ಶಿಕ್ಷಕರಿಗೆ 5000 ಪರಿಹಾರ : ಯಾವ ಶಿಕ್ಷಕರಿಗೆ..?

By Kannadaprabha NewsFirst Published Jul 3, 2021, 7:16 AM IST
Highlights
  • ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆ
  • 2.06 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ತಲಾ 5000 ರು. ಪರಿಹಾರ
  • ಪರಿಹಾರ ಪ್ಯಾಕೇಜ್‌ ನೀಡಲು ಸರ್ಕಾರ 103 ಕೋಟಿ ರು. ಅನುದಾನ ಬಿಡುಗಡೆ 

 ಬೆಂಗಳೂರು (ಜು.03):  ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳ 2.06 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ತಲಾ 5000 ರು. ಪರಿಹಾರ ಪ್ಯಾಕೇಜ್‌ ನೀಡಲು ಸರ್ಕಾರ 103 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಕೊರೋನಾ ಪಿಡುಗಿನಿಂದಾಗಿ ಶಾಲೆಗಳು ಆರಂಭವಾಗದೆ ಸಮರ್ಪಕ ಬೋಧನಾ ಚಟುವಟಿಕೆ ನಡೆಯದ ಕಾರಣ ಶಾಲೆಗಳಿಂದ ವೇತನ ಕಡಿತದಿಂದ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ 22,065 ನೋಂದಾಯಿತ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಶೀಘ್ರ 5000 ರು. ಪರಿಹಾರ ದೊರೆಯಲಿದೆ.

ಶಿಕ್ಷಕರ ವರ್ಗಾವಣೆಗೆ ಮುಹೂರ್ತ : ಮರು ಅಧಿಸೂಚನೆ ಪ್ರಕಟ ...

103 ಕೋಟಿ ಬಿಡುಗಡೆ:  ಖಾಸಗಿ ಶಾಲೆಗಳಲ್ಲಿ ಒಟ್ಟಾರೆ 1,72,945 ಶಿಕ್ಷಕರು ಮತ್ತು 34,000 ಬೋಧಕೇತರ ಸಿಬ್ಬಂದಿಗಳು ಒಳಗೊಂಡಂತೆ 2,06,945 ಸಿಬ್ಬಂದಿಗಳಿಗೆ ಆರ್ಥಿಕ ಪ್ಯಾಕೇಜ್‌ ನೀಡಲು ಹಣಕಾಸು ಇಲಾಖೆ 103.47 ಕೋಟಿ ರು. ಬಿಡುಗಡೆ ಮಾಡಿದೆ. ಈ ಅನುದಾನವನ್ನು ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಶುಲ್ಕ ಮರುಪಾವತಿಗೆ ಮೀಸಲಿಟ್ಟಿರುವ ಲೆಕ್ಕ ಶೀರ್ಷಿಕೆಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ಸೂಚನೆ ನೀಡಿದ್ದಾರೆ.

2020-21ನೇ ಸಾಲಿನಲ್ಲಿ ಸ್ಟುಡೆಂಟ್‌ ಅಚೀವ್‌ಮೆಂಟ್‌ ಟ್ರಾಕಿಂಗ್‌ ಸಿಸ್ಟಂ (ಎಸ್‌ಎಟಿಎಸ್‌) ಮತ್ತು ಯುಡೈಸ್‌ ತಂತ್ರಾಂಶದಲ್ಲಿ ನೋಂದಾಯಿಸಿರುವ ಅರ್ಹ ಫಲಾನುಭವಿಗಳಿಗೆ ಮಾತ್ರ ಆನ್‌ಲೈನ್‌ ಮೂಲಕ ನೇರ ನಗದು ವರ್ಗಾವಣೆಯಾಗಲಿದೆ. ಈ ಅನುದಾನ ಬಿಡುಗಡೆ ಮಾಡುವ ಮುನ್ನ ಬ್ಯಾಂಕ್‌ ಖಾತೆ ಆಧಾರ್‌ನೊಂದಿಗೆ ಲಿಂಕ್‌ ಆಗಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕಿದೆ ಎಂದು ಸೂಚನೆ ನೀಡಲಾಗಿದೆ.

ಸರ್ಕಾರದ ಸ್ಪಂದನೆ:  ಕೋವಿಡ್‌ನಿಂದ ಶಾಲೆಗಳು ಆರಂಭವಾಗದ ಕಾರಣ ಮಕ್ಕಳ ದಾಖಲಾತಿ ಸಮರ್ಪಕವಾಗಿ ನಡೆಯುತ್ತಿಲ್ಲ. ಪೋಷಕರು ಶುಲ್ಕ ಪಾವತಿಸುತ್ತಿಲ್ಲ. ಹಾಗಾಗಿ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಇತರೆ ವರ್ಗಗಳಿಗೆ ನೀಡುತ್ತಿರುವಂತೆ ಖಾಸಗಿ ಶಾಲಾ ಶಿಕ್ಷಕರಿಗೂ ಪರಿಹಾರ ನೀಡಬೇಕೆಂದು ಖಾಸಗಿ ಶಾಲಾ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದವು. ಈ ಒತ್ತಾಯಕ್ಕೆ ಈಗ ಸರ್ಕಾರ ಸ್ಪಂದಿಸಿದಂತಾಗಿದೆ.

ವೋಚರ್‌ ವೇತನ’ದ ಶಿಕ್ಷಕರಿಗಿಲ್ಲ ಪರಿಹಾರ!

ಖಾಸಗಿ ಶಾಲೆಗಳು ಸರ್ಕಾರಕ್ಕೆ ಲೆಕ್ಕ ನೀಡದೆಯೇ ಸಾಕಷ್ಟುಸಿಬ್ಬಂದಿಗೆ ವೋಚರ್‌ ಮೂಲಕ ವೇತನ ನೀಡುತ್ತಿವೆ. ಅಂತಹ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಮತ್ತು ಸಿಬ್ಬಂದಿಗೆ ಆರ್ಥಿಕ ಪ್ಯಾಕೇಜ್‌ ದೊರೆಯುವುದಿಲ್ಲ ಎಂಬ ಆತಂಕ ಎದುರಾಗಿದೆ. ಹೀಗಾಗಿ ಎಲ್ಲ ರೀತಿಯ ಶಿಕ್ಷಕರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಶಿಕ್ಷಕರ ಸಂಘಟನೆಗಳು ಆಗ್ರಹಿಸಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!