ಅಲ್ಲಿ ಮಸಾಜ್, ಇಲ್ಲಿ ಬಿಟ್ಟಿ ಚಾಕರಿ: ಇಬ್ಬರು ಟೀಚರ್‌ಗಳ ವಿಡಿಯೋ ವೈರಲ್

By Suvarna News  |  First Published Jul 28, 2022, 6:24 PM IST

ಉತ್ತರಪ್ರದೇಶದ ಶಿಕ್ಷಕಿಯರಿಬ್ಬರು ಪುಟ್ಟ ಮಕ್ಕಳನ್ನು ತಮ್ಮ ಬಿಟ್ಟಿ ಚಾಕರಿ ಕೆಲಸಕ್ಕೆ ಬಳಸಿಕೊಂಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಲಕ್ನೋ: ಗುರು ಎಂದರೆ ಮಕ್ಕಳಿಗೆ ಸರಿ ದಾರಿ ತೋರುವ ಮೊದಲ ಮಾರ್ಗದರ್ಶಕ. ಆದರೆ ಇಲ್ಲೊಬ್ಬರು ಶಿಕ್ಷಕಿ ಮಕ್ಕಳನ್ನು ನಡು ನೀರಿನಲ್ಲಿ ನಿಲ್ಲಿಸಿ ತಾನು ಪಾರಾಗುವ ತಂತ್ರ ಮಾಡಿದ್ದು, ಶಿಕ್ಷಕಿಯ ಈ ನಡೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ದೇಶಾದ್ಯಂತ ಮಳೆಯ ಅವಾಂತರಕ್ಕೆ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೇ ರೀತಿ ಉತ್ತರಪ್ರದೇಶದ ಲಕ್ನೋದಲ್ಲಿಯೂ ಮಳೆಯ ಅವಾಂತರಕ್ಕೆ ಶಾಲಾ ಆವರಣ ನೀರಿನಿಂದ ತುಂಬಿದೆ. ನೀರಿನಿಂದ ತುಂಬಿದ ಶಾಲಾ ಆವರಣಕ್ಕೆ ಟೀಚರ್ ಬರುವಂತಾಗಲು ಮಕ್ಕಳು ಆಕೆ ಬರುವ ದಾರಿಯುದ್ಧಕ್ಕೂ ಕುರ್ಚಿಗಳನ್ನು ಇಟ್ಟು ಹಿಡಿದುಕೊಂಡು ನಿಂತಿದ್ದಾರೆ. ಟೀಚರ್ ಈ ಕುರ್ಚಿಗಳ ಮೇಲೆ ಹೆಜ್ಜೆ ಇಟ್ಟು ಶಾಲೆಯ ಆವರಣ ತಲುಪಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕಿಯ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಶಿಕ್ಷಕಿಯನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆ. 

ಇನ್ನು ಶಿಕ್ಷಕಿ ಹೀಗೆ ಮಕ್ಕಳು ಹಿಡಿದ ಕುರ್ಚಿಯ ಮೇಲೇರಿ ಬರುತ್ತಿರುವುದನ್ನು ಶಾಲೆಯ ಆವರಣದಲ್ಲೇ ಇದ್ದ ಯಾರೋ ಒಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಉತ್ತರಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಷ್ಟದ ಸಮಯದಲ್ಲಿ ಮಕ್ಕಳನ್ನು ರಕ್ಷಿಸಬೇಕಾದ ಶಿಕ್ಷಕಿ ಅವರನ್ನೇ ನಡುನೀರಿನಲ್ಲಿ ಬಿಟ್ಟು ತಾನು ಆರಾಮವಾಗಿ ಇರುವುದಕ್ಕೆ ಜನ ಸಿಟ್ಟಾಗಿದ್ದಾರೆ. 

Wait! This isn't musical chairs. Students help the teacher cross the rain-filled path, getting drenched themselves in Mathura. pic.twitter.com/7q48MrlNmV

— Payal Mohindra (@payal_mohindra)

Tap to resize

Latest Videos

ಇತ್ತ ಉತ್ತರಪ್ರದೇಶದ ಹರ್ದೊಯಿಯಲ್ಲಿಯೂ ಶಿಕ್ಷಕಿಯೊಬ್ಬಳ ಬೇಜಾವಾಬ್ದಾರಿ ನಡೆಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿ ಶಾಲಾ ಸಮಯದಲ್ಲಿ ಮಕ್ಕಳಿಂದ ತನ್ನ ಕೈ ಒತ್ತಿಸಿಕೊಂಡಿದ್ದು, ಇದರ ವಿಡಿಯೋವೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟ ಬಾಲಕನೋರ್ವ ತನ್ನ ಪುಟ್ಟ ಕೈಗಳಿಂದ ಶಿಕ್ಷಕಿಯ ಕೈಯನ್ನು ಒತ್ತುತ್ತಿದ್ದರೆ, ತರಗತಿಯಲ್ಲಿರುವ ಇತರ ಮಕ್ಕಳು ತಮ್ಮದೇ ಆಟಾಟೋಪದಲ್ಲಿ ತೊಡಗಿದ್ದಾರೆ. 

ಈ ವಿಡಿಯೋವನ್ನು ತರಗತಿಯಲ್ಲೇ ಇದ್ದ ಯಾರೋ ಚಿತ್ರೀಕರಿಸಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಶಿಕ್ಷಕಿಯೊಬ್ಬರು ಕುರ್ಚಿಯೊಂದರಲ್ಲಿ ಆರಾಮವಾಗಿ ಒರಗಿ ಕುಳಿತುಕೊಂಡು ನೀರಿನ ಬಾಟಲ್‌ನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ನೀರು ಕುಡಿಯುತ್ತಿದ್ದಾಳೆ. ಇದೇ ಸಮಯಕ್ಕೆ ಬಾಲಕ ಆಕೆಯ ಕೈಗೆ ಮಸಾಜ್ ಮಾಡುತ್ತಿದ್ದಾನೆ. ಇದೇ ಸಮಯಕ್ಕೆ ಶಿಕ್ಷಕಿ ಮತ್ತೊಬ್ಬ ವಿದ್ಯಾರ್ಥಿಯನ್ನು ಕೂಗಿ ಕರೆಯುತ್ತಾಳೆ. 

ಮಗನನ್ನು ಬಿಡುವಂತೆ ಬೇಡಿಕೊಂಡ ತಾಯಿಯಿಂದ ಮಸಾಜ್‌ ಮಾಡಿಸಿಕೊಂಡ ಪೊಲೀಸ್‌

ಹೀಗೆ ಮಕ್ಕಳಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿಯನ್ನು ಉರ್ಮಿಳಾ ಸಿಂಗ್ ಎಂದು ಗುರುತಿಸಲಾಗಿದೆ. ಈಕೆ ಬವನ್‌ ಬ್ಲಾಕ್‌ನ ಮೂಲ ಶಿಕ್ಷಣ ವಿಭಾಗದಲ್ಲಿ ಬರುವ ಪೊಖರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂಲ ಶಿಕ್ಷಾ ಅಧಿಕಾರಿ ಈ ಬಗ್ಗೆ ತನಿಖೆ ನಡೆಸುವಂತೆ ವಿಭಾಗೀಯ ಶಿಕ್ಷಣ ಅಧಿಕಾರಿಗೆ ಆದೇಶ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅವರು ಆದೇಶಿಸಿದ್ದಾರೆ. 

ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ ಮಾಡಿಸಿದ ಟೀಚರ್: ಪ್ರಶ್ನೆ ಮಾಡಿದ್ದಕ್ಕೆ ಅಡುಗೆ ಸಹಾಯಕಿಗೆ ಕಿರುಕುಳ!

ಬಿಇಒ ಬಿಪಿ ಸಿಂಗ್ ಶಿಕ್ಷಕಿಯನ್ನು ಈಗಾಗಲೇ ಅಮಾನತುಗೊಳಿಸಿದ್ದಾರೆ. ಕೆಲ ಸ್ಥಳೀಯ ಮೂಲಗಳ ಪ್ರಕಾರ ಹರ್ದೋಯಿಯ ಈ ಶಿಕ್ಷಕಿ ಮಕ್ಕಳಿಗೆ ಪಾಠ ಕಲಿಸುವ ಬದಲು ಅವರನ್ನೇ ಬೆದರಿಸಿ ತನ್ನ ಸೇವೆ ಮಾಡಿಸಿಕೊಳ್ಳುತ್ತಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಅವರ ಆರೋಪಕ್ಕೆ ಈಗ ಈ ವಿಡಿಯೋ ಪುರಾವೆ ಒದಗಿಸಿದೆ. ಒಟ್ಟಿನಲ್ಲಿ ಶಿಕ್ಷಕಿಯರ ಈ ವರ್ತನೆ ಶಿಕ್ಷಕ ಸಮುದಾಯಕ್ಕೆ ಕಪ್ಪು ಚುಕ್ಕೆ ಬೀಳುವಂತೆ ಮಾಡಿದೆ. 
 

click me!