ಖಾಸಗಿ ಶಾಲೆ, ಕಾಲೇಜುಗಳಲ್ಲಿ ಫೇಲಾದವರು ಅದೇ ಶಾಲೆ, ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅವಕಾಶವಿಲ್ಲ. ಬದಲಿಗೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಮರು ದಾಖಲಾತಿ ಪಡೆದು ಮತ್ತೊಂದು ವರ್ಷ ತರಗತಿ ವಿದ್ಯಾರ್ಥಿಯಾಗಿಯೇ ವ್ಯಾಸಂಗ ಮಾಡಬಹುದು.
ಬೆಂಗಳೂರು(ಜು.30): ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತಿರ್ಣರಾದ ರಾಜ್ಯ ಪಠ್ಯಕ್ರಮದ ತರಗತಿ (ರೆಗ್ಯುಲರ್) ವಿದ್ಯಾರ್ಥಿಗಳು ಇಷ್ಟಪಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಯಾವುದೇ ಸರ್ಕಾರಿ ಪ್ರೌಢಶಾಲೆ/ ಪಿಯು ಕಾಲೇಜಿನಲ್ಲಿ ಅದೇ ತರಗತಿಗಳಿಗೆ ಮತ್ತೆ ದಾಖಲಾಗಿ ವ್ಯಾಸಂಗ ಮಾಡಬಹುದು ಎಂದು ಸರ್ಕಾರ ಆದೇಶಿಸಿದೆ.
ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಖಾಸಗಿ ಶಾಲೆ, ಕಾಲೇಜುಗಳಲ್ಲಿ ಫೇಲಾದವರು ಅದೇ ಶಾಲೆ, ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅವಕಾಶವಿಲ್ಲ. ಬದಲಿಗೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಮರು ದಾಖಲಾತಿ ಪಡೆದು ಮತ್ತೊಂದು ವರ್ಷ ತರಗತಿ ವಿದ್ಯಾರ್ಥಿಯಾಗಿಯೇ ವ್ಯಾಸಂಗ ಮಾಡಬಹುದು.
ಎಸ್‌ಎಸ್‌ಎಲ್‌ಸಿ 'ಪರೀಕ್ಷೆ 2' ಫಲಿತಾಂಶ: ಕೇವಲ 31% ಮಕ್ಕಳು ಪಾಸ್..!
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತಿರ್ಣ ವಿದ್ಯಾರ್ಥಿಗಳಲ್ಲಿ ಮತ್ತೆ ಪರೀಕ್ಷೆ ಬರೆಯುವವರ ಸಂಖ್ಯೆ ಹಾಗೂ ಪರೀಕ್ಷೆ ಬರೆದರೂ ಪಾಸಾಗುವವರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇರುವ ಕಾರಣ ಇದನ್ನು ಹೆಚ್ಚಿಸುವ ಸಲುವಾಗಿ ಸರ್ಕಾರ ಇಂತಹದ್ದೊಂದು ಅವಕಾಶ ಕಲ್ಪಿಸಿರುವುದಾಗಿ ಹೇಳಿದೆ. ಆದರೆ, ಇದಕ್ಕೆ ಕೆಲ ನಿಬಂಧನೆಗಳನ್ನು ವಿಧಿಸಿದೆ.
ಎಸ್‌ಎಸ್‌ಎಲ್‌ಸಿ ರಿಸಲ್ಟ್ ಕುಸಿತ: ಶಿಕ್ಷಕರ ಬಡ್ತಿ ತಡೆ ಹಿಂಪಡೆದು ಆದೇಶ
ಈ ರೀತಿ ಮತ್ತೆ 10 ಮತ್ತು 12ನೇ ತರಗತಿಗೆ ದಾಖಲಾತಿ ಪಡೆಯುವವರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸುವ ಪರೀಕ್ಷೆ 1, ಪರೀಕ್ಷೆ 2 ಮತ್ತು ಪರೀಕ್ಷೆ 3ರ ಪೈಕಿ ಕನಿಷ್ಠ ಪರೀಕ್ಷೆ 1 ಮತ್ತು 2ನ್ನು ಬರೆದು ಅನುತ್ತೀರ್ಣವಾಗಿರಬೇಕು. ಮರು ದಾಖಲಾತಿ ಪಡೆದವರು ಇತರೆ ವಿದ್ಯಾರ್ಥಿಗಳಂತೆ ನಿತ್ಯ ತರಗತಿಗೆ ಹಾಜರಾಗಿ ಎಲ್ಲ ವಿಷಯಗಳ ಪೂರ್ಣಾವಧಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಎಲ್ಲಾ ಆರೂ ವಿಷಯಗಳಿಗೂ ಮತ್ತೆ ಪರೀಕ್ಷೆ ಬರೆಯಬೇಕು ಎಂದು ಸೂಚಿಸಲಾಗಿದೆ.
ಇನ್ನು, 10ನೇ ತರಗತಿಗೆ ಮರು ದಾಖಲಾತಿ ಪಡೆಯುವ ಇಂತಹ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ, ಸಾಕ್ಸ್, ಮಧ್ಯಾಹ್ನದ ಬಿಸಿಯೂಟ ಸೇರಿ ಇತರೆ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ಜೊತೆಗೆ ಇವರಿಗೆ ಪ್ರವೇಶ ಶುಲ್ಕದ ವಿನಾಯಿತಿ ಇರುತ್ತದೆ. ಈ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು, ಉಪನ್ಯಾಸಕರು ವಿಶೇಷ ಕಾಳಜಿ ತೋರಿಸಿ ಧನಾತ್ಮಕ ಮನೋಭಾವ ಉಂಟುಮಾಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ.