ವಿದ್ಯಾಕಾಶಿಯಲ್ಲಿ ತ್ರಿಬಲ್ ಐಟಿ ಕ್ಯಾಂಪಸ್ ಉದ್ಘಾಟನೆಗೆ ಸಜ್ಜು
ತ್ರಿಬಲ್ ಐಟಿ ಕ್ಯಾಂಪಸ್ ಪರಿಶೀಲಿಸಿದ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಅವರೇ ಆಗಮಿಸಲಿದ್ದಾರೆ ಎಂಬ ಮಾಹಿತಿ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ...
ಧಾರವಾಡ, (ಮಾ.29) : ಧಾರವಾಡ ಅಂದಾಕ್ಷಣ ಎಲ್ಲರೂ ಹೇಳೋದು ವಿದ್ಯಾಕಾಶಿ ಅಂತಾನೆ. ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇಯಾದ ಹಿರಿಮೆ ಹೊಂದಿರೋ ಧಾರವಾಡಕ್ಕೆ ಈಗ ಮತ್ತೊಂದು ಶೈಕ್ಷಣಿಕ ಕಿರೀಟ್ ರೂಪಗೊಂಡಿದೆ. ಅದು ಕೂಡ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ವಿದ್ಯಾಸಂಸ್ಥೆ ಅನ್ನೋದು ಮತ್ತೊಂದು ವಿಶೇಷವಾಗಿದೆ. ವಿಶಾಲವಾದ ಜಾಗದಲ್ಲಿ ಸುಂದರವಾಗಿ ನಿರ್ಮಿತವಾಗಿರೋ ಈ ಕಟ್ಟಡಗಳು. ಅದರ ಮಧ್ಯದಲ್ಲಿ ಕಂಗೊಳಿಸುತ್ತಿರೋ ಮುಖ್ಯ ಕಟ್ಟಡ.
ಇದನ್ನು ನೋಡಿದಾಗ ಯಾವುದೋ ಐಟಿ ಕ್ಯಾಂಪಸ್ ಅನಿಸದೇ ಇರದು. ಇದು ಧಾರವಾಡದಲ್ಲಿ ನಿರ್ಮಾಣಗೊಂಡಿರುವ ಭಾರತೀಯ ಮಾಹಿತಿ ತಂತ್ರಜಾನ ಸಂಸ್ಥೆ ಅಂದ್ರೆ ತ್ರಿಬಲ್ ಐಟಿ ಕಟ್ಟಡ. ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿಯ ಸುಮಾರು 60 ಎಕರೆ ಪ್ರದೇಶದಲ್ಲಿ 114 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದೆ. 2019 ರಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಹುಬ್ಬಳ್ಳಿಯಲ್ಲಿ ಶಿಲಾನ್ಯಾಸ ನೇರವೇರಿಸಿದ್ದರು. ಸದ್ಯ ಈ ಕ್ಯಾಂಪಸ್ ಉದ್ಘಾಟನೆಗೆ ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇಡೀ ಕ್ಯಾಂಪಸ್ ಪರಿಶೀಲನೆ ನಡೆಸಿದ್ದು, ಇನ್ನೊಂದು ತಿಂಗಳಿನಲ್ಲಿ ಈ ಕ್ಯಾಂಪಸ್ ನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಅವರೇ ಆಗಮಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ- 2022 ಪ್ರಶಸ್ತಿ.!
