ತಾಲೂಕಿನ ತಂಬ್ರಹಳ್ಳಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಎಲ್. ರೆಡ್ಡಿ ನಾಯ್ಕ, 2016- 17ನೇ ಸಾಲಿನಿಂದ ಉರ್ದು ಶಾಲೆಯಲ್ಲಿ ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ- ಯುಕೆಜಿ ಶಿಕ್ಷಣವನ್ನು ಪ್ರಾರಂಭಿಸಿ, ಬಡ ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದಾರೆ.
ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ (ಸೆ.5) : ತಾಲೂಕಿನ ತಂಬ್ರಹಳ್ಳಿ ಉರ್ದು ಕಿರಿಯ ಪ್ರಾಥಮಿಕ ಶಾಲೆ(Tambrahalli Urdu Junior Primary School)ಯ ಮುಖ್ಯಗುರು ಎಲ್. ರೆಡ್ಡಿ ನಾಯ್ಕ, 2016- 17ನೇ ಸಾಲಿನಿಂದ ಉರ್ದು ಶಾಲೆಯಲ್ಲಿ ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ- ಯುಕೆಜಿ ಶಿಕ್ಷಣವನ್ನು ಪ್ರಾರಂಭಿಸಿ, ಬಡ ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದಾರೆ.
2016ರಲ್ಲಿ ಎಲ್‌ಕೆಜಿ ಶಿಕ್ಷಣವನ್ನು ಶಾಲೆಯಲ್ಲಿ ಆರಂಭಿಸಿದಾಗ ಎಸ್‌ಡಿಎಂಸಿಯವರ ಸಹಕಾರದೊಂದಿಗೆ ಆರಂಭದಲ್ಲಿ ಶಿಕ್ಷಕಿಯೋರ್ವರನ್ನು ನೇಮಿಸಿಕೊಂಡು ತಾವೇ ವೇತನ ನೀಡಿದ್ದಾರೆ. ಪ್ರಸ್ತುತ ಎಲ್‌ಕೆಜಿಯಲ್ಲಿ 31 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಾಲಕರ ಸಭೆಗಳ ಮೂಲಕ, ಮನೆಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕರೆತ್ತಾರೆ.
ಬದುಕಿನ ದಾರಿ ತೋರುವ ಗುರುವೆಂಬ ದೀಪಸ್ತಂಭ: ಶಿಕ್ಷಕರ ದಿನದ ಇತಿಹಾಸ, ಮಹತ್ವ ಗೊತ್ತಾ?
ಅಧ್ಯಯನ ಕೇಂದ್ರ:
ಈ ಶಾಲೆಯಲ್ಲಿ 101 ವಿದ್ಯಾರ್ಥಿಗಳು ದಾಖಲಾಗಿದ್ದು, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಕ್ಕಳು ದಾಖಲಾದ ಕಿರಿಯ ಪ್ರಾಥಮಿಕ ಉರ್ದು ಶಾಲೆ ಎನಿಸಿದೆ. ಪಟ್ಟಣದ ತಮ್ಮ ಮನೆಯಲ್ಲಿ ಮಕ್ಕಳ ಅಧ್ಯಯನ ಕೇಂದ್ರ ಸ್ಥಾಪಿಸಿ ಬಡ ಮಕ್ಕಳಿಗೆ ಶಾಲಾ ಬಿಡುವಿನ ವೇಳೆಯಲ್ಲಿ ಉಚಿತ ತರಬೇತಿ ನೀಡುತ್ತಾರೆ.
ಯಾವುದೇ ಮಗು ಒಂದು ದಿನ ಶಾಲೆ ಬಿಟ್ಟರೂ ಅಂತಹ ಮಗುವಿನ ಮನೆಗೆ ಹೋಗಿ ಶಾಲೆಗೆ ಕರೆತರುತ್ತಾರೆ. ತಮ್ಮ ಬೈಕ್‌ನಲ್ಲಿ ಮಕ್ಕಳನ್ನು ಶಾಲೆಗೆ ಕರೆತರುತ್ತಾರೆ. ಬಡವರÜ ಮಕ್ಕಳ ಉನ್ನತ ಶಿಕ್ಷಣಕ್ಕೆ ಪಠ್ಯಪುಸ್ತಕ, ಪರಿಕರಗಳನ್ನು ಸ್ವಂತ ಖರ್ಚಿನಲ್ಲಿ ಕೊಡಿಸುತ್ತಾರೆ.
ಧಾರ್ಮಿಕ ಸೌಹಾರ್ದತೆ:
ತಾವು ಕೆಲಸ ಮಾಡುತ್ತಿರುವ ಶಾಲೆ ಉರ್ದು ಶಾಲೆಯಾದರೂ ಹಿಂದೂ- ಮುಸ್ಲಿಮರ ಹಬ್ಬವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸುವ ಮೂಲಕ ಮಕ್ಕಳಲ್ಲಿ ಭಾತೃತ್ವ ಬೆಳೆಸಿದ್ದಾರೆ. ಶಾಲೆಯಲ್ಲಿ ರಕ್ಷಾಬಂಧನ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಹಬ್ಬವನ್ನು ಆಚರಿಸುತ್ತಾ ಎಲ್ಲರು ಸಮಾನರು ಎಂಬುದನ್ನು ಭಿತ್ತಿದ್ದಾರೆ. ಶಾಲೆಯಲ್ಲಿ ಹಿಂದೂ ಮುಸ್ಲಿಂ ಮಕ್ಕಳು ಓದುತ್ತಿದ್ದು, ಧಾರ್ಮಿಕ ಸಾಮರಸ್ಯ ಸಾರಿದ್ದಾರೆ. ಮಕ್ಕಳಿಗೆ ಮೌಲ್ಯಾದರ್ಶಗಳನ್ನು ಅತ್ಯಂತ ಕ್ರಿಯಾಶೀಲರಾಗಿ ತುಂಬುತ್ತಿರುವುದು ಅತ್ಯಂತ ಗಮನಾರ್ಹವಾದುದು.
