* ಭಾರತೀಯರನ್ನು ಉಕ್ರೇನ್ ಯೂನಿವರ್ಸಿಟಿಗಳು ಮರೆತಿಲ್ಲ
* ಉಕ್ರೇನ್ ಯುದ್ಧ ಭೂಮಿಯಿಂದ ಬಂದ ಭಾರತೀಯರನ್ನ ವಿಚಾರಿಸಿದ ಉಕ್ರೇನ್ ವಿವಿಗಳು
* ಹೇಗಿದ್ದೀರಿ? ಹೇಗೆ ತಲುಪಿದಿರಿ? ಸೌಖ್ಯವೇ? ಎಂದು ವಿಚಾರಿಸುತ್ತಿವೆ.
ಶಿವಮೊಗ್ಗ, (ಮಾ.15): ವೈದ್ಯಕೀಯ ವಿದ್ಯಾಾಭ್ಯಾಸಕ್ಕೆಂದು ಕಾಣದ ಊರಿಗೆ ತೆರಳಿ ಉಕ್ರೇನ್ ಯುದ್ಧ ಭೂಮಿಯಿಂದ ಗಾಬರಿ, ಆತಂಕ, ಭಯದಿಂದ ಓಡೋಡಿ ತವರಿಗೆ ಬಂದಿದ್ದ ಭಾರತೀಯರನ್ನು ಅಲ್ಲಿನ ಯೂನಿವರ್ಸಿಟಿಗಳು ಮರೆತಿಲ್ಲ. ಹೇಗಿದ್ದೀರಿ? ಹೇಗೆ ತಲುಪಿದಿರಿ? ಸೌಖ್ಯವೇ? ಎಂದು ವಿಚಾರಿಸಲಾರಂಭಿಸಿವೆ.
ಆನ್‌ಲೈನ್ ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ಸಂಪರ್ಕ ಜಾಲದಲ್ಲಿ ಹೆಣೆದು ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು ಮಾತನಾಡಿಸಲಾರಂಭಿಸಿದ್ದಾರೆ. ವಿದ್ಯಾರ್ಥಿಗಳಲ್ಲಿನ ಪ್ಯಾನಿಕ್ ಮನಃಸ್ಥಿತಿಯಿಂದ ಹೊರ ತರಲು ಪ್ರಯತ್ನ ನಡೆಸಿದ್ದಾರೆ. ಸಹಾಯಕ್ಕೆ ನಿಂತಿದ್ದಾರೆ.
ಉಕ್ರೇನ್‌ನಿಂದ ಹಿಂತಿರುಗಿದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವೈದ್ಯಕೀಯ ಆಯೋಗ ತೀರ್ಮಾನಿಸಲಿದೆ: ಡಾ.ಕೆ.ಸುಧಾಕರ್
ಶಿವಮೊಗ್ಗದ ವಿದ್ಯಾನಗರದ ಜಯಶೀಲಾ ಅವರು ಉಕ್ರೇನ್‌ನ ಚರ್ನೊವಿಸ್ಕಿ ಪ್ರದೇಶದ ಬುಕವೇನಿಯನ್ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎರಡನೇ ವರ್ಷದ ವೈದ್ಯಕೀಯ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದರು. ಯುದ್ಧ ಶುರುವಾಗುತ್ತಿದ್ದಂತೆ ತಾಯ್ನಾಡಿಗೆ ಆಗಮಿಸಿ ನೆಮ್ಮದಿ ಗಳಿಸಿದ್ದರು.
ಇದು ಉಕ್ರೇನ್‌ನ ಪಶ್ಚಿಮ ಭಾಗದಲ್ಲಿದ್ದು, ಯುದ್ಧ ಪೀಡಿತ ಪ್ರದೇಶದಿಂದ ಸ್ವಲ್ಪ ದೂರದಲ್ಲಿದೆ. ಇಲ್ಲಿ ಆತಂಕ ಕಡಿಮೆ. ಆದರೂ ಎಲ್ಲ ವಿದ್ಯಾರ್ಥಿಗಳೂ ಅಲ್ಲಿಂದ ಮರಳಿದ್ದರು. ಮಂಗಳವಾರ ಉಕ್ರೇನ್ ಯೂನಿವರ್ಸಿಟಿಯಿಂದ ಹಲವಾರು ವಿದ್ಯಾರ್ಥಿಗಳಿಗೆ ಕರೆ ಮಾಡಿ ಆನ್‌ಲೈನ್ ಮೀಟಿಂಗ್‌ನಲ್ಲಿ ಸೇರ್ಪಡೆಗೊಳ್ಳುವಂತೆ ಸೂಚಿಸಲಾಗಿತ್ತು. ಮಧ್ಯಾಹ್ನ 1 ಗಂಟೆಯಿಂದ ಆನ್‌ಲೈನ್ ಮೀಟಿಂಗ್ ಆರಂಭವಾಗಿದ್ದು, ಮಂಗಳವಾರ ಕೇವಲ ಕುಶಲೋಪರಿಗಾಗಿ ಮೀಸಲಿಡಲಾಗಿತ್ತು. ಪ್ರತಿಯೊಬ್ಬ ವಿದ್ಯಾಾರ್ಥಿಯನ್ನೂ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಮಾತನಾಡಿ ಹೇಗಿದ್ದೀರಿ? ಎಂದು ಕುಶಲೋಪರಿ ವಿಚಾರಿಸಿದರಲ್ಲದೆ, ಯಾವುದೇ ಅಪಾಯವಿಲ್ಲದೆ ಸುಖವಾಗಿ ತಲುಪಿದಿರಲ್ಲವೇ? ಎಂಬಿತ್ಯಾದಿ ಮಾತುಗಳು ನಡೆದವು.
