ಹಾವೇರಿ: ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗೆ ಶಿಕ್ಷಕರ ದಿಢೀರ್‌ ಭೇಟಿ, ರಾತ್ರಿಯೂ ಕ್ಲಾಸ್‌!

By Kannadaprabha News  |  First Published Feb 4, 2023, 11:59 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲೆಯಲ್ಲಿ ಶಿಕ್ಷಕರು ಹಲವು ರೀತಿಯ ಕಸರತ್ತು ಆರಂಭಿಸಿದ್ದಾರೆ. ಮಕ್ಕಳ ಮನೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಪರೀಕ್ಷೆ ಮುಗಿಯುವವರೆಗೆ ಮೊಬೈಲ್‌ ಮತ್ತು ಟಿವಿ ಉಪವಾಸ ಕೈಗೊಳ್ಳುವಂತೆ ಪಾಲಕರಲ್ಲಿ ಮನವಿ ಮಾಡುತ್ತಿದ್ದಾರೆ. ವಿಶೇಷವಾಗಿ ಗಂಡು ಮಕ್ಕಳಿಗೆ ರಾತ್ರಿಯೂ ತರಗತಿ ನಡೆಸುತ್ತಿದ್ದಾರೆ.


ನಾರಾಯಣ ಹೆಗಡೆ

ಹಾವೇರಿ (ಫೆ.4) : ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲೆಯಲ್ಲಿ ಶಿಕ್ಷಕರು ಹಲವು ರೀತಿಯ ಕಸರತ್ತು ಆರಂಭಿಸಿದ್ದಾರೆ. ಮಕ್ಕಳ ಮನೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಪರೀಕ್ಷೆ ಮುಗಿಯುವವರೆಗೆ ಮೊಬೈಲ್‌ ಮತ್ತು ಟಿವಿ ಉಪವಾಸ ಕೈಗೊಳ್ಳುವಂತೆ ಪಾಲಕರಲ್ಲಿ ಮನವಿ ಮಾಡುತ್ತಿದ್ದಾರೆ. ವಿಶೇಷವಾಗಿ ಗಂಡು ಮಕ್ಕಳಿಗೆ ರಾತ್ರಿಯೂ ತರಗತಿ ನಡೆಸುತ್ತಿದ್ದಾರೆ.

Tap to resize

Latest Videos

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎರಡು ತಿಂಗಳಷ್ಟೇ ಬಾಕಿಯಿದೆ. 10ನೇ ತರಗತಿಯ ಪಠ್ಯವಸ್ತು ಬೋಧನೆ ಬಹುತೇಕ ಎಲ್ಲ ಶಾಲೆಗಳಲ್ಲಿ ಮುಗಿದಿದ್ದು, ಈಗ ಕಲಿಸಿದ್ದನ್ನು ಪುನರಾವರ್ತನೆ ಮಾಡುವುದು, ಸರಣಿ ಪರೀಕ್ಷೆ ನಡೆಸಿ ವಾರ್ಷಿಕ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸುವ ಕಾರ್ಯ ನಡೆದಿದೆ. ಇದರೊಂದಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಮಕ್ಕಳ ಓದಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಅದಕ್ಕಾಗಿ ವಿನೂತನ ಕ್ರಮ ಅನುಸರಿಸುತ್ತಿದ್ದಾರೆ. ಫಲಿತಾಂಶ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಶ್ರಮ ಹಾಕುತ್ತಿದ್ದಾರೆ.

Guest Lecture: ಫೆ.9ರೊಳಗೆ ಹೊಸ ಅತಿಥಿ ಉಪನ್ಯಾಸಕರ ನೇಮಕ

ಮನೆಮನೆ ಭೇಟಿ

10ನೇ ತರಗತಿ ಫಲಿತಾಂಶ ಹೆಚ್ಚಳಕ್ಕೆ ಡಿಡಿಪಿಐ ಜಗದೀಶ್ವರ್‌ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಶಿಕ್ಷಕರೊಂದಿಗೆ ಸ್ವತಃ ಡಿಡಿಪಿಐ ಕೂಡ ನಿತ್ಯವೂ ಶಾಲಾ ಅವಧಿ ಬಳಿಕ ಮನೆಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಓದಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗಗಳಿಗೆ ತೆರಳಿ ಆಯಾ ಶಾಲಾ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳ ಮನೆಗೆ ದಿಢೀರ್‌ ಭೇಟಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವುದರ ಜತೆಗೆ ಪರೀಕ್ಷಾ ಭಯ ನಿವಾರಣೆಗೂ ಪ್ರಯತ್ನಿಸಲಾಗುತ್ತಿದೆ. ಮಕ್ಕಳ ಅಭ್ಯಾಸದ ಬಗ್ಗೆ ಪ್ರೋತ್ಸಾಹ ನೀಡುವಂತೆ ಈ ವೇಳೆ ಪಾಲಕರಿಗೂ ತಿಳಿಹೇಳಲಾಗುತ್ತಿದೆ. ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುವ ಪಾಲಕರ ಮನವೊಲಿಸಿ ಅಭ್ಯಾಸಕ್ಕೆ ಒತ್ತು ನೀಡುವಂತೆ ಮನವರಿಕೆ ಮಾಡಲಾಗುತ್ತಿದೆ.