ಖಾಸಗಿಗೆ ಪೈಪೋಟಿ:
ಶಾಲಾ ಅವಧಿಯ ನಂತರವೂ ಪ್ರತಿದಿನ ಒಂದು ಗಂಟೆ ಹೆಚ್ಚಿನ ಸಮಯ ಅಭ್ಯಾಸ ಮಾಡಿಸಿ ವಿಶೇಷ ಬೋಧನೆ ಕೈಗೊಳ್ಳುವರು. 2022- 23ನೇ ಸಾಲಿನ ಐದನೇ ತರಗತಿಯ 12 ಮಕ್ಕಳಲ್ಲಿ 11 ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿರುವುದು ಇವರ ಕಾರ್ಯವೈಖರಿಯ ಮೇಲೆ ಬೆಳಕು ಚೆಲ್ಲುತ್ತದೆ. ಬೇಸಿಗೆ ಶಿಬಿರ, ಮಕ್ಕಳ ಹಬ್ಬ, ವಿಜ್ಞಾನ ವಸ್ತುಪ್ರದರ್ಶನ, ಇಂಗ್ಲಿಷ್ ಮೇಳ, ಪಾಲಕರ ಚಟುವಟಿಕೆ ಕಾರ್ಯಾಗಾರ ಇತ್ಯಾದಿ ಚಟುವಟಿಕೆಗಳ ಮೂಲಕ ಸರ್ವೋತೋಮುಖ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿ ಖಾಸಗಿ ಶಾಲೆಗಳಿಗೆ ಸಮರ್ಥ ಪೈಪೋಟಿಯೊಡ್ಡಿದ್ದಾರೆ.
.2 ಲಕ್ಷ ವಾಗ್ದಾನ:
ಶಾಲೆಗೆ ಕಟ್ಟಡ ಮತ್ತು ನಿವೇಶನದ ಕೊರತೆ ಇದ್ದು, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಯಾಗಿದೆ. ಉರ್ದು ಶಾಲೆಯ ಉನ್ನತಿಗೆ ಗ್ರಾಮದಲ್ಲಿ ನಿವೇಶನ ಖರೀದಿಸಿದರೆ, ಅದಕ್ಕೆ .2 ಲಕ್ಷರೂ ದೇಣಿಗೆ ನೀಡುವುದಾಗಿ ಎಂದು ರೆಡ್ಡಿನಾಯ್ಕ ವಾಗ್ದಾನ ಮಾಡಿದ್ದಾರೆ.
ನೀವು ಕಲಿಸಿದ ಪಾಠ ನಾನೆಂದು ಮರೆಯುವುದಿಲ್ಲ: ಅಕ್ಷರ ಕಲಿಸಿದ ನಿಮ್ಮ ನೆಚ್ಚಿನ ಗುರುಗಳಿಗೆ ವಿಶ್ ಮಾಡಿ!
ತಂಬ್ರಹಳ್ಳಿ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು ಹಾಗೂ ಮಕ್ಕಳ ಪಾಲಕರ ಸಹಭಾಗಿತ್ವದಲ್ಲಿ ಉರ್ದುಶಾಲೆಯ ಶೈಕ್ಷಣಿಕ ಉನ್ನತಿಗೆ ಶ್ರಮಿಸಲಾಗುತ್ತಿದೆ. ಸೆ. 29ರಂದು ಜಿಲ್ಲಾಮಟ್ಟದ ವಿಶೇಷ ಇಂಗ್ಲಿಷ್ ಮೇಳ ಹಮ್ಮಿಕೊಳ್ಳಲಾಗಿದೆ. ಶಾಲಾ ನಿವೇಶನಕ್ಕೆ .2 ಲಕ್ಷ ದೇಣಿಗೆ ನೀಡಲು ಸಿದ್ಧನಿದ್ದೇನೆ. ಬಡಮಕ್ಕಳ ಶೈಕ್ಷಣಿಕ ಅಭಿವೃಧ್ದಿಯೇ ನನ್ನ ಮೂಲಗುರಿ.
ಎಲ್.ರೆಡ್ಡಿನಾಯ್ಕ ಮುಖ್ಯಗುರುಗಳು ಉರ್ದುಶಾಲೆ ತಂಬ್ರಹಳ್ಳಿ
ಮಕ್ಕಳ ಮೇಷ್ಟು್ರ ಎಲ್. ರೆಡ್ಡಿ ನಾಯ್ಕ ಅಪಾರ ಶೈಕ್ಷಣಿಕ ಕಾಳಜಿ ಹೊಂದಿದ್ದು, ಶಿಕ್ಷಣ ಪ್ರೇಮಿಯಾಗಿದ್ದಾರೆ. ಎಲ್‌ಕೆಜಿ ಯುಕೆಜಿ ಹಾಗೂ ಶಾಲೆಗೆ ನಿವೇಶನ ಒದಗಿಸಲು ಪ್ರಸ್ತಾವನೆ ಬಂದರೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಿವೇಶನ ಒದಗಿಸಲಾಗುವುದು.
ಯುವರಾಜ ನಾಯ್ಕ, ಡಿಡಿಪಿಐ ವಿಜಯನಗರ ಜಿಲ್ಲೆ