ಶಿಕ್ಷಕರ ವರ್ಗಾವಣೆಗೆ ಮುಹೂರ್ತ : ಮರು ಅಧಿಸೂಚನೆ ಪ್ರಕಟ
- ಕಾರಣಾಂತರಗಳಿಂದ ಬಾಕಿ ಉಳಿದಿದ್ದ ಸರ್ಕಾರಿ ಶಿಕ್ಷಕರ 2020-21ನೇ ಸಾಲಿನ ಸಾಮಾನ್ಯ ವರ್ಗಾವಣೆ
- ವರ್ಗಾವಣೆಗೆ ಕೊನೆಗೂ ಕೂಡಿಬಂದ ಮುಹೂರ್ತ
- ಜು.12ರಿಂದ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ
ಬೆಂಗಳೂರು (ಜು.01): ಅಧಿಸೂಚನೆ ಪ್ರಕಟವಾಗಿ ವರ್ಷವಾಗಿದ್ದರೂ ಕಾರಣಾಂತರಗಳಿಂದ ಬಾಕಿ ಉಳಿದಿದ್ದ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ 2020-21ನೇ ಸಾಲಿನ ಸಾಮಾನ್ಯ ವರ್ಗಾವಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ಜು.12ರಿಂದ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯುವ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್ ವೇಳಾಪಟ್ಟಿಒಳಗೊಂಡಂತೆ ಸುದೀರ್ಘ 21 ಪುಟಗಳ ಮರು ಅಧಿಸೂಚನೆ ಪ್ರಕಟಿಸಿದೆ. ಆ ಪ್ರಕಾರ, 2020ರ ಜು.12ರಿಂದ ಆರಂಭವಾಗುವ ವರ್ಗಾವಣೆ ಪ್ರಕ್ರಿಯೆ ಸುದೀರ್ಘ ಆರು ತಿಂಗಳ ಕಾಲ ನಡೆಯಲಿದ್ದು 2022ರ ಫೆ.14ಕ್ಕೆ ಪೂರ್ಣಗೊಳ್ಳಲಿದೆ.
ಕಾಲೇಜುಗಳಿಗೆ ಬೋಧಕರ ನೇಮಕಕ್ಕೆ ಸರ್ಕಾರ ಅನುಮತಿ ..
2019-20ರಲ್ಲಿ ಕಡ್ಡಾಯ ವರ್ಗಾವಣೆ ಶಿಕ್ಷೆಯಿಂದ ದೂರದ ಜಿಲ್ಲೆ, ತಾಲ್ಲೂಕಿನ ಶಾಲೆಗಳಿಗೆ ಹೋಗಿದ್ದವರಿಗೆ ಆ ಮೊದಲು ಸೇವೆ ಸಲ್ಲಿಸುತ್ತಿದ್ದ ಜಿಲ್ಲೆ, ತಾಲ್ಲೂಕಿನ ಒಳಗೆ ವಾಪಸ್ ಬರಲು ಆದ್ಯತೆ ಮೇಲೆ ಜು.12ರಿಂದ ಸೆಪ್ಟಂಬರ್ 28ರವರೆಗೆ ವಿಶೇಷ ವರ್ಗಾವಣೆ ನಡೆಯಲಿದೆ. ಶಾಲೆಗಳಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಜು.12ಕ್ಕೆ ಪ್ರಕಟಿಸಲಾಗುತ್ತದೆ. ಸೆ.21ಕ್ಕೆ ಕೌನ್ಸೆಲಿಂಗ್ ನಡೆಯಲಿದೆ.
ಅಲ್ಲಿ ಭರ್ತಿಯಾಗಿ ಉಳಿದ ಸ್ಥಳಗಳಿಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿರುವ ಇತರೆ ಶಿಕ್ಷಕರಿಗೆ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆ ನಡೆಯಲಿದ್ದು, ಶಿಕ್ಷಕರು ಕೌನ್ಸೆಲಿಂಗ್ ಮೂಲಕ ತಮಗೆ ಅನುಕೂಲವಾದ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.
2020-21ನೇ ಸಾಲಿನ ಸಾಮಾನ್ಯ ವರ್ಗಾವಣೆ: 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಕಾರಿಗಳ ಸಾಮಾನ್ಯ ವರ್ಗಾವಣೆ ಸಹ ಕೌನ್ಸೆಲಿಂಗ್ ಮೂಲಕ ನಡೆಯಲಿದೆ. 2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜು. 27ರಿಂದ ಆರಂಭವಾಗಿ 2022ರ ಫೆ. 26ರವರೆಗೆ ಕೌನ್ಸೆಲಿಂಗ್ ನಡೆಯಲಿದೆ. ವರ್ಗಾವಣೆ ಪ್ರಕ್ರಿಯೆಯ ಪೂರ್ಣ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ವರ್ಗಾವಣೆ ತಡವಾಗಿದ್ದು ಏಕೆ?
ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ಕಳೆದ ವರ್ಷ ಮಾಚ್‌ರ್‍ನಲ್ಲೇ ವರ್ಗಾವಣೆಗೆ ಸರ್ಕಾರ ಅಧಿಸೂಚನೆ ಪ್ರಕಟಿಸಿತ್ತು. ಆದರೆ, ಅಧಿಸೂಚನೆಯಲ್ಲಿ 2019-20ರಲ್ಲಿ ಕಡ್ಡಾಯ ವರ್ಗಾವಣೆಗೊಂಡ ಶಿಕ್ಷಕರಿಗೆ ತಾವು ಮೊದಲು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆ, ತಾಲ್ಲೂಕಿನೊಳಗೆ ವಾಪಸ್ ಹೋಗಲು ವಿಶೇಷ ಕೌನ್ಸೆಲಿಂಗ್‌ಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಕೆಲ ಶಿಕ್ಷಕರು ಕೆಎಟಿ ಮೊರೆ ಹೋಗಿದ್ದರು. ನ್ಯಾಯಾಲಯ ವರ್ಗಾವಣೆ ಆದೇಶವನ್ನೇ ರದ್ದುಪಡಿಸಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಇದಾದ ಬಳಿಕ ಸರ್ಕಾರ ಶಿಕ್ಷಕರ ವರ್ಗಾವಣೆಗೆ ಸುಗ್ರೀವಾಜ್ಞೆ ಜಾರಿ ಮಾಡಿತ್ತು. ಅದರಂತೆ ಇದೀಗ ಪ್ರಕ್ರಿಯೆ ಆರಂಭವಾಗುತ್ತಿದೆ.