ಮೊಬೈಲ್‌ ಉಪವಾಸಕ್ಕೆ ಮನವಿ

ಟಿವಿ ಹಾಗೂ ಮೊಬೈಲ್‌ ಬಳಕೆಯಿಂದ ಮಕ್ಕಳ ಓದಿನ ಮೇಲಿನ ಏಕಾಗ್ರತೆ ಹೋಗುವುದರಿಂದ ಪರೀಕ್ಷೆ ಮುಗಿಯುವವರೆಗೆ ಇವೆರಡೂ ಸಾಧನ ಬಳಸದಂತೆ ಶಿಕ್ಷಕರು ಮನವರಿಕೆ ಮಾಡುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಯ ಮನೆಗೆ ಹೋಗಿ ಪಾಲಕರಲ್ಲೂ ಈ ನಿಯಮ ಪಾಲಿಸುವಂತೆ ಹೇಳುತ್ತಿದ್ದಾರೆ. ಇದಕ್ಕೆ ಬಹುತೇಕ ಪಾಲಕರು ಸಮ್ಮತಿಸಿ ತಾವೂ ಟಿವಿ, ಮೊಬೈಲ್‌ಗಳಿಂದ ದೂರವಿರುತ್ತಿದ್ದಾರೆ.

ಹಾವೇರಿ ತಾಲೂಕಿನ ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ಶಾಲೆಯಲ್ಲಿ ರಾತ್ರಿಯೂ ಕ್ಲಾಸ್‌ ಮಾಡಲಾಗುತ್ತಿದೆ. ಶಾಲಾ ಅವಧಿ ಮುಗಿದ ಬಳಿಕ ಸ್ವಲ್ಪ ಹೊತ್ತು ವಿರಾಮ ನೀಡಿ 6 ಗಂಟೆಯಿಂದ ರಾತ್ರಿ 8.30ರವರೆಗೂ ನಿತ್ಯ ಒಂದೊಂದು ವಿಷಯದ ಬಗ್ಗೆ ಚರ್ಚೆ, ಸಂವಾದ ನಡೆಸಲಾಗುತ್ತಿದೆ. ಇದರಲ್ಲಿ ಮಕ್ಕಳು ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ.

ಹಲವು ಕ್ರಮ

ಪ್ರತಿ ದಿನ ಶಾಲಾ ಅವಧಿ ಮುಗಿದ ಬಳಿಕ 10ನೇ ತರಗತಿ ಮಕ್ಕಳಿಗೆ ವಿಶೇಷ ತರಗತಿಯನ್ನು ಹಲವಾರು ಶಾಲೆಗಳಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಇದಲ್ಲದೇ ಸರಣಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರತಿ ವಿಷಯವಾರು ರಸ ಪ್ರಶ್ನೆ ಸ್ಪರ್ಧೆಯನ್ನು ಶಾಲೆ, ಕ್ಲಸ್ಟರ್‌, ತಾಲೂಕು ಹಂತಗಳಲ್ಲಿ ಏರ್ಪಡಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿರುವ ಶಿಕ್ಷಕರು, ಕನಿಷ್ಠ ಪಾಸಿಂಗ್‌ ಅಂಕ ಪಡೆಯಲು ಟಿಫ್ಸ್‌ ಹೇಳಿಕೊಡುತ್ತಿದ್ದಾರೆ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಡಲಾಗುತ್ತಿದೆ.

Education: ಬೋರ್ಡ್‌ ಪರೀಕ್ಷೆ ವಿರುದ್ಧ ಶಾಲೆಗಳು ಹೈಕೋರ್ಟ್‌ಗೆ

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಈ ಸಲ ವೈವಿಧ್ಯಮಯ ಚಟುವಟಿಕೆ ಹಾಕಿಕೊಳ್ಳಲಾಗಿದೆ. ನಿತ್ಯವೂ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಓದಿನ ಪ್ರಗತಿ ಪರಿಶೀಲಿಸಲಾಗುತ್ತಿದೆ. ಮಕ್ಕಳಿಗೆ ಧೈರ್ಯ ಹೇಳಿ, ಪಾಲಕರಿಗೂ ಮಕ್ಕಳ ಅಭ್ಯಾಸದ ಬಗ್ಗೆ ಕಾಳಜಿ ವಹಿಸುವಂತೆ ಹೇಳಲಾಗುತ್ತಿದೆ. ಕೆಲವು ಕಡೆ ಶಿಕ್ಷಕರೇ ಕಾಳಜಿ ವಹಿಸಿ ವಿನೂತನ ಕ್ರಮ ಅನುಸರಿಸುತ್ತಿದ್ದಾರೆ.

-ಬಿ.ಎಸ್‌.ಜಗದೀಶ್ವರ್‌, ಡಿಡಿಪಿಐ ಹಾವೇರಿ

click me!