ದೀಪ ಹಿಡಿಯೋ ಹುಡುಗನ ಬಾಳಲ್ಲಿ ಬೆಳಕು, 1947ರ ನಂತ್ರ ಇದೇ ಮೊದಲ ಬಾರಿ 10ನೇ ತರಗತಿ ಪಾಸ್ ಆದ ಯುವಕ

Published : May 07, 2025, 11:03 AM ISTUpdated : May 07, 2025, 11:05 AM IST
ದೀಪ ಹಿಡಿಯೋ ಹುಡುಗನ ಬಾಳಲ್ಲಿ ಬೆಳಕು, 1947ರ ನಂತ್ರ ಇದೇ ಮೊದಲ ಬಾರಿ 10ನೇ ತರಗತಿ ಪಾಸ್ ಆದ ಯುವಕ

ಸಾರಾಂಶ

ಬಾರಾಬಂಕಿ ಜಿಲ್ಲೆಯ ನಿಜಾಮ್‌ಪುರ ಗ್ರಾಮದ ರಾಮ್‌ಕೆವಾಲ್, 1947ರ ನಂತರ ಹತ್ತನೇ ತರಗತಿ ಪಾಸಾದ ಮೊದಲ ವಿದ್ಯಾರ್ಥಿ. ಕೂಲಿ ಮಾಡಿ ಓದಿದ ರಾಮ್‌ಕೆವಾಲ್ ಶೇ.55 ಅಂಕ ಗಳಿಸಿ ಊರಿಗೆ ಕೀರ್ತಿ ತಂದಿದ್ದಾರೆ. ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿ. ಜಿಲ್ಲಾಧಿಕಾರಿಗಳು ರಾಮ್‌ಕೆವಾಲ್‌ರನ್ನು ಸನ್ಮಾನಿಸಿದ್ದಾರೆ.

ಉತ್ತರ ಪ್ರದೇಶ (Uttar Pradesh )ದ ಬಾರಾಬಂಕಿ ಜಿಲ್ಲೆಯ ನಿಜಾಮ್ಪುರ ಗ್ರಾಮ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. 1947 ರ ನಂತ್ರ ಈ ಗ್ರಾಮದಲ್ಲಿ ಇದೇ ಮೊದಲ ಬಾರಿ ವಿದ್ಯಾರ್ಥಿಯೊಬ್ಬ ಹತ್ತನೇ ತರಗತಿ ಪರೀಕ್ಷೆ ಪಾಸ್ ಆಗಿದ್ದಾನೆ.  ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ರಾಮ್ಕೆವಾಲ್ ಪಾತ್ರರಾಗಿದ್ದಾರೆ. ರಾಮ್ಕೆವಾಲ್ (Ramkewal) ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಕೂಲಿ ಮಾಡ್ತಾ ಓದು ಮುಂದುವರೆಸಿದ್ದ ರಾಮ್ಕೆವಾಲ್, ಆಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದಲ್ಲದೆ, ನೂರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. 

ಸಾಧನೆ ಹಿಂದಿದೆ ಕಠಿಣ ಪರಿಶ್ರಮ : ನಿಜಾಮ್ ಪುರ ಗ್ರಾಮದಲ್ಲಿ ಸುಮಾರು 30 ಮನೆಗಳಿವೆ.  ಇಲ್ಲಿ ದಲಿತ ಸಮುದಾಯಕ್ಕೆ ಸೇರಿದ 300 ಜನರು ವಾಸ ಮಾಡ್ತಿದ್ದಾರೆ. ನಾಲ್ಕು ಸಹೋದರ ಸಹೋದರಿಯರಿರುವ ಒಂದು ಮನೆಯಲ್ಲಿ ರಾಮ್ಕೆವಾಲ್ ಬೆಳೆಯುತ್ತಿದ್ದಾರೆ. ಜಗದೀಶ್ ಮಗ, 15 ವರ್ಷದ ರಾಮ್ಕೆವಾಲ್ , ಹತ್ತನೇ ತರಗತಿ ಎನ್ನುವ ಕಾರಣಕ್ಕೆ ಮನೆಯಲ್ಲಿ ಕುಳಿತು ಇಡೀ ದಿನ ಓದಿದ ವಿದ್ಯಾರ್ಥಿಯಲ್ಲ.  ಶಾಲೆಗೆ ಹೋಗುವ ಜೊತೆಗೆ ಮನೆಯವರಿಗೆ ಆರ್ಥಿಕ ಸಹಾಯ ಮಾಡ್ತಿದ್ದಾರೆ. ಮದುವೆ ಮೆರವಣಿಗೆಯಲ್ಲಿ ತಲೆಯ ಮೇಲೆ  ದೀಪ  ಹೊತ್ತುಕೊಂಡು ಹೋಗುವ ಕೂಲಿ ಕೆಲಸವನ್ನು ರಾಮ್ಕೆವಾಲ್ ಮಾಡ್ತಾರೆ. ಸಿಕ್ಕ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ದಿನಕ್ಕೆ 250 ರಿಂದ 300 ರೂಪಾಯಿ ಸಂಪಾದನೆ ಮಾಡ್ತಾರೆ. ಕೆಲಸದ ಕಾರಣ ತಡ ರಾತ್ರಿ ಮನೆಗೆ ಬರ್ತಿದ್ದ ರಾಮ್ಕೆವಾಲ್, ಓದುವ ಛಲ ಬಿಡಲಿಲ್ಲ. ರಾತ್ರಿ ಎರಡು ಗಂಟೆಗಳ ಕಾಲ ಸೋಲಾರ್ ಲೈಟ್ ನಲ್ಲಿ ಓದುತ್ತಿದ್ದರು. ರಾಮ್ಕೆವಾಲ್ ತಮ್ಮ ಓದಿನ ಹಣವನ್ನು ತಾವೇ ಹೊಂದಿಸಿಕೊಂಡಿದ್ದರು. ಕೂಲಿ ಮಾಡಿ ಸಂಪಾದನೆ ಮಾಡಿದ ಹಣವನ್ನು ಅವರು  ಪುಸ್ತಕಗಳ ಖರೀದಿಗೆ ಬಳಸುತ್ತಿದ್ದರು. ಶಾಲೆ ಶುಲ್ಕ 2100 ರೂಪಾಯಿಯನ್ನು ಕೂಡ ರಾಮ್ಕೆವಾಲ್ತಾವೇ ಸಂಪಾದನೆ ಮಾಡಿದ್ದರು.  

