ಕಾಲೇಜೇನೋ ಶುರು ಆಯ್ತು, ಪಾಠ ಮಾಡೋರೇ ಇಲ್ಲ

By Kannadaprabha NewsFirst Published Jan 17, 2021, 8:42 AM IST
Highlights

ರಾಜ್ಯದ ಅನೇಕ ಸರ್ಕಾರಿ ಕಾಲೇಜುಗಳು ಈಗಾಗಲೇ ತರಗತಿ ಆರಂಭಿಸಿವೆ. ಆದರೆ ಇನ್ನೂ ಉಪನ್ಯಾಸಕರ ನೇಮಕ ಮಾತ್ರ ಆಗಿಲ್ಲ. ಇದರಿಂದ ವಿದ್ಯಾರ್ತೀಗಳು ಪಾಠ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ.

ವರದಿ : ಸೋಮರಡ್ಡಿ ಅಳವಂಡಿ

ಕೊಪ್ಪಳ (ಜ.17): ಈಗಾಗಲೇ ರಾಜ್ಯ ಸರ್ಕಾರದ ಆದೇಶದನ್ವಯ ಪದವಿ ಕಾಲೇಜುಗಳು ಪ್ರಾರಂಭವಾಗಿದೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ತರಗತಿ ನಡೆಸಲು ಉಪನ್ಯಾಸಕರೇ ಇಲ್ಲ! ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶ ಹೊರಡಿಸದೇ ಪದವಿ ತರಗತಿಗಳನ್ನು ಆರಂಭಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದ್ದು ಸರ್ಕಾರದ ಈ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.

ರಾಜ್ಯಾದ್ಯಂತ ಒಟ್ಟು 412 ಸರ್ಕಾರಿ ಪದವಿ ಕಾಲೇಜುಗಳಿದ್ದು ಇಲ್ಲಿನ ಕಾಯಂ ಉಪನ್ಯಾಸಕರ ಸಂಖ್ಯೆ ಶೇ.20ರಷ್ಟೂಇಲ್ಲ. ಬಹುತೇಕ ಎಲ್ಲ ಕಡೆಗಳಲ್ಲೂ ಕಾಯಂ ಉಪನ್ಯಾಸಕರ ಕೊರತೆಯನ್ನು ನೀಗಿ ಪಾಠ ಮಾಡುವುದು ಶೇ.80ರಷ್ಟಿರುವ ಅತಿಥಿ ಉಪನ್ಯಾಸಕರೇ. ಈ ಹಿಂದೆಯೇ ಪ್ರಾರಂಭವಾಗಿರುವ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೇ ಎಲ್ಲ ವಿಷಯಗಳನ್ನು ಬೋಧನೆ ಮಾಡಲು ಆಗುತ್ತಿಲ್ಲ. ಅಂಥದ್ದರಲ್ಲಿ ಈಗ ಮತ್ತೆ ಪದವಿ ಕಾಲೇಜಿನ ಎಲ್ಲ ತರಗತಿಗಳನ್ನು ಪ್ರಾರಂಭಿಸಿರುವುದರಿಂದ ಪಾಠ ಮಾಡಲು ಉಪನ್ಯಾಸಕರ ಕೊರತೆ ಎದುರಾಗಿದೆ.

ಅತಿಥಿ ಉಪನ್ಯಾಸಕರಿಲ್ಲದೆ ತರಗತಿ ಅಸಾಧ್ಯ:

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 4500 ಕಾಯಂ ಉಪನ್ಯಾಸಕರಿದ್ದು, ಇನ್ನುಳಿದ ಕಾರ್ಯಭಾರವನ್ನು 14400 ಅತಿಥಿ ಉಪನ್ಯಾಸಕರೇ ನಿಭಾಯಿಸುತ್ತಾರೆ. ಅಂದರೆ ಹೆಚ್ಚಿನ ಎಲ್ಲ ಸರ್ಕಾರಿ ಪದವಿ ಕಾಲೇಜು ನಡೆಯುತ್ತಿರುವುದೇ ಪ್ರತಿವರ್ಷವೂ ತಾತ್ಕಾಲಿಕವಾಗಿ ನೇಮಕವಾಗುವ ಅತಿಥಿ ಉಪನ್ಯಾಸಕರಿಂದ. ಇದೀಗ ಕಾಲೇಜು ಪ್ರಾರಂಭ ಮಾಡಿರುವ ಸರ್ಕಾರ ಈವರೆಗೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿಲ್ಲ. ಕಳೆದ ವರ್ಷ ಪಾಠ ಮಾಡಿದವರನ್ನು ಮುಂದುವರಿಸುವಂತೆ ಆದೇಶವನ್ನೂ ಹೊರಡಿಸಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಒಟ್ಟು 3.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ 4500 ಕಾಯಂ ಉಪನ್ಯಾಸಕರು ಪಾಠ ಮಾಡುವುದು ಅಸಾಧ್ಯವಾದ ಮಾತು. ಈ ಕಾರಣದಿಂದ ಬಹುತೇಕ ಕಾಲೇಜುಗಳಲ್ಲಿ ಪದವಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ.

ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ ..