ಈಗಾಗಲೇ ಐಐಐಟಿ ಕೆಲಸ ಶುರು ಮಾಡಿ ಏಳು ವರ್ಷಗಳೇ ಕಳೆದಿವೆ ಆರಂಭದಿಂದಲೂ ಈ ಸಂಸ್ಥೆ ಹುಬ್ಬಳ್ಳಿಯ ಐಟಿ ಪಾರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದೇ ಇರೋದ್ರಿಂದ ಸಾಕಷ್ಟು ಸಮಸ್ಯೆ ಆಗಿತ್ತು. ಇದೀಗ ಕಟ್ಟಡ ಸಜ್ಜಾಗಿದ್ದು, ಈ ಸಲ ಒಟ್ಟು 834 ವಿದ್ಯಾರ್ಥಿಗಳಿದ್ದಾರೆ. ಇದೀಗ ಆನ್ ಲೈನ್ ಕ್ಲಾಸ್ ನಡೆಸಲಾಗುತ್ತಿದ್ದು, ಮೊದಲನೇ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 400ರಷ್ಟಿದ್ದು, ಅವರೆಲ್ಲ ಈ ಮಾರ್ಚ್ ನಿಂದ ಈ ಕ್ಯಾಂಪಸ್ನಲ್ಲಿಯೇ ಭೌತಿಕ ತರಗತಿಗಳಿಗೆ ಆಗಮಿಸಲಿದ್ದಾರಂತೆ. ಉಳಿದವರ ಕ್ಲಾಸ್ ಏಪ್ರಿಲ್‌ನಿಂದ ಆರಂಭಗೊಳ್ಳಲಿದೆ. ಇನ್ನು ಸುಮಾರು 800 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಒಂದೇ ಕ್ಯಾಂಪಸ್ ನಲ್ಲಿ ಕಚೇರಿ, ತರಗತಿ ಹಾಗೂ ಹಾಸ್ಟೆಲ್ ಇರೋದ್ರಿಂದ ತುಂಬಾನೇ ಅನುಕೂಲವಾಗಲಿದೆ.
ಅಲ್ಲದೇ ಕಚೇರಿಗೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ನೇಮಕದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನೊಂದೆಡೆ ಈ ತ್ರಿಬಲ್ ಐಟಿಗೆ ಕಟ್ಟಡ ನಿರ್ಮಾಣಕ್ಕೆ ಮಾತ್ರವೇ ಸರ್ಕಾರ ಅನುದಾನ ನೀಡಿದ್ದು, ಉಳಿದಂತೆ ಮುಂದೆ ಸರ್ಕಾರದಿಂದ ಯಾವುದೇ ಅನುದಾನ ಬರೋದಿಲ್ಲ. ವಿದ್ಯಾರ್ಥಿಗಳು ನೀಡುವ ಶುಲ್ಕದ ಜೊತೆಗೆ ಇವರೇ ವಿವಿಧ ಆವಿಷ್ಕಾರಗಳನ್ನು ಮಾಡಿಕೊಂಡು ಸಂಸ್ಥೆ ನಡೆಸಲು ಅನುದಾನ ಕ್ರೋಢೀಕರಿಸಿಕೊಳ್ಳಬೇಕಿದೆ.
ಒಟ್ಟಾರೆಯಾಗಿ ಈಗಾಗಲೇ ಮೂರು ವಿಶ್ವವಿದ್ಯಾಲಯಗಳಿಂದಾಗಿ ಶಿಕ್ಷಣ ಕಾಶಿ ಅನ್ನೋ ಖ್ಯಾತಿ ಪಡೆದುಕೊಂಡಿರೋ ಧಾರವಾಡದ ಕೀರ್ತಿಗೆ ಈಗ ಕಿರೀಟದಂತೆ ತ್ರಿಬಲ್ ಐಟಿ ಸಜ್ಜುಗೊಂಡಿದ್ದು, ಮತ್ತೊಂದೆಡೆ ಅತ್ತ ಕೇಂದ್ರ ಸರ್ಕಾರದ ಮಹತ್ವದ ಸಂಸ್ಥೆಯಾಗಿರೋ ಐಐಟಿ ಕ್ಯಾಂಪಸ್ ನಿರ್ಮಾಣವೂ ಭರದಿಂದ ಸಾಗಿದ್ದು, ಧಾರವಾಡಕ್ಕೀಗ ಬಂಪರ್ ಶೈಕ್ಷಣಿಕ ಸಂಸ್ಥೆಗಳೆ ಸಿಕ್ಕಂತಾಗಿದೆ.....