌ಲೈನ್‌ ತರಗತಿಗಳ ಮೂಲಕವಾದರೂ ಕಲಿಯಬಹುದು. ಯಾವುದೇ ಆದರೂ ವಿದ್ಯಾರ್ಥಿಯ ಹಾಜರಾತಿ ಮಾತ್ರ ಕಡ್ಡಾಯ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬೇಕು
17,244 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡಲು ಮುಕ್ತ ವಿವಿಯಲ್ಲಿ ಪ್ರವೇಶಾತಿ ಪಡೆದಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಪ್ರಮಾಣ, ಶ್ಲಾಘನೀಯ ಕೂಡ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ದೂರಶಿಕ್ಷಣಕ್ಕೆ ಯಾವುದೇ ರೀತಿಯ ಗಡಿಗಳು ಇರುವುದಿಲ್ಲ. ಈ ವಿವಿ ರಾಷ್ಟ್ರಮಟ್ಟದಲ್ಲೂ ಬೆಳೆಯಲು ಅವಕಾಶವಿದೆ, ವ್ಯಾಪ್ತಿಯೂ ವಿಸ್ತರಿಸಲಿದೆ. 2022ಕ್ಕೆ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 50,000 ಹಾಗೂ 2023ನೇ ಸಾಲಿಗೆ 1 ಲಕ್ಷ ದಾಟಬೇಕು. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇರಬೇಕು. ಈ ನಿಟ್ಟಿನಲ್ಲಿ ವಿವಿ ಎಲ್ಲ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಲಪತಿ ಡಾ.ವಿದ್ಯಾಶಂಕರ್ ಅವರಿಗೆ ಡಿಸಿಎಂ ಸೂಚನೆ ನೀಡಿದರು.

ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವ್ಯಾಪಕವಾದ ಪ್ರಚಾರವನ್ನು ಕೈಗೊಳ್ಳಿ. ಸಾಧ್ಯವಾದರೆ ಪ್ರತಿಷ್ಠಿತ ಅಥವಾ ಜನಪ್ರಿಯ ಸಿಲೆಬ್ರಿಟಿಯೊಬ್ಬರಿಂದ ದೃಶ್ಯ ರೂಪದ ಜಾಹೀರಾತನ್ನು ಸಿದ್ಧಪಡಿಸಿ ಪ್ರಚಾರ ಮಾಡಿ. ವಿಶೇಷ ಅಭಿಯಾನವನ್ನು ಮಾಡಿ. ಆ ಮೂಲಕ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವೂ ಒಳ್ಳೆಯ ಶೈಕ್ಷಣಿಕ ಬ್ರ್ಯಾಂಡ್‌ ಆಗಿ ಹೊರಹೊಮ್ಮಲಿ. ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಡಾ.ಅಶ್ವತ್ಥನಾರಾಯಣ ಸಲಹೆ ನೀಡಿದರು.

ಅಷ್ಟೇ ಅಲ್ಲದೆ, ಇತರೆ ವಿವಿಗಳು, ಜಿಟಿಟಿಸಿ ಮುಂತಾದ ಶೈಕ್ಷಣಿಕ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಿ ಎಂದೂ ಡಿಸಿಎಂ ಹೇಳಿದರು.

ವಿವಿ ಕುಲಪತಿ ಡಾ.ವಿದ್ಯಾಶಂಕರ್‌, ಕುಲಸಚಿವ ಡಾ.ಲಿಂಗರಾಜ ಗಾಂಧಿ, ಮೌಲ್ಯಮಾಪನ ಕುಲಸಚಿವ ಅಶೋಕ ಕಾಂಬ್ಳೆ ಸೇರಿದಂತೆ ವಿವಿಯ ಉನ್ನತ ಅಧಿಕಾರಿಗಳು ಮೈಸೂರಿನಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

click me!