ಕೊಪ್ಪಳ ನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ 2800 ವಿದ್ಯಾರ್ಥಿಗಳಿದ್ದು ಇಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ ಕೇವಲ 18. ಅದರಲ್ಲಿಯೂ ಕರ್ತವ್ಯದಲ್ಲಿರುವ ಕಾಯಂ ಉಪನ್ಯಾಸಕರ ಸಂಖ್ಯೆ 10 ಮಾತ್ರ. ಉಳಿದಂತೆ ಎಲ್ಲ ತರಗತಿಗಳನ್ನು 80 ಅತಿಥಿ ಉಪನ್ಯಾಸಕರೇ ನಿಭಾಯಿಸುತ್ತಾರೆ. ಇದೀಗ ಅವರಿಲ್ಲದೆ ಕೇವಲ 10 ಕಾಯಂ ಉಪನ್ಯಾಸಕರಿಂದ ಅಷ್ಟುತರಗತಿಗಳನ್ನು ಪ್ರಾರಂಭಿಸುವುದಾದರೂ ಹೇಗೆ ಎಂದು ಇಲ್ಲಿನ ಹೆಸರು ಹೇಳಲಿಚ್ಛಿಸದ ಕಾಯಂ ಉಪನ್ಯಾಸಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ವಿವಿ ಮತ್ತು ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಿಗೂ ಮಾಹಿತಿ ನೀಡಲಾ​ಗಿದೆ. ಇನ್ನೆರಡು ದಿನ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ ಎನ್ನುತ್ತಾರೆ.

ಖಾಸಗಿ ಕಾಲೇಜುಗಳಲ್ಲೂ ಇದೇ ವ್ಯಥೆ: ಇನ್ನು ಅನುದಾನಿತ ಮತ್ತು ಅನುದಾನರಹಿತ ಕಾಲೇಜುಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿಯೂ ಕೋವಿಡ್‌ ಸಂಕಷ್ಟದಿಂದಾಗಿ ಆರ್ಥಿಕ ಹೊರೆ ಕಡಿಮೆ ಮಾಡಲು ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಿದ್ದಾರೆ. ಈಗ ಪುನಃ ನೇಮಕ ಮಾಡಿಕೊಂಡಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಏಕಾಏಕೀ ಸರ್ಕಾರಿ ಪದವಿ ಕಾಲೇಜಿನ ಅಷ್ಟೂತರಗತಿಗಳನ್ನು ಪ್ರಾರಂಭಿಸಿದ್ದರಿಂದ ಅಲ್ಲಿ ಪಾಠ ಮಾಡುವವರೇ ಇಲ್ಲದಂತಾಗಿದೆ. ಇದರಿಂದ ವಿಧಿಯಿಲ್ಲದೆ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಂದು, ವಾಪಸ್‌ ಹೋಗಿದ್ದಾರೆ. ಉಪನ್ಯಾಸಕರೇ ಇಲ್ಲದೆ ಕಾಲೇಜು ಪ್ರಾರಂಭಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೀಘ್ರ ನೇಮಕವಾಗಲಿ

ಶೇ.20ರಷ್ಟುಕಾಯಂ ಉಪನ್ಯಾಸಕರು ಅಷ್ಟುತರಗತಿಗಳಿಗೂ ಪಾಠ ಮಾಡಲು ಹೇಗೆ ಸಾಧ್ಯ? ಸರ್ಕಾರ ತಕ್ಷಣ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು.

-ಡಾ.ವೀರಣ್ಣ ಸಜ್ಜನ್‌ ಜಿಲ್ಲಾಧ್ಯಕ್ಷರು ಅತಿಥಿ ಉಪನ್ಯಾಸಕರ ಸಂಘ ಕೊಪ್ಪಳ

ಮಾಹಿತಿ ನೀಡಿದ್ದೇವೆ

ನಮ್ಮಲ್ಲಿ ಕೇವಲ 10 ಕಾಯಂ ಉಪನ್ಯಾಸಕರಿದ್ದು, 80 ಅತಿಥಿ ಉಪನ್ಯಾಸಕರಿದ್ದಾರೆ. ಅತಿಥಿ ಉಪನ್ಯಾಸಕರನ್ನು ಇನ್ನೂ ನೇಮಿಸಿಕೊಂಡಿಲ್ಲವಾದ್ದರಿಂದ ತರಗತಿಗಳನ್ನು ನಡೆಸಲು ಕಷ್ಟವಾಗುತ್ತದೆ. ಈ ಮಾಹಿತಿಯನ್ನು ಈಗಾಗಲೇ ಇಲಾಖೆಗೆ ಸಲ್ಲಿಸಿದ್ದೇವೆ.

-ಮಾರುತೇಶ, ಪ್ರಾಚಾರ್ಯರು ಸರ್ಕಾರಿ ಪದವಿ ಕಾಲೇಜು ಕೊಪ್ಪಳ

ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕ ಬಳಿಕ ನೇಮಕ

ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಈಗಾಗಲೇ ಆದೇಶ ಮಾಡಲಾಗಿದೆ. ಇನ್ನು ಪದವಿ ಕಾಲೇಜುಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಆರ್ಥಿಕ ಇಲಾಖೆ ಅನುಮೋದನೆಯೊಂದಿಗೆ ಅನುಮತಿ ಸಿಗಬಹುದು. ಸಿಕ್ಕ ಕೂಡಲೇ ನೇಮಕಾತಿಗೆ ಆದೇಶಿಸಲಾಗುವುದು.

- ಪಿ. ಪ್ರದೀಪ್‌, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು

click me!