ಆನ್‌ಲೈನ್ ಪಾಠ ಯಾವಾಗ ಶುರು ಮಾಡಬಹುದು ಎಂಬುದರ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ ಎಂದು ಜಯಶೀಲ ಅವರ ಸೋದರ ತಿಳಿಸಿದ್ದಾರೆ. ಜಯಶೀಲಾ ಅವರು ಮಂಗಳವಾರ ಮಧ್ಯಾಹ್ನದಿಂದಲೂ ಆನ್‌ಲೈನ್‌ನಲ್ಲಿಯೇ ಇದ್ದಾರೆ ಎಂದೂ ಹೇಳಿದರು.
ಆದರೆ ಸೊರಬನ ಅಧೀಶ್ ಅವರಿಗೆ ಅಲ್ಲಿನ ವಿವಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಇವರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕೇಂದ್ರ ಭಾಗವಾದ ಕಾರ್‌ಕೀವ್ ಪ್ರದೇಶದ ಯೂನಿವರ್ಸಿಟಿಯಲ್ಲಿ ಇದ್ದವರು. ಅಲ್ಲಿ ವಿವಿ ಇದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲಿಂದ ವಿವಿ ಸಿಬ್ಬಂದಿ ಕೂಡ ವಲಸೆ ಹೋಗಿರಬಹುದು ಎನ್ನುತ್ತಾರೆ ಅಧೀಶ್. ಈ ತಿಂಗಳಾಂತ್ಯದಲ್ಲಿ ಆನ್‌ಲೈನ್ ತರಗತಿ ನಡೆಯಬಹುದೆಂಬ ಒಂದು ಸಣ್ಣ ಮಾಹಿತಿ ಇದೆ. ಇದರ ಹೊರತಾಗಿ ಏನೂ ಇಲ್ಲ ಎನ್ನುತ್ತಾರೆ.
ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿ ಪ್ರಾರಂಭ
ಯುದ್ಧ ಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಂತರ ಅತಂತ್ರ ಭವಿಷ್ಯದ ಭಯದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಹಲವಾರು ಉಕ್ರೇನಿಯನ್ ವೈದ್ಯಕೀಯ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದು ಕೊಂಚ ನಿರಾಳ ತಂದಿದೆ. ಆದಾಗ್ಯೂ, ಪ್ರಾಯೋಗಿಕ ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲದಿರುವುದಕ್ಕೆ ಕೆಲವು ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ.
ರಷ್ಯಾದ ಪಡೆಗಳ ನಿರಂತರ ಶೆಲ್ ದಾಳಿಯ ನಡುವೆ ಉಕ್ರೇನ್‌ನಲ್ಲಿ ದೈಹಿಕ ತರಗತಿಗಳನ್ನು ನಡೆಸುವುದು ಅಸಾಧ್ಯವಾದ ಕಾರಣ, ಪಶ್ಚಿಮ ಉಕ್ರೇನ್‌ನಲ್ಲಿರುವ ಹಲವಾರು ವೈದ್ಯಕೀಯ ವಿಶ್ವವಿದ್ಯಾಲಯಗಳು ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ.
ಭಾರತೀಯ ವಿದ್ಯಾರ್ಥಿಗಳ ಪ್ರಕಾರ ಮುಂಬರುವ ದಿನಗಳಲ್ಲಿ ಇತರ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪುನರಾರಂಭಿಸಲು ಯೋಜಿಸಿವೆ. ಇನ್ನು ಮುಂದುವರಿದ ಶೆಲ್ ದಾಳಿಯ ನಡುವೆ ತಮ್ಮ ಶಿಕ್ಷಕರು ತಮ್ಮ ಮನೆ ಅಥವಾ ಸುರಕ್ಷಿತ ಸ್ಥಳಗಳಿಂದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಗಳು ಹೇಳಿದ್ದಾರೆ.
ಡ್ಯಾನಿಲೊ ಹ್ಯಾಲಿಟ್ಸ್ಕಿ ಎಲ್ವಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ, ಇವಾನೊ-ಫ್ರಾಂಕಿವ್ಸ್ಕ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ, ವಿನ್ನಿಟ್ಸಿಯಾ ನ್ಯಾಷನಲ್ ಪಿರೊಗೊವ್ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಬೊಗೊಮೊಲೆಟ್ಸ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ.
ಡ್ಯಾನಿಲೋ ಹ್ಯಾಲಿಟ್ಸ್ಕಿ ಎಲ್ವಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಪ್ರಥಮ ವರ್ಷದ ವಿದ್ಯಾರ್ಥಿ ಕನಿಷ್ಕ್ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಗಳಿರುವುದರಿಂದ ತರಗತಿಗಳು ಪುನರಾರಂಭಗೊಂಡಿರುವುದಕ್ಕೆ ಸಮಾಧಾನಗೊಂಡಿದ್ದಾರೆ