ರಾಮ್ಕೆವಾಲ್ ಗಳಿಸಿದ ಮಾರ್ಕ್ಸ್ ಎಷ್ಟು? : ರಾಮ್ಕೆವಾಲ್, ಅಹ್ಮದ್ಪುರದ ಸರ್ಕಾರಿ ಇಂಟರ್ ಕಾಲೇಜಿನಲ್ಲಿ ಓದಿದ್ದಾರೆ. ಯುಪಿ ಬೋರ್ಡ್ ನ 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 55  ಅಂಕ  ಗಳಿಸುವ ಮೂಲಕ ಊರಿನ ಹೆಸರು ಇತಿಹಾಸ ಪುಟ ಸೇರುವಂತೆ ಮಾಡಿದ್ದಾರೆ.  ನಿಜಾಮ್ ಪುರ ಗ್ರಾಮದಲ್ಲಿ ಹೆಚ್ಚಿನ ಜನರು 8 ಮತ್ತು 9 ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ.  ರಾಮ್ಕೆವಾಲ್ ಈ ಗಡಿದಾಟಿ ಮುಂದೆ ಹೋಗಿದ್ದು, 600 ಅಂಕಕ್ಕೆ 322 ಅಂಕ ಗಳಿಸುವ ಮೂಲಕ ಹತ್ತನೇ ತರಗತಿ ಪಾಸ್ ಆಗಿದ್ದಾರೆ.   ರಾಮ್ಕೆವಾಲ್ ಅವರನ್ನು ಅನೇಕರು ಅಣುಕಿಸಿದ್ದರಂತೆ. ಹತ್ತನೇ ತರಗತಿ ಪಾಸ್ ಆಗಲು ಸಾಧ್ಯವಿಲ್ಲ ಎಂದಿದ್ದರಂತೆ. ಅವರ ನಕಾರಾತ್ಮಕ ಕಮೆಂಟ್ ಗಳನ್ನು ಚಾಲೆಂಜ್ ಆಗಿ ಸ್ವೀಕರಿಸಿದ ರಾಮ್ಕೆವಾಲ್, ಹತ್ತನೇ ತರಗತಿ ಪಾಸ್ ಆಗಿದ್ದಾರೆ. 

ರಾಮ್ಕೆವಾಲ್ ಪಾಸ್ ಆದ ವಿಷ್ಯ ಕೇಳಿ ಊರಿನಲ್ಲಿ ಸಂಭ್ರಮ ಮನೆ ಮಾಡಿದೆ. ರಾಮ್ಕೆವಾಲ್ ಗೆ ನಾಯಕರು ಮತ್ತು ಅಧಿಕಾರಿಗಳಿಂದ ಗೌರವ ಮತ್ತು ಪ್ರಶಂಸೆ ಸಿಕ್ತಿದೆ. ಜಿಲ್ಲಾಧಿಕಾರಿಗಳು ರಾಮ್ಕೆವಾಲ್  ಮತ್ತು ಕುಟುಂಬಸ್ಥರನ್ನು ಗೌರವಿಸಿದ್ದಾರೆ. ಈ ಸಮಯದಲ್ಲಿ ರಾಮ್ ಕೇವಲ್ ಬೂಟ್ ಧರಿಸಿದ್ದು ಗಮನ ಸೆಳೆದಿದೆ. ರಾಮ್ಕೆವಾಲ್ ತನ್ನ ಜೀವನದಲ್ಲಿ ಇದೇ ಮೊದಲ ಬಾರಿ ಬೂಟ್ ಧರಿಸಿದ್ದರು. ರಾಮ್ಕೆವಾಲ್ ಊರಿನ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಅವರ ಮಾರ್ಗದಲ್ಲಿ ಮತ್ತಷ್ಟು ಮಕ್ಕಳು ಸಾಗಲಿದ್ದಾರೆ ಎಂಬ ನಿರೀಕ್ಷೆ ಇದೆ